ಪ್ರೀತಿಸುತ್ತಿದ್ದ ಸೊದರತ್ತೆ ಮಗಳು ಬಿಟ್ಟು ಹೋಗಿದಕ್ಕೆ ಬೇಸರಗೊಂಡ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರೀತಿಸುತ್ತಿದ್ದ ಸೊದರತ್ತೆ ಮಗಳು ಬಿಟ್ಟು ಹೋಗಿದಕ್ಕೆ ಬೇಸರಗೊಂಡ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಆಂಧ್ರಪ್ರದೇಶದ ಹಿಂದೂಪುರ ಮೂಲದ ಪವನ್ ಕುಮಾರ್ (28) ಮೃತ ಯುವಕ. ನ.15ರಂದು ಹನುಮಂತೇಗೌಡನ ಪಾಳ್ಯದ ಗ್ರೌಂಡ್ ಬಳಿ ಘಟನೆ ಈ ನಡೆದಿದ್ದು, ಸೋಮವಾರ ರಾತ್ರಿ ಯುವಕ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪವನ್ ಕುಮಾರ್ ಮತ್ತು ಈತನ ಅತ್ತೆ ಮಗಳು ಈ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದು, ರಾಜಾನುಕುಂಟೆಯಲ್ಲಿ ಇಬ್ಬರು ಈ ಹಿಂದೆ ಒಟ್ಟಿಗೆ ವಾಸವಾಗಿದ್ದರು ಎನ್ನಲಾಗಿದೆ. ಈ ಮಧ್ಯೆ ಯುವತಿ ಬೇರೊಬ್ಬ ಯುವಕನನ್ನು ಮದುವೆಯಾಗಿ ಮಾದನಾಯಕನಹಳ್ಳಿಯ ಹನುಮಂತೇಗೌಡನ ಪಾಳ್ಯದಲ್ಲಿ ವಾಸವಾಗಿದ್ದಾಳೆ. ಇನ್ನು ಪವನ್ ಕುಮಾರ್ ಕೂಡ ಬೇರೆಡೆ ವಾಸವಾಗಿದ್ದನು. ಯುವತಿ ಕೆಲವು ದಿನಗಳಿಂದ ಪವನ್ ಸಂಪರ್ಕದಲ್ಲಿ ಇದ್ದು, ನಂತರ ಅಂತರ ಕಾಯ್ದುಕೊಂಡಿದ್ದಳು ಎನ್ನಲಾಗಿದೆ.ಹನುಮಂತೇಗೌಡನ ಪಾಳ್ಯದಲ್ಲಿ ಆಕೆ ವಾಸವಿರುವ ಮಾಹಿತಿ ತಿಳಿದು ಅಲ್ಲಿಗೆ ಬಂದು ಆಕೆಗಾಗಿ ಹುಡುಕಾಡಿದ್ದಾನೆ. ಜತೆಗೆ ಆಕೆಗೆ ಕರೆ ಕೂಡ ಮಾಡಿದ್ದಾನೆ. ಆದರೆ, ಆಕೆ ಮೊಬೈಲ್ ಕರೆ ಸ್ವೀಕರಿಸಿಲ್ಲ ಎನ್ನಲಾಗಿದೆ. ಅದರಿಂದ ಕೋಪಗೊಂಡಿದ್ದ ಪವನ್ ಕುಮಾರ್, ಲೋಬೋ ಗ್ರೌಂಡ್ ಬಳಿ ಬಂದು ಮತ್ತೊಮ್ಮೆ ಆಕೆಗೆ ಕರೆ ಮಾಡಿದ್ದಾನೆ ಆಗಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ತುಂಬಾ ಹತಾಶನಾದ ಆತ ಅಲ್ಲಿಯೇ ಪೆಟ್ರೋಲ್ ಅನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಬೆಂಕಿಯನ್ನು ನಂದಿಸಿ ಪೊಲೀಸರ ನೆರವಿನೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಪವನ್ ಕುಮಾರ್ ಮೃತಪಟ್ಟಿದ್ದಾನೆ. ಘಟನೆ ಕುರಿತು ಪವನ್ ಕುಮಾರ್ನ ಅತ್ತೆ ಮಗಳು ಮತ್ತು ಆಕೆಯ ಪತಿಯನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.