ಬಸವರಾಜ ಹಿರೇಮಠ
ಪ್ರತಿಯೊಂದು ಕೈಗಾರಿಕೆಗಳಲ್ಲಿ ಸಿದ್ಧ ವಸ್ತುಗಳ ಉತ್ಪಾದನೆಯೊಂದಿಗೆ ತ್ಯಾಜ್ಯವೂ ಉತ್ಪಾದನೆ ಆಗುವುದು ಸಾಮಾನ್ಯ. ಉತ್ಪಾದನಾ ವಸ್ತುಗಳು ಮಾರಾಟವಾಗಿ ಹೋಗುತ್ತವೆ. ಅಂತೆಯೇ ತ್ಯಾಜ್ಯವನ್ನು ಅಷ್ಟೇ ಜತನದಿಂದ ವಿಲೇವಾರಿ ಮಾಡುವುದು ಕೈಗಾರಿಕೋದ್ಯಮಿಗಳ ಕರ್ತವ್ಯ. ಆದರೆ, ತ್ಯಾಜ್ಯ ವಿಲೇವಾರಿ ಅಥವಾ ನಿರ್ವಹಿಸಲು ಬೇಲೂರಿನಲ್ಲಿ ಯಾವುದೇ ತಂತ್ರಜ್ಞಾನ ಅಥವಾ ವ್ಯವಸ್ಥೆಯೇ ಇಲ್ಲದಿರುವುದು ಬೇಸರದ ಸಂಗತಿ.
ನಿರ್ವಹಣಾ ಘಟಕವಿಲ್ಲ: ಬೇಲೂರು ಕೈಗಾರಿಕಾ ಪ್ರದೇಶದಿಂದ ಹೊರ ಬರುವ ತ್ಯಾಜ್ಯವನ್ನು ನಿರ್ವಹಣೆ ಮಾಡಲು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಇಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವಾಗಲೇ ಬರೋಬ್ಬರಿ 30 ಎಕರೆ ಜಾಗವನ್ನು ಮೀಸಲು ಇಟ್ಟಿದೆ. ದುರಂತದ ಸಂಗತಿ ಏನೆಂದರೆ, ಅಲ್ಲಿ ನಿರ್ವಹಣಾ ಘಟಕ ಸ್ಥಾಪಿಸದೇ ಇರುವುದು.ಅಪಾಯಕ್ಕೆ ದಾರಿ: ಮೊದಲು ಬೇಲೂರು ಕೈಗಾರಿಕಾ ಪ್ರದೇಶದ 300ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳಿದ್ದು, ಇದೀಗ ಬೇಲೂರಿಗೆ ಹೊಂದಿಕೊಂಡು ಐದಾರು ವರ್ಷಗಳಲ್ಲಿ ಮುಮ್ಮಿಗಟ್ಟಿ ಹಾಗೂ ಕೋಟೂರು ಕೈಗಾರಿಕಾ ಪ್ರದೇಶ ಸಹ ಸ್ಥಾಪನೆಯಾಗಿದ್ದು, 500ಕ್ಕೂ ಹೆಚ್ಚು ಕೈಗಾರಿಕೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಯಾವ ಕೈಗಾರಿಕೆಗಳು ಸಹ ತ್ಯಾಜ್ಯವನ್ನು ನಿರ್ವಹಿಸಲಾಗದೇ ಎಲ್ಲೆಂದರಲ್ಲಿ ತಾಜ್ಯವನ್ನು ಎಸೆದು ಹೋಗಲಾಗುತ್ತಿವೆ. ತ್ಯಾಜ್ಯ ನಿರ್ವಹಣೆ ಇಲ್ಲದ ಹಿನ್ನೆಲೆಯಲ್ಲಿ ಅದೆಷ್ಟೋ ಕಂಪನಿಗಳು ಇಲ್ಲಿ ಬರುತ್ತಿಲ್ಲ. ಜತೆಗೆ ಆಗಾಗ ಈ ತಾಜ್ಯಕ್ಕೆ ಬೆಂಕಿ ಹೊತ್ತುಕೊಳ್ಳುವುದರಿಂದ ಯಾವಾಗ ಯಾವ ಅಪಾಯ ಕಾದಿದಿಯೋ ಗೊತ್ತಿಲ್ಲ. ತ್ಯಾಜ್ಯ ಎಸೆಯುವ ಪ್ರದೇಶದಲ್ಲಿ ಬಿಪಿಸಿಎಲ್, ಎಚ್‌ಪಿಸಿಎಲ್ ಘಟಕಗಳಿದ್ದು, ಒಂದು ವೇಳೆ ಬೆಂಕಿ ಅನಾಹುತ ಉಂಟಾದರೆ ಇಡೀ ಧಾರವಾಡ ನಗರಕ್ಕೆ ಹಾನಿಯಾಗುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ ಕೆಐಎಡಿಬಿ ಕೂಡಲೇ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಬೇಕು ಎಂಬುದು ಧಾರವಾಡ ಇಂಡಿಸ್ಟ್ರೀಯಲ್ ಗ್ರೋಥ್ ಸೆಂಟರ್‌ನ ಆಗ್ರಹ.
ಇದರೊಂದಿಗೆ ಗಟಾರುಗಳು ಒಡೆದು ಹೋಗಿವೆ. ರಸ್ತೆಗಳು ಹಾಳಾಗಿವೆ. ಮಳೆಗಾಲದಲ್ಲಿ ತೀವ್ರ ಸಮಸ್ಯೆ ಅನುಭವಿಸಬೇಕಾಗುತ್ತದೆ. ಬೇಲೂರಿನ ವಿವಿಧ ಕೈಗಾರಿಕೆಗಳಿಗೆ ಬರುವ ಕಾರ್ಮಿಕರಿಗೆ ಬಸ್ಸಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಹೀಗೆ ಬೇಲೂರು ಕೈಗಾರಿಕಾ ಪ್ರದೇಶ ಇಲ್ಲಗಳ ನಡುವೆ ನಡೆಯುತ್ತಿದ್ದು, ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಎಂಬುದು ಇಲ್ಲಿಯ ಕೈಗಾರಿಕೋದ್ಯಮಿಗಳ ಆಗ್ರಹ.