ಕಲಬುರಗಿಗೆ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಮಂಜೂರು: ಶರಣಪ್ರಕಾಶ ಪಾಟಲ್‌

KannadaprabhaNewsNetwork |  
Published : Mar 03, 2024, 01:32 AM IST
ಶರಣಪ್ರಕಾಶ ಪಾಟೀಲ್‌ | Kannada Prabha

ಸಾರಾಂಶ

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‍ನಲ್ಲಿ ಕಲಬುರಗಿಯಲ್ಲಿ ಪ್ರತಿಷ್ಠಿತ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಶಾಖೆ ತೆರೆಯಲು ಮಂಜೂರಾತಿ ನೀಡಿ ಘೋಷಿಸಿದೆ.

ಕಲಬುರಗಿ: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‍ನಲ್ಲಿ ಕಲಬುರಗಿಯಲ್ಲಿ ಪ್ರತಿಷ್ಠಿತ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಶಾಖೆ ತೆರೆಯಲು ಮಂಜೂರಾತಿ ನೀಡಿ ಘೋಷಿಸಿದ್ದು, ಜಿಲ್ಲೆಯ ಸಚಿವನಾಗಿ ತಮಗೆ ಸಂತೋಷ ತಂದಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂದಿನ ದಿನದಲ್ಲಿ ನಿಮ್ಹಾನ್ಸ್ ಶಾಖೆ ಸಹ ಇಲ್ಲಿ ತರಲು ಪ್ರಯತ್ನಿಸಲಾಗುವುದು. ಪ್ರಸ್ತುತ ಇರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ 100 ಹಾಸಿಗೆ ಜೊತೆಗೆ 101 ಕೋಟಿ ರು. ವೆಚ್ಚದಲ್ಲಿ 150 ಹಾಸಿಗೆಯ ಶಾಖೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಲೋಕಸಭೆ ಚುನವಣೆ ನಂತರ ಜಯದೇವ ಉದ್ಘಾಟನೆ:

ಜಿಮ್ಸ್ ಆಸ್ಪತ್ರೆಯಲ್ಲಿ 170 ಕೋಟಿ ರು. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಭರದಿಂದ ಸಾಗಿದ್ದು, ಬರುವ ಮೇ ಅಂತ್ಯದಲ್ಲಿ ಇದನ್ನು ಉದ್ಘಾಟಿಸಲಾಗುತ್ತದೆ. ಲೋಕಸಭಾ ಚುನಾವಣೆ ನಂತರ ಜಯದೇವ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗುವುದು. ಹಳೇ ಜಿಲ್ಲಾ ಆಸ್ಪತ್ರೆ ಕೆಡವಿ ಅಲ್ಲಿ 200 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುತ್ತದೆ. ಇದಲ್ಲದೆ ಜಿಮ್ಸ್ ಆವರಣದಲ್ಲಿಯೇ 50 ಕೋಟಿ ರು. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್, 15 ಕೋಟಿ ರು. ವೆಚ್ಚದಲ್ಲಿ ಸುಟ್ಟು ಗಾಯಗಳ ಆರೈಕೆ ಕೇಂದ್ರ ಸಹ ಸ್ಫಾಪನೆಗೆ ಮುಂದಾಗಿದ್ದೇವೆ ಎಂದರು.

ಜನಪರ ಬಜೆಟ್:

ಮುಖ್ಯಮಂತ್ರಿಗಳು ಮಂಡಿಸಿರುವ 2024-25ನೇ ಸಾಲಿನ ಬಜೆಟ್ ಜನಪರ ಮತ್ತು ಸುಸ್ಥಿರ ಅಭಿವೃದ್ಧಿ ದೃಷ್ಠಿಕೋನದ ಬಜೆಟ್ ಇದಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಚುನಾವಣೆ ವರ್ಷಕ್ಕೆ ಸೀಮಿತ ಎಂದು ವಿರೋಧ ಪಕ್ಷಗಳು ಗೇಲಿ ಮಾಡುತ್ತಿದ್ದರು, ಈ ವರ್ಷ ಇದಕ್ಕೆ 51 ಸಾವಿರ ಕೋಟಿ ರು. ಹಣ ಮೀಸಲಿಟ್ಟಿದ್ದೇವೆ. ಕರ್ನಾಟಕ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಪಾಲಿಸಿ-2002ರಲ್ಲಿ ತಿಳಿಸಿರುವಂತೆ ರಾಜ್ಯದ ಹಣಕಾಸಿನ ಸ್ಥಿರತೆ ಮತ್ತು ಸುಸ್ಥಿರತೆ ಖಚಿತಪಡಿಸಿಕೊಂಡಿಯೇ ಈ ಜನಪರ ಯೋಜನೆಗಳು ಜಾರಿಗೆ ತಂದಿದ್ದೇವೆ. ಅಭಿವೃದ್ಧಿಗೆ ಹಣ ಇಲ್ಲ ಎಂಬುದು ವಿರೋಧ ಪಕ್ಷಗಳ ಅನಗತ್ಯ ಅಪಪ್ರಚಾರವಾಗಿದೆ. ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಬಂಡವಾಳ ವೆಚ್ಚಕ್ಕೆ 52 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದರೆ, ನಮ್ಮ ಸರ್ಕಾರ 55 ಸಾವಿರ ಕೋಟಿ ರು. ಹಣ ಇಟ್ಟಿದೆ. ಗ್ಯಾರಂಟಿ ಯೋಜನೆಗಳು ಜೊತೆಗೆ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೂ ನಮ್ಮ ಆದ್ಯತೆ ಇರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನಗೆ ಕೇಂದ್ರ ನಿರಾಸಕ್ತಿ:

ಪ್ರತಿ ರಾಜ್ಯಕ್ಕೆ ಒಂದು ಏಮ್ಸ್ ಆಸ್ಪತ್ರೆ ಸ್ಥಾಪಿಸಬೇಕೆಂದು ನಿಯಮವಿದ್ದು, ಅದರಂತೆ ರಾಜ್ಯದ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಖುದ್ದಾಗಿ ಸಚಿವರಿಗೆ ಭೇಟಿ ಮಾಡಿ ಮನವರಿಕೆ ಮಾಡಿದ್ದರು, ಇದೂವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದಂತಾಗಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ವೈದ್ಯಕೀಯ ಕಾಲೇಜುಗಳಿಗೆ ಸುತ್ತೋಲೆ:

ಕಲಬುರಗಿ ಎಂ.ಆರ್.ಎಂ.ಸಿ. ವೈದ್ಯಕೀಯ ಕಾಲೇಜಿನಲ್ಲಿ ಪಿ.ಜಿ. ವಿದ್ಯಾರ್ಥಿಗಳಿಗೆ ಸ್ಟೇಫಂಡ್ ನೀಡುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಎನ್.ಎಂ.ಸಿ. ಮಾರ್ಗಸೂಚಿ ಪ್ರಕಾರ ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳಿಗೆ ಸ್ಟೇಫಂಡ್ ನೀಡಬೇಕು. ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಎನ್.ಎಂ.ಸಿ. ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತೊಮ್ಮೆ ಸುತ್ತೋಲೆ ಹೊರಡಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆಯ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ವೀರೇಶ ಪಾಟೀಲ, ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ, ಮುಖಂಡ ಜಯದೇವ ಗುತ್ತೇದಾರ ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