ಇಂದಿರಾ ಗಾಂಧಿ ಬಾಂಗ್ಲಾ ದೇಶಕ್ಕೆ ವಿಮೋಚನೆ ಕೊಡಿಸಿದ್ದರು: ಡಾ.ಕೆ.ಪಿ.ಅಂಶುಮಂತ್

KannadaprabhaNewsNetwork |  
Published : Nov 01, 2024, 12:03 AM IST
ನರಸಿಂಹರಾಜಪುರ ಪಟ್ಟಣದ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಪಾಕಿಸ್ತಾನದ ಜೊತೆ ಯುದ್ಧ ಮಾಡಿ ಬಾಂಗ್ಲಾ ದೇಶಕ್ಕೆ ವಿಮೋಚನೆ ಕೊಡಿಸಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಉಕ್ಕಿನ ಮಹಿಳೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ತಿಳಿಸಿದರು.

- ಕಾಂಗ್ರೆಸ್‌ ಕಚೇರಿಯಲ್ಲಿ ಇಂದಿರಾ ಗಾಂಧಿ 40ನೇ ಪುಣ್ಯ ಸ್ಮರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಾಕಿಸ್ತಾನದ ಜೊತೆ ಯುದ್ಧ ಮಾಡಿ ಬಾಂಗ್ಲಾ ದೇಶಕ್ಕೆ ವಿಮೋಚನೆ ಕೊಡಿಸಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಉಕ್ಕಿನ ಮಹಿಳೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ತಿಳಿಸಿದರು.

ಗುರುವಾರ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 40ನೇ ಪುಣ್ಯ ಸ್ಮರಣೆ ಯಲ್ಲಿ ಮಾತನಾಡಿದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದರು. ರಾಜರ ವ್ಯವಸ್ಥೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಂದ ಭಾರತ ದೇಶದಲ್ಲಿ ಭೂ ಉಳುವವನೇ ಭೂಮಿ ಒಡೆಯ ಎಂಬ ಕ್ರಾಂತಿಕಾರಕ ಬದಲಾವಣೆ ತಂದಿದ್ದರು. ಸಾಮಾನ್ಯ ಜನರಿಗೂ ಭೂಮಿ ನೀಡಿದ್ದರು. ಲೋಕಸಭೆಯಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ವಾಜಪೇಯಿ ಅವರು ಇಂದಿರಾ ಗಾಂಧಿಯವರನ್ನು ದುರ್ಗಾ ಮಾತೆಗೆ ಹೋಲಿಕೆ ಮಾಡಿದ್ದರು. ಈಗ ಬಿಜೆಪಿ ಪಕ್ಷದವರು ಸರ್ಜಿಕಲ್ ಸ್ಟ್ರೈಕ್‌ ಎನ್ನುತ್ತಾರೆ. ಆಗಿನ ಕಾಲದಲ್ಲೇ ಇಂದಿರಾಗಾಂಧಿ ಸೈನ್ಯಕ್ಕೆ ಆಧುನಿಕತೆ ಟಚ್ ನೀಡಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಜಯಗಳಿಸಿದ್ದರು. ದೇಶದ ಭದ್ರತೆಗೋಸ್ಕರ ಆಪರೇಷನ್‌ ಬ್ಲೂ ಸ್ಟಾರ್ ಕಾರ್ಯಾಚರಣೆ ಮಾಡಿ ತಮ್ಮ ಪ್ರಾಣವನ್ನೇ ಕಳೆದುಕೊಂಡರು ಎಂದರು.

ನ. 19 ರಂದು ಇಂದಿರಾಗಾಂಧಿ ಅವರ ಜನ್ಮದಿನಾಚರಣೆ ಇರುವುದರಿಂದ ಪ್ರತಿ ಹಳ್ಳಿಗಳಲ್ಲೂ ಇಂದಿರಾ ಗಾಂಧಿ ಜಯಂತಿ ಮಾಡಿ ಯುವ ಜನರಿಗೆ ಇಂದಿರಾ ಗಾಂಧಿ ವಿಚಾರಧಾರೆ ತಿಳಿಸುವ ಪ್ರಯತ್ನ ಮಾಡಬೇಕಾಗಿದ್ದು ಇದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಇ.ಸಿ.ಜೋಯಿ ಮಾತನಾಡಿ,ಇಂದಿರಾ ಗಾಂಧಿ ಅವರು ಸ್ವಾತಂತ್ರ ಹೋರಾಟ ದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನೆಹರೂ ನಂತರ ಪ್ರಧಾನಿ ಹುದ್ದೆಗೆ ಏರಿದ ಅವರು ದೇಶದಲ್ಲಿ ಅನೇಕ ಬದಲಾವಣೆ ತಂದರು. ದೇಶದ ಮೊದಲ ಮಹಿಳಾ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು ಎಂದರು.

ಎಪಿಎಂಸಿ ಸದಸ್ಯ ಎಚ್‌.ಎಂ.ಶಿವಣ್ಣ ಮಾತನಾಡಿ,ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಪಂಚ ವಾರ್ಷಿಕ ಯೋಜನೆ, 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದರು. ದೇಶ ಕಂಡ ಮಹಾನ್‌ ನಾಯಕಿ ಇಂದಿರಾ ಗಾಂಧಿ ಎಂದರು.

ಮುಖಂಡ ನಹೀಂ ಮಾತನಾಡಿ, ಇಂದಿರಾ ಗಾಂಧಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹು ದೊಡ್ಡ ಹೆಸರು ಪಡೆದಿದ್ದರು. 1978 ರಲ್ಲಿ ನಡೆದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇಂದಿರಾ ಗಾಂಧಿ ಅವರು 77 ಸಾವಿರ ಅಂತರದಿಂದ ಗೆದ್ದು ರಾಜಕೀಯ ಪುನರ್ಜನ್ಮ ಪಡೆದಿದ್ದರು ಎಂದು ನೆನಪಿಸಿಕೊಂಡರು.

ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರು ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಬೆನ್ನಿ, ಸುರೈಯಾಭಾನು, ಸಾಜು, ಎಸ್‌.ಡಿ.ರಾಜೇಂದ್ರ, ಜುಬೇದ, ಸಮೀರ, ಸುನೀಲ್ ಕುಮಾರ್‌, ಕೆ.ಎ.ಅಬೂಬಕರ್‌, ಬಿಳಾಲುಮನೆ ಉಪೇಂದ್ರ, ಬಿನು, ವಸೀಂ, ಅಬ್ದುಲ್ ರಹೀಂ,ನಂದೀಶ್‌, ಮಾಳೂರು ದಿಣ್ಣೆ ರಮೇಶ್, ಮಂಜುನಾಥ್‌, ಶೆಟ್ಟಿಕೊಪ್ಪ ಮಹೇಶ್,ಶೇಖ್ ಅಬ್ದುಲ್ಲ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