ಕೊಪ್ಪಳ:
ಜಿಲ್ಲಾ ಬಚಾವೋ ಆಂದೋಲನ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಆರಂಭಿಸಿರುವ ಕಾರ್ಖಾನೆ ತೊಲಗಿಸಿ ಕೊಪ್ಪಳ ಉಳಿಸಿ ಜನಾಂದೋಲನದ ಭಾಗವಾಗಿ ಸೋಮವಾರ ಕೈಗಾರಿಕೆಗಳಿಂದ ಬಾಧಿತ ಪ್ರದೇಶ ತಾಲೂಕಿನ ಗಿಣಗೇರಿಯಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಲಾಯಿತು.ಈ ವೇಳೆ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ನಮ್ಮಲ್ಲಿ ಈಗಿರುವ ಕಾರ್ಖಾನೆಗಳಿಂದ ಧೂಳೂ, ವಿಷ ಮತ್ತು ಪರಿಸರ ಮಾಲಿನ್ಯ ಎದುರಿಸಿದ್ದೇವೆಯೇ ಹೊರತು ನಮಗೆ ಯಾವುದೇ ಪ್ರಯೋಜನವಾಗಿಲ್ಲ, ಅವುಗಳಿಂದ ಲಾಭಕ್ಕಿಂತ ನಷ್ಟವನ್ನೇ ಜನರು ಅನುಭವಿಸಿದ್ದಾರೆ. ಇದರ ಮೇಲೆ ಬೆಂಕಿಗೆ ತುಪ್ಪು ಸುರಿದ ಹಾಗೆ ಹೊಸ ಕಾರ್ಖಾನೆ ನಮ್ಮನ್ನು ಸಂಪೂರ್ಣವಾಗಿ ಸುಡಲು ಬರುತ್ತಿರುವುದು ದುರಂತವೇ ಸರಿ. ಯಾವುದೇ ಕಾರಣಕ್ಕೂ ಹೊಸ ಕೈಗಾರಿಕೆ ಸ್ಥಾಪನೆ ಮಾಡಲು ಬಿಡುವುದಿಲ್ಲ ಎಂದರು.
ಸಿಂಧನೂರಿನ ಪ್ರಗತಿಪರ ಹೋರಾಟಗಾರ ಎಚ್.ಎನ್. ಬಡಿಗೇರ ಮಾತನಾಡಿ, ಇಲ್ಲಿನ ಜನ-ಜಾನುವಾರುಗಳು, ಕೃಷಿ, ಜನಜೀವನವನ್ನೇ ಹಾಳು ಮಾಡಿರುವ ಇಲ್ಲಿನ ಕಾರ್ಖಾನೆಗಳು ಅವೈಜ್ಞಾನಿಕವಾಗಿ ಒಂದೇ ಕಡೆಗೆ ಬೀಡುಬಿಟ್ಟು ಇಲ್ಲಿನ ಪರಿಸರ ಹಾಳು ಮಾಡಿರುವುದರಿಂದ ತೀವ್ರ ಸ್ವರೂಪದ ಹೋರಾಟ ಬೇಕಿದೆ. ಅದಕ್ಕಾಗಿ ಈ ಆಂದೋಲನದ ಭಾಗವಾಗಿ ಬಂದಿದ್ದೇವೆ, ಜನ ಸಹಕಾರ ಕೊಡಬೇಕು ಎಂದರು.ಮುಖಂಡ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಇಲ್ಲಿನ ಕಾರ್ಖಾನೆಗಳಿಂದ ಜನ ರೋಗಗಳನ್ನು ಪಡೆದಿದ್ದಾರೆ. ಆಹಾರವೇ ವಿಷವಾಗಿ ಆಯುಷ್ಯವೇ ಅರ್ಧಕ್ಕೆ ಬಂದಿರುವುದು ದುರಾದೃಷ್ಟಕರ. ಇಲ್ಲಿ ಕಾರ್ಖಾನೆಗಳು ಬಂದರೂ ಕೆಲಸ ಇಲ್ಲಿಯ ಜನರಿಗೆ ಸಿಗುವುದಿಲ್ಲ. ಕಮ್ಮಿ ಸಂಬಳಕ್ಕೆ ಕೆಲಸ ಮಾಡುವ ಉತ್ತರದ ಜನರನ್ನು ಕರೆ ತರುತ್ತಾರೆ. ಅವರು ಬರುವಾಗಿ ಇಲ್ಲಿಗೆ ಹಲವು ರೋಗಗಳನ್ನು ಹರಡುತ್ತಿದ್ದಾರೆ. ಅದರಲ್ಲಿ ಕುಷ್ಠರೋಗ, ಚರ್ಮ ರೋಗ ಮತ್ತು ಏಡ್ಸ್ ಅಂತಹ ಭಯಾನಕ ಕಾಯಿಲೆಗಳು ಸಹ ಸೇರಿವೆ. ಇಲ್ಲಿನ ಉಷ್ಣಾಂಶವೂ ಹೆಚ್ಚಾಗಿದೆ. ಆದ್ದರಿಂದ ಈಗಲೇ ತಡವಾಗಿದ್ದು ಇನ್ನೂ ತಡವಾಗಬಾರದು. ಫೆ. ೨೪ರಂದು ಕೊಪ್ಪಳ ಭಾಗ್ಯನಗರ ಬಂದ್ ಕರೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ್, ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯ ಅಧ್ಯಕ್ಷ ಡಿ.ಎಚ್. ಪೂಜಾರ್, ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಮುಖಂಡ ಮಂಗಳೇಶ್ ರಾಥೋಡ್ ಮಾತನಾಡಿದರು.ಕರ್ನಾಟಕ ರೈತ ಸಂಘದ ಮುಖಂಡ ಮೂಕಪ್ಪ ಮೇಸ್ತ್ರಿ, ಪ್ರಗತಿಪರ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಒಕ್ಕೂಟದ ಮುಖಂಡ ತಿಮ್ಮಣ್ಣ ಕನಕಗಿರಿ, ಎಐಯುಟಿಯುಸಿ ಶರಣು ಗಡ್ಡಿ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಟಿಯುಸಿಐ ರಾಯಚೂರು ಜಿಲ್ಲಾಧ್ಯಕ್ಷ ಬಿ.ಎನ್. ಯರದಿಹಾಳ, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ, ದಲಿತ ಯುವ ವೇದಿಕೆ ಜಿಲ್ಲಾ ಅಧ್ಯಕ್ಷ ಸುಂಕಪ್ಪ ಮೀಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ರಮೇಶ ಬೇಳೂರು, ಕರ್ನಾಟಕ ರೈತ ಸಂಘದ ಸಿಂಧನೂರು ತಾಲೂಕು ಅಧ್ಯಕ್ಷ ರಮೇಶ್ ಪಾಟೀಲ್ ಬೇರಗಿ, ಭಾರತೀಯ ಭೀಮ ಸೇನೆಯ ಜಿಲ್ಲಾ ಅಧ್ಯಕ್ಷ ಕಾಶಪ್ಪ ಚಲವಾದಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಅಧ್ಯಕ್ಷ ರಾಘು ಚಾಕರಿ, ಮುಖಂಡ ಮಂಜುನಾಥ ದೊಡ್ಡಮನಿ ಇತರರಿದ್ದರು.