ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ನಾಯಕರು, ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಏನು ಹೇಳುತ್ತಾರೆ? ಅದು ಇಂದಿರಾ ಗಾಂಧಿಯದ್ದು ಸರ್ವಾಧಿಕಾರಿ ಧೋರಣೆ ಅಲ್ಲವೇ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.ನಗರದ ಬಹಮನಿ ಕೋಟೆಯ ಮುಂಭಾಗದಲ್ಲಿನ ಹಿಂದು ಮಹಾಗಣಪತಿ ವೇದಿಕೆಯಲ್ಲಿ ನಡೆದ ತುರ್ತು ಪರಿಸ್ಥಿತಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಅಂದಿನ ಪ್ರಧಾನಿ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಅಂಬೇಡ್ಕರ್ ಆಶಯಕ್ಕೆ ಧಕ್ಕೆ ತಂದಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸಂವಿಧಾನ ಬದಲಾವಣೆ ಮಾಡುತ್ತೀವಿ ಅಂತ ಹೇಳಿದ್ದು ೧೯೭೬ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ. ಆದರೆ, ಇಂದಿನ ಕಾಂಗ್ರೆಸ್, ಬಿಜೆಪಿ ಸಂವಿಧಾನದ ವಿರೋಧಿ ಎಂಬ ಹೇಳಿಕೆ ನೀಡುತ್ತಾ ಇತರರ ತಲೆ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಸಂವಿಧಾನ ಬದಲಾವಣೆ ಸಾಧ್ಯವೆ ಇಲ್ಲ ಎಂದು ಹೇಳಿದ್ದು ಪ್ರಧಾನಿ ಮೋದಿ ಆದರೆ, ಈ ಮಾತನ್ನು ಯಾರು ಹೇಳಲೆ ಇಲ್ಲ. ಬರೀ ಬದಲಾವಣೆ ಮಾಡ್ತೀನಿ ಅನ್ನೋದು ಮಾತ್ರ ಹೆಚ್ಚು ಹೇಳ್ತಾರೆ. ಇದಕ್ಕೂ ಮುನ್ನ ಇತಿಹಾಸದ ಪುಟ ತೆರೆದು ನೋಡಿದಾಗ ೭೫ ಬಾರಿ ಕಾಂಗ್ರೆಸ್ ಸಂವಿಧಾನದ ತಿದ್ದುಪಡಿ ಮಾಡಿದೆ. ಈ ವಿಷಯದ ಕುರಿತು ಚರ್ಚೆಗೆ ಬಂದರೆ ನಾನು ಸಿದ್ಧನಿದ್ದೇನೆ ಎಂದು ಮುಕ್ತವಾಗಿ ಆಹ್ವಾನ ನೀಡಿದ ಅವರು, ಈ ದೇಶದಲ್ಲಿ ಗಾಂಧಿ ಕುಟುಂಬದ ಒಂದೆ ಮನೆಯಿಂದ ೫೮ ಬಾರಿ ಸಂವಿಧಾನದ ತಿದ್ದುಪಡಿಯಾಗಿದೆ. ಇದರ ಮಧ್ಯೆ ಅಟಲ್ ಬಿಹಾರಿ ವಾಜಪೇಯಿ ಸಹ ಹದಿನಾಲ್ಕು ಬಾರಿ ಸಂವಿಧಾನದ ತಿದ್ದುಪಡಿ ಮಾಡಿದ್ದಾರೆ ಎಂದು ಹೇಳಿದರು.
