ಮಡಿಕೇರಿ: ಬಿರುನಾಣಿ ವ್ಯಾಪ್ತಿಯಲ್ಲಿ ವರ್ಷದ ನಾಲ್ಕು ಐದು ತಿಂಗಳು ನಿರಂತರವಾಗಿ ಮಳೆ ಇರುವುದರಿಂದ ಹಾಗೂ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಆಗಿರುವುದರಿಂದ ಹೊರಾಂಗಣ ಕ್ರೀಡೆ ಈ ಸಂದರ್ಭ ಅಸಾಧ್ಯವಾಗಿದ್ದು, ಈ ಹಿನ್ನಲೆ ಈ ಭಾಗದ ಜನರ ಬಹುಕಾಲದ ಒಳಾಂಗಣ ಕ್ರೀಡಾ ಕಟ್ಟಡ ನಿರ್ಮಾಣ ಮಾಡುವ ಬೇಡಿಕೆಯನ್ನು ಪರಿಗಣಿಸಲಾಗಿದೆ ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಕ್ರೀಡಾಂಗಣ ಕಟ್ಟಡಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 15 ಲಕ್ಷ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅವಶ್ಯವಾದ ಅನುದಾನವನ್ನು ಬಿಡುಗಡೆ ಮಾಡಿ ಉದ್ದೇಶಿತ ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಜಿಮ್ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಇದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಆರೋಗ್ಯ ಕೇಂದ್ರಕ್ಕೆ 4.50 ಕೋಟಿ ಅನುದಾನ : ಬಿರುನಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಐದು ಗ್ರಾಮಗಳಿಗೆ ಅನುಕೂಲ ಕಲ್ಪಿಸಲು ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣಕ್ಕೆ ರಾಜ್ಯ ಸರ್ಕಾರದಿಂದ 4. 50 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆಯಾಗಿದೆ. ಇಲ್ಲಿ ಹೊಸದಾಗಿ ವೈದ್ಯರ ವಸತಿಗೃಹ, ಶಶ್ರೂಸಕಿಯರ ವಸತಿಗೃಹ ಸೇರಿದಂತೆ ಹೊಸ ಕಟ್ಟಡ ನಿರ್ಮಾಣಕ್ಕೆ ಈ ಅನುದಾನ ಬಿಡುಗಡೆಯಾಗಲಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ಅವರು ಹೇಳಿದರು.ಬೊಳ್ಳೆ ಕಳ್ಳ್ (ನೀರಾ) ಗೆ ಅನುಮತಿಗೆ ಅಧಿವೇಶನದಲ್ಲಿ ಪ್ರಸ್ತಾಪ :ಕೊಡಗು ಜಿಲ್ಲೆಯಲ್ಲಿ ನೀರಾ (ಬೊಳ್ಳೆ ಕಳ್ಳ್ ) ತೆಗೆಯಲು ಹಾಗೂ ಲಭ್ಯವಾಗುವಂತೆ ಜನರ ಬೇಡಿಕೆ ಇರುವುದನ್ನು ಬೆಳೆಗಾರರು ಪ್ರಸ್ತಾಪಿಸಿದಾಗ ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಅಡಿಯಲ್ಲಿ ನೀರಾ ಸೇವನೆ ಅಥವಾ ಅದನ್ನು ತೆಗೆಯಲು ಅವಕಾಶವಿದೆ. ಆದರೆ ನೆರೆಯ ಕೊಡಗು