- ಬಾಪೂಜಿ ಆಡಿಟೋರಿಯಂನಲ್ಲಿ ನಮನ ಅಕಾಡೆಮಿಯಿಂದ ಆಯೋಜನೆ: ದಿನೇಶ್ ಕೆ. ಶೆಟ್ಟಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ನಮನ ಅಕಾಡೆಮಿ ವತಿಯಿಂದ ಎರಡನೇ ಬಾರಿ ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮನ ಅಕಾಡೆಮಿ ದಾವಣಗೆರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಹಾಗೂ ಬೆಸಿಲಿಕಾ ಸ್ಪೋರ್ಟ್ಸ್ ಅಂಡ್ ಲೀಶರ್, ಶ್ರೀಲಂಕಾ ಆಶ್ರಯದಲ್ಲಿ "ಇಂಡೋ-ಶ್ರೀಲಂಕಾ 2.0” ಕಾರ್ಯಕ್ರಮವು ಏ. 12ರಂದು ನಗರದ ಬಾಪೂಜಿ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಉಪಾಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮದಲ್ಲಿ ಶ್ರೀಲಂಕಾದ ವಿಶ್ವ ಸನಕ ಡ್ಯಾನ್ಸ್ ಫೌಂಡೇಶನ್ ತಂಡ, ನಮನ ಅಕಾಡೆಮಿ ದಾವಣಗೆರೆ ವಿದ್ಯಾರ್ಥಿಗಳು, ಬಂಗಾರಪೇಟೆಯ ಪ್ರಸಿದ್ಧ ಕುಚುಪುಡಿ ನೃತ್ಯಗುರು ಡಾ.ವಸಂತ್ ಕಿರಣ್ ರಾಯನಂ ಅವರ ತಂಡ ಹಾಗೂ ರಾಣೇಬೆನ್ನೂರಿನ ನಟವರ ನೃತ್ಯ ಅಕಾಡೆಮಿ ತಂಡಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ನಡೆಯಲಿವೆ ಎಂದರು.
ನಮನ ಅಕಾಡೆಮಿಯ ಕಾರ್ಯದರ್ಶಿ ವಿದುಷಿ ಗುರು ಡಿ.ಕೆ. ಮಾಧವಿ ಮಾತನಾಡಿ, ದಾವಣಗೆರೆಯ ಗಾಯಕಿ ವಿ.ಎಸ್.ಮಾನಸ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಅಶ್ರಿತ್, ಕೀಬೋರ್ಡ್ ವಾದನದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಇ ದೇ ಸಂದರ್ಭದಲ್ಲಿ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಸುರೇಶ್ ಹನಗವಾಡಿ ಅವರಿಗೆ "ನಮನ ಶ್ರೀ " ಗೌರವ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
- - -
ದಾವಣಗೆರೆಯಲ್ಲಿ ನಮನ ಅಕಾಡೆಮಿಯಿಂದ ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜಿಸಿರುವ ಕುರಿತು ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.