ಕನ್ನಡಪ್ರಭ ವಾರ್ತೆ ಶಿವಮೊಗ್ಗ ವ್ಯಕ್ತಿವಾದ, ಜಾತಿವಾದ, ಕೋಮುವಾದಗಳು ಚುನಾವಣೆ ದಿಕ್ಕನ್ನೇ ಬದಲಿಸಿವೆ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಹೇಳಿದರು.
ಶಿವಮೊಗ್ಗ ಜಿಲ್ಲೆ ಸಮಾಜವಾದಿಗಳ ತವರು ಎಂದು ಕರೆಯಲಾಗುತ್ತದೆ. ಆದರೆ, ಇಂದು ಇಲ್ಲೂ ಬೇರೆ ವಾತಾವರಣ ಇದೆ. ಒಂದು ಹಣ, ಧರ್ಮದ ಆಧಾರದಲ್ಲಿ ಮತ ಹಾಕುವ ಪರಿಪಾಠ ಬೆಳೆದುಬಂದಿದೆ. ಇಂದಿನ ಚುನಾವಣೆ ವ್ಯವಸ್ಥೆ ಹೀಗೆ ಮುಂದುವರಿದರೆ, ಮುಂದೆ ಗ್ರಾಮ ಪಂಚಾಯಿತಿಯಲ್ಲೂ ಸಾಮಾನ್ಯ ಕಾರ್ಯಕರ್ತ ಗೆಲ್ಲದ ಪರಿಸ್ಥಿತಿ ಉಲ್ಬಣಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಮಿಷಗಳ ದರ್ಬಾರು:ಚುನಾವಣೆ ಸಂದರ್ಭ ಅಭ್ಯರ್ಥಿಯಲ್ಲಿ ಅಭಿವೃದ್ಧಿ ಚಿಂತನೆ, ಜನಪರ ಕಾಳಜಿ ನೋಡಿ ಮತ ಚಲಾಯಿಸಬೇಕಿತ್ತು. ಆದರೆ, ನಾವು ಅಭ್ಯರ್ಥಿ ಎಷ್ಟು ಹಣ ಕೊಡುತ್ತಿದ್ದಾನೆ ಎಂದು ನೋಡುತ್ತಿದ್ದೇವೆ. ಯಾರು ಹೆಚ್ಚು ಹಣ, ಹೆಂಡ ಕೊಡುತ್ತಾರೆ ಅವರಿಗೆ ಓಟು ಎನ್ನುತ್ತಿದ್ದೇವೆ. ಪಕ್ಷಗಳು ಕೂಡ ಟಿಕೆಟ್ ನೀಡುವ ಸಂದರ್ಭ ಎಷ್ಟು ಖರ್ಚು ಮಾಡಲು ಸಿದ್ಧವಾಗಿದ್ದಿ ಎಂದು ಕೇಳಿಯೇ ಟಿಕೆಟ್ ನೀಡಲಾಗುತ್ತದೆ. ಹೀಗಾಗಿ, ಚುನಾವಣೆಯಲ್ಲಿ ಗೆಲ್ಲಲು ದುಡ್ಡೇ ಪ್ರಧಾನ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದ ಮುಂದೆ ಸದನದಲ್ಲಿ ಬಡವರು, ರೈತರ ಪರ ಮಾತನಾಡುವವರೇ ಇಲ್ಲವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಸಾಲ ಮನ್ನಾ ಮಾಡಿ ದೇಶ ಬಿಟ್ಟು ಓಡಿಹೋಗುವವರ ಸಾಲ ಮನ್ನಾ ಮಾಡುವ ಸರ್ಕಾರಗಳು, ರೈತರ ಸಾಲ ಮನ್ನಾ ಮಾಡಲು ಹಿಂದೆ, ಮುಂದೆ ನೋಡುವಂತಾಗಿದೆ. ಬಡವರು ಓದುವ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಸಂಖ್ಯೆಯ ಶಿಕ್ಷಕರ ಹುದ್ದೆ ಖಾಲಿ ಉಳಿದಿವೆ. ಇದರಿಂದ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಸಿಗಲು ಹೇಗೆ ಸಾಧ್ಯ? ಯಾರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಯಾರು ಜನ ಪರವಾಗಿ ಇರುತ್ತಾರೆಯೋ ಅಂಥವರು ಚುನಾವಣೆಯಲ್ಲಿ ಆಯ್ಕೆಯಾಗಬೇಕು. ಗಾಂಧಿ ಹುಟ್ಟಿದ ನಾಡಿನಲ್ಲಿ ಹಿಂಸೆ ನಡೆಯಬಾರದು ಎಂದರೆ ಸಂವಿಧಾನವನ್ನು ಪಾಲನೆ ಮಾಡುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತ ಮತದಾರರ ವೇದಿಕೆ ಸಂಚಾಲಕ ಕೆ.ಸಿ.ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಪ್ರತಿಜ್ಞಾವಿಧಿ ಬೋಧಿಸಿದರು. ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮೀಣ ಬ್ಯಾಂಕ್ ನಿವೃತ್ತ ಅಧ್ಯಕ್ಷ ಕೆ.ಆರ್.ಲಿಂಗಪ್ಪ, ನಿವೃತ್ತ ವಾರ್ತಾಧಿಕಾರಿ ಬಿ.ಎಸ್. ತಿಮ್ಮೋಲಿ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ರಾಜ್ಯಾಧ್ಯಕ್ಷೆ ಬಿ.ಪ್ರೇಮಾ ಮತ್ತಿತರರು ಇದ್ದರು.
ಚುನಾವಣಾ ಸುಧಾರಣೆ ನಿರಂತರ ಇರಬೇಕು
- - - ಬಾಕ್ಸ್-2 ಇದೇ ನನ್ನ ಕೊನೆ ಚುನಾವಣೆ: ಪಾಟೀಲ್
ಚುನಾವಣೆಯಲ್ಲಿ ಹಣವೇ ಪ್ರಧಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾ.ಪಂ. ಚುನಾವಣೆಯಲ್ಲಿ ಕೂಡ ಸ್ಪರ್ಧಿಸುವುದು ಸುಲಭದ ಮಾತಲ್ಲ. ಲಕ್ಷ ಲಕ್ಷ ರು. ಖರ್ಚು ಮಾಡಬೇಕು. ಇಂತಹ ವ್ಯವಸ್ಥೆಯಲ್ಲಿ ನಮ್ಮಂತಹವರು ಹೇಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು? ಜನರ ಪರವಾಗಿ ಸದನದಲ್ಲಿ ಮಾತನಾಡುವವರಿಗೆ ಬೆಲೆಯಿಲ್ಲ. ಬದಲಾಗಿ ಕ್ಷೇತ್ರದ ಮದುವೆ, ಮುಂಜಿ, ಸಾವಿನ ಮನೆಗೆ ನಿತ್ಯ ಭೇಟಿ ಕೊಡುವವರು ಮಾತ್ರ ಗೆಲ್ಲುತ್ತಿದ್ದಾರೆ ಎಂದು ಬೇಸರಿಸಿದರು.
ಸಂವಾದ ಕಾರ್ಯಕ್ರಮವನ್ನು ಸಿಎಂ ಸಲಹೆಗಾರ ಬಿ.ಆರ್. ಪಾಟೀಲ್ ಉದ್ಘಾಟಿಸಿದರು.