ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಗುಜರಿ ವ್ಯಾಪಾರಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಮೃತನ ಪರಿಚಿತರು ಪರಾರಿಯಾಗಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಗುಜರಿ ವ್ಯಾಪಾರಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಮೃತನ ಪರಿಚಿತರು ಪರಾರಿಯಾಗಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬನ್ನೇರುಘಟ್ಟದ ನಿವಾಸಿ ಇಮ್ರಾನ್ ಪಾಷ (45) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತ ನವೀದ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬೂದಿಗೆರೆ ಕ್ರಾಸ್ ಸಮೀಪದ ಮಂಚಪ್ಪನಹಳ್ಳಿಯ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ರಕ್ತಸಿಕ್ತವಾಗಿದ್ದ ಅಪರಿಚಿತ ಮೃತದೇಹ ಕಂಡು ಪೊಲೀಸರಿಗೆ ಮಂಗಳವಾರ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಮೃತದೇಹದ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಜರಿ ವ್ಯಾಪಾರದಲ್ಲಿ ತೊಡಗಿದ್ದ ಮೃತ ಇಮ್ರಾನ್ ಪಾಷ ಅವರು, ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ನೆಲೆಸಿದ್ದರು. ಕೆಲಸದ ನಿಮಿತ್ತ ತಮ್ಮ ಪುತ್ರನ ಜತೆ ಬಾಗಲೂರಿಗೆ ಸೋಮವಾರ ಮಧ್ಯಾಹ್ನ ಅವರು ಬಂದಿದ್ದರು. ಆದರೆ ಮಧ್ಯಾಹ್ನ 12.30 ಗಂಟೆಯಲ್ಲಿ ತಾನು ಸ್ನೇಹಿತ ನವೀದ್ ಭೇಟಿಗೆ ಹೋಗುವುದಾಗಿ ಹೇಳಿ ಪುತ್ರನನ್ನು ಮನೆಗೆ ಅವರು ಕಳುಹಿಸಿದ್ದರು. ಇದಾದ ನಂತರ ಸಂಜೆ 4.30 ರಲ್ಲಿ ತಂದೆಗೆ ಮೃತನ ಪುತ್ರ ದಿವಾನ್ವುದ್ದೀನ್ ಕರೆ ಮಾಡಿದಾಗ ಸಹ ತಾನು ನವೀದ್ ಜತೆ ಇರುವುದಾಗಿ ಇಮ್ರಾನ್ ಹೇಳಿದ್ದರು. ಆದರೆ ರಾತ್ರಿ ಇಮ್ರಾನ್ ಮನೆ ಮರಳದೆ ಹೋದಾಗ ಮೃತನ ಮನೆಯಲ್ಲಿ ಆತಂಕವಾಗಿದೆ. ಆಗ ನವೀದ್ಗೆ ಕರೆ ಮಾಡಿದಾಗ ಆತ ಸಹ ಪ್ರತಿಕ್ರಿಯೆ ನೀಡಿಲ್ಲ. ಮರು ದಿನ ಪೊಲೀಸ್ ಠಾಣೆಗೆ ತೆರಳಿ ದೂರು ಕೊಡುವ ಹೊತ್ತಿಗೆ ಬಾಗಲೂರು ಸಮೀಪದ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಎರಡು ಸುತ್ತು ಗುಂಡು
ಇಮ್ರಾನ್ ಮೇಲೆ ಆರೋಪಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಹಣೆಗೆ ಗುರಿಯಿಟ್ಟು ಸಮೀಪದಿಂದಲೇ ಗುಂಡೇಟು ಹೊಡೆದು ದುಷ್ಕರ್ಮಿ ಹತ್ಯೆ ಮಾಡಿದ್ದಾನೆ. ಕಾರಿನಲ್ಲಿ ಇಮ್ರಾನ್ ಪಾಷನ ದೇಹ ಹೊಕ್ಕಿ ಹೊರ ಬಿದ್ದಿದ್ದ ಎರಡು ಗುಂಡುಗಳು ಪತ್ತೆಯಾಗಿವೆ. ಈ ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ನವೀದ್ ಸಹ ಗುಜರಿ ವ್ಯಾಪಾರ ಮಾಡುತ್ತಿದ್ದ ಎಂಬ ಮಾಹಿತಿ ಇದೆ. ಹೀಗಾಗಿ ಮೃತನ ಕೊಲೆ ಹಿಂದೆ ವ್ಯವಹಾರಿಕ ಅಥವಾ ವೈಯಕ್ತಿಕ ಕಾರಣಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.