ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಹಣತೆಗಳ ಹಬ್ಬ ಜೋರು

KannadaprabhaNewsNetwork |  
Published : Nov 01, 2024, 12:03 AM IST
31ಬಿಆರ್‌ವೈ1ಬಳ್ಳಾರಿಯ ಪಾರ್ವತಿನಗರದ ಲೆಕ್ಕ ಪರಿಶೋಧಕ ಸಿದ್ದರಾಮೇಶ್ವರಗೌಡ ಕರೂರು ಅವರ ಕಚೇರಿಯಲ್ಲಿ ಲಕ್ಷ್ಮಿಪೂಜೆ ನೆರವೇರಿಸಲಾಯಿತು. | Kannada Prabha

ಸಾರಾಂಶ

ಗುರುವಾರ ಸಂಜೆ ಜರುಗಿದ ಲಕ್ಷ್ಮಿಪೂಜೆಗೆ ಬೆಳಿಗ್ಗೆಯಿಂದಲೇ ಅಗತ್ಯ ಸಿದ್ಧತೆ ನಡೆದಿತ್ತು.

ಬಳ್ಳಾರಿ: ಹಣತೆಗಳ ಹಬ್ಬ ದೀಪಾವಳಿಗೆ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಶ್ರದ್ಧಾಭಕ್ತಿಯ ಚಾಲನೆ ಸಿಕ್ಕಿದೆ.

ಮೂರು ದಿನಗಳ ಕಾಲ ಜರುಗುವ ದೀಪಾವಳಿ ಹಬ್ಬಕ್ಕೆ ಜಿಲ್ಲೆಯ ಜನರು ಸಡಗರದಲ್ಲಿಯೇ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು.

ಗುರುವಾರ ಸಂಜೆ ಜರುಗಿದ ಲಕ್ಷ್ಮಿಪೂಜೆಗೆ ಬೆಳಿಗ್ಗೆಯಿಂದಲೇ ಅಗತ್ಯ ಸಿದ್ಧತೆ ನಡೆದಿತ್ತು. ಅಗತ್ಯ ಪೂಜಾ ಸಾಮಗ್ರಿಗಳು, ಹೂವು, ಹಣ್ಣು, ನಾನಾ ಬಗೆಯ ಹಣತೆಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಸಂಜೆ ವೇಳೆ ಅಂಗಡಿಗಳು ಹಾಗೂ ವಿವಿಧ ವ್ಯಾಪಾರ ಮಳಿಗೆಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಝಗಮಗಿಸಿದವು. ತಳಿರುತೋರಣಗಳಿಂದ ಅಂಗಡಿ ಹಾಗೂ ಮನೆಗಳನ್ನು ಸಿಂಗರಿಸಲಾಗಿತ್ತು.

ನಗರದ ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿದ ಬೆಂಗಳೂರು ರಸ್ತೆ, ಕಾಳಮ್ಮ ಬೀದಿ, ಬ್ರಾಹ್ಮಣಬೀದಿ, ಗ್ರಹಂ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಜೈನ್ ಮಾರುಕಟ್ಟೆ ಪ್ರದೇಶ, ಗ್ಲಾಸ್ ಬಜಾರ್, ಡಬಲ್ ರಸ್ತೆ ಸೇರಿದಂತೆ ನಾನಾ ಕಡೆಗಳಲ್ಲಿ ಗುರುವಾರ ಸಂಜೆ ಲಕ್ಷ್ಮಿಪೂಜೆಯ ಭರಾಟೆ ಜೋರಾಗಿತ್ತು. ಲಕ್ಷ್ಮಿಪೂಜೆಗೆ ಸ್ನೇಹಿತರು ಹಾಗೂ ಆಪ್ತರನ್ನು ಆಹ್ವಾನಿಸುವ ದೃಶ್ಯಗಳು ಕಂಡು ಬಂದವು.

ಹೋಟೆಲ್, ಅಂಗಡಿಗಳು, ಬೇಕರಿಗಳು, ಎಲೆಕ್ಟ್ರಾನಿಕ್ಸ್‌ ಮಾರಾಟ ಮಳಿಗೆಗಳು, ಬಟ್ಟೆ ವ್ಯಾಪಾರ ಮಳಿಗೆಗಳು, ಚಿನ್ನದ ಆಭರಣ ಮಳಿಗೆಗಳನ್ನು ವಿವಿಧ ವಿದ್ಯುತ್ ದೀಪಗಳಿಂದ ಕಂಗೊಳಿಸಿದವು. ಹಬ್ಬಕ್ಕಾಗಿ ನಾನಾ ವಸ್ತುಗಳ ಖರೀದಿಯಲ್ಲಿ ಜನರು ತೊಡಗಿದ್ದರಿಂದ ನಗರದ ಪ್ರಮುಖ ರಸ್ತೆಗಳು ಗಿಜಿಗುಡುತ್ತಿದ್ದವು. ಸಂಜೆ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಇದರಿಂದ ಸುಗಮಸಂಚಾರಕ್ಕೂ ವ್ಯತ್ಯಯವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿ ಸದ್ದು ಕಡಿಮೆಯಾಗಿತ್ತು.

ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶವಿತ್ತು. ಹಬ್ಬದ ಹಿನ್ನಲೆಯಲ್ಲಿ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಮೂರು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ.

ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನ, ನಗರದ ಆರಾಧ್ಯದೈವ ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಭಕ್ತರ ದಂಡು ಕಂಡು ಬಂತು. ಬೆಳಿಗ್ಗೆಯಿಂದಲೇ ಜನರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.

ಗ್ರಾಮೀಣ ಪ್ರದೇಶಗಳಲ್ಲೂ ದೀಪಾವಳಿ ಹಬ್ಬದ ಸಡಗರ ಮೇಳೈಸಿದ್ದು ಕೃಷಿಕರು ಸಂಭ್ರಮದಿಂದಲೇ ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರತಿವರ್ಷದಂತೆ ಈ ಬಾರಿಯೂ ದೀಪಾವಳಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದೇವೆ. ಹಬ್ಬಗಳು ನಮ್ಮ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಅದರಲ್ಲೂ ದೀಪಾವಳಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ ಲೆಕ್ಕಪರಿಶೋಧಕ ಸಿದ್ದರಾಮೇಶ್ವರಗೌಡ ಕರೂರು.

PREV

Recommended Stories

ಸರ್ಕಾರಿ ಯೋಜನೆ ತಲುಪಲು ‘ಅರಿವು’ ಕಾರ್ಯಕ್ರಮ ಸಹಕಾರಿ: ಯಶ್ಪಾಲ್‌ ಸುವರ್ಣ
ತಾಯಿ ಹೆಸರಿನಲ್ಲಿ ಒಂದು ಸಸಿ ಹಾಗೂ ಬೀಜದುಂಡೆ ಕಾರ್ಯಕ್ರಮಕ್ಕೆ ಚಾಲನೆ