ಜಿಲ್ಲೆಯಲ್ಲಿ ಹಿಂದಿನಿಂದಲೂ ಸ್ವಾಭಾವಿಕವಾಗಿ ನೀರಾ ತಯಾರಿಕೆ, ಬಳಕೆ ಮಾಡಿಕೊಂಡು ಬಂದ ಪರಂಪರೆ ಇದೆ. ಆದರೆ ಕೊಡಗು ಜಿಲ್ಲೆಯಲ್ಲಿ ಕಾರಣಾಂತರದಿಂದ ಅದನ್ನು ನಿಷೇಧ ಮಾಡಿದ್ದಾರೆ. ಪಕ್ಕದ ಜಿಲ್ಲೆಯಲ್ಲಿ ಲಭ್ಯವಿರುವುದು ಕೊಡಗಿನಲ್ಲಿ ಸಹ ಲಭ್ಯವಿರಬೇಕು ಎಂದು ಜನ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಕ್ರಮಕೈಗೊಳ್ಳ ಬೇಕು ಎಂದು ಆಲೋಚನೆ ಮಾಡಿದ್ದೇನೆ. ಈ ವಿಚಾರದಲ್ಲಿ ಇದರ ಅವಶ್ಯಕತೆಯಿಂದ ಬೆಳೆಗಾರರಿಗೆ ಬೇಸಾಯಗಾರರಿಗೆ ಅನುಕೂಲವಾಗುತ್ತದೆ. ಶುದ್ಧವಾದ ನೀರಾದಿಂದ ಆರೋಗ್ಯಕ್ಕೂ ಸಹ ಅಂತಹ ಹಾನಿ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಇಲ್ಲಿನ ಬೇಸಾಯಗಾರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನುಮತಿ ಕೊಡಿಸಬೇಕೆಂಬ ಒತ್ತಾಯ ಇದೆ. ಬಿರುನಾಣಿ ಯಲ್ಲಿಯೂ ಈ ವಿಚಾರ ಮತ್ತೆ ಪ್ರಸ್ತಾಪಕ್ಕೆ ಬೆಳೆಗಾರರು ತಂದಿದ್ದಾರೆ. ಜನರ ಬೇಡಿಕೆಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೊಳ್ಳುವುದಾಗಿ ಅವರು ಹೇಳಿದರು.ಸ್ಥಳೀಯರು ತೆಗೆದಿರುವ ನೀರಾವನ್ನು ಶಾಸಕರು ಹಾಗೂ ಸ್ಥಳೀಯರು ಸೇವಿಸಿ ಗಮನ ಸೆಳೆದರು.ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಉಪಾಧ್ಯಕ್ಷ ಕಾಯಪಂಡ ಸುನಿಲ್, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಖಜಾಂಚಿ ಬೊಟ್ಟಂಗಡ ರವೀಂದ್ರ, ನಿರ್ದೇಶಕರಾದ ಕುಪ್ಪಣಮಾಡ ಪ್ರೀತಮ್, ಕಾಳಿಮಾಡ ರಶಿಕ್ ಕಾವೇರಪ್ಪ, ಕಾಯಪಂಡ ಕಾವೇರಪ್ಪ, ಬುಟ್ಟಿಯಂಡ ಸುನಿತಾ ಗಪ್ಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಬಿರುನಾಣಿ ಗ್ರಾ. ಪಂ. ಮಾಜಿ ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಡಿಸಿಸಿ ಸದಸ್ಯ ಚೊಟ್ಟೆಯಂಡಮಾಡ ವಿಶು, ಕರ್ತಮಾಡ ಸುಜು, ಕುಪ್ಪಣ ಮಾಡ ಗೌತಮ್, ಬೊಟ್ಟಂಗಡ ಜಗದೀಶ್, ಸುಜಿತ್, ಅಣ್ಣಳಮಾಡ ಗಿರೀಶ್, ಚಿಣ್ಣಪ್ಪ, ರಾಬಿನ್, ಅಮನ್, ಚೇರoಡ ಕಾರ್ಯಪ್ಪ, ಬಲ್ಯಮೀದೇರಿರ ಪ್ರಕಾಶ್, ಚೇತನ್ ಸೋಮಣ್ಣ, ಮೀದೇರಿರ ನಿತಿನ್, ಮೀದೇರಿರ ದಿನೇಶ್ ಮತ್ತಿತರರಿದ್ದರು.