ಪ್ರಸ್ತುತವಾಗಿರುವ ನರೇಂದ್ರ ಮೋದಿ ಅವರು ಸಹ ೮ ಬಾರಿ ಸಂವಿಧಾನದ ತಿದ್ದುಪಡಿ ಮಾಡಿದ್ದಾರೆ. ಅದರಲ್ಲಿ ಒಂದು ಎಂದರೆ ಮೀಸಲಾತಿಯನ್ನು ಹತ್ತು ವರ್ಷಗಳ ಕಾಲ ಮುಂದುವರೆಸಬೇಕು ಎಂಬುದಾಗಿದೆ. ಈ ದೇಶಗಳ ಪ್ರಜೆಗಳ ಮೇಲೆ ಸರ್ವಾಧಿಕಾರಿಯಂತೆ ತುರ್ತು ಪರಿಸ್ಥಿತಿ ಹಾಕಿ,ಅಂದಿನ ಕಾಲದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಸೊಕ್ಕನ್ನು ಮೆರೆದಿದ್ದಾರೆ ಎಂದರು.ವೇದಿಕೆಯಲ್ಲಿ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ನಾಗೇಂದ್ರ ಕಾಬಡೆ, ವಿಧಾನ ಪರಿಷತ್ ಸದಸ್ಯ ಬಿಜಿ ಪಾಟೀಲ್, ಶಾಸಕ ಬಸವರಾಜ ಮತ್ತಿಮಡು, ಯುವ ಮುಖಂಡ ನಿತೀನ್ ಗುತ್ತೇದಾರ್, ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ್ ಟೆಂಗಳಿ, ಶರಣು ಪಪ್ಪಾ, ಅಂಬಾಜಿ ಶಿವಾಜಿ, ರಮೇಶ್ ಚಿತಕೋಟೆ, ಉಮೇಶ್ ಪಾಟೀಲ್, ಸಿದ್ದರಾಜ ಬಿರಾದಾರ, ಶಿವಯೋಗಿ ನಾಗನಹಳ್ಳಿ, ಪರಮೇಶ್ವರ್ ಆಲಗೂಡ್, ಸಂತೋಷ ಪೂಜಾರಿ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.
ಪ್ರಿಯಾಂಕ್‌ಗೆ ಮಾತಲ್ಲೆ ತಿವಿದ ಸೂಲಿಬೆಲೆ: ಸಂವಿಧಾನವನ್ನು ಎಷ್ಟು ಬಾರಿಯಾದರೂ ತಿದ್ದುಪಡಿ ಮಾಡಿ. ಆದರೆ, ಅದರ ಮೂಲ ಆಶಯವನ್ನು ಯಾರು ಸಹ ಬದಲಾವಣೆ ಮಾಡಬೇಡಿ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಉಲ್ಲೇಖಿಸಿದ್ದಾರೆ. ತುರ್ತು ಪರಿಸ್ಥಿತಿ ಹೇರಿದ ಮದದಲ್ಲಿ ಕಾಂಗ್ರೆಸ್ ಎಷ್ಟರ ಮಟ್ಟಿಗೆ ಹೋಗಿತ್ತು ಅಂದ್ರೆ ಇಂದಿರಾ ಇಸ್ ಇಂಡಿಯಾ, ಇಂಡಿಯಾ ಇಸ್ ಇಂದಿರಾ ಎಂದು ಹೇಳಿದ್ದಾರೆ. ನನ್ನ ವಿರುದ್ಧ ಮಾತನಾಡಿದರೆ ಕಲಬುರಗಿಗೆ ಬರಲು ಬಿಡೋಲ್ಲ ಎಂದು ಈಗ ಹೇಳುವ ಇಲ್ಲಿಯ ಕಲಬುರಗಿಯ ನಾಯಕರು ಅಂದು ಇದೇ ಮಾತು ಇಂದಿರಾ ಗಾಂಧಿ ಹೇಳ್ತಿದ್ರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಗೆ ತಿವಿದರು.ಈ ದೇಶಕ್ಕೆ ಯಾವಾಗ ಯಾವಾಗ ಆಪತ್ತು ಬಂದಿದೆಯೋ ಅಂದು ಸ್ಥಳಕ್ಕೆ ಧಾವಿಸಿ ಆಪತ್ಭಾಂದವ ರೀತಿಯಲ್ಲಿ ಕೆಲಸ ಮಾಡಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮಾತ್ರ. ಅದೇ ಆರೆಸ್ಸೆಸ್ ಅಂದರೆ ಇಂದು ಮುಗಿಬಿಳುವ ಕಾಂಗ್ರೆಸ್‌ಗೆ ಸಂಘದ ವಿರುದ್ಧ ಮಾತನಾಡುವ ಯಾವ ನೈತಿಕತೆಯೂ ಇಲ್ಲ.- ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್ ಸಂಸ್ಥಾಪಕ, ಚಿಂತಕ.