ಕನ್ನಡಪ್ರಭ ವಾರ್ತೆ ಕೋಲಾರಯುವ ಶಕ್ತಿಯು ದೇಶದ ಆರ್ಥಿಕ ಅಭಿವೃದ್ಧಿಗೆ ಬಳಕೆಯಾಗಲು ಉದ್ಯಮಶೀಲತೆ ಸಹಕಾರಿಯಾಗಿದೆ ಎಂದು ಕರ್ನಾಟಕ ಉದ್ಯಮ ಶೀಲತಾಭಿವೃದ್ಧಿ ಕೇಂದ್ರದ ಜಂಟಿ ನಿರ್ದೇಶಕ ಎಂ.ಎಸ್.ಮಧು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮೂರು ದಿನಗಳ ಉದ್ಯಮಶೀಲತಾ ತಿಳವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೌಶಲ ಕುರಿತು ಅರಿವು ಮೂಡಿಸಿ
ಯುವ ಶಕ್ತಿಯನ್ನು ಉದ್ಯಮಶೀಲರನ್ನಾಗಿಸಲು ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಅರಿವು ನೀಡಲಾಗುತ್ತಿದೆ, ಪ್ರತಿ ವರ್ಷ ದೇಶದಲ್ಲಿ ೧೫ ಲಕ್ಷ ಮಂದಿ ಪದವೀಧರರು ಹೊರ ಬರುತ್ತಿದ್ದು, ಈ ಪೈಕಿ ಶೇ.೧೦ ರಿಂದ ೧೫ ರಷ್ಟು ಮಂದಿಗೆ ಮಾತ್ರ ಉದ್ಯೋಗವಕಾಶ ಸಿಗುತ್ತಿದೆ, ಉಳಿದವರು ಸ್ವಯಂ ಉದ್ಯೋಗ ಮತ್ತು ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ನೀಡುವಂತಾಗಬೇಕು ಎಂದರು.ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ೨೦೧೪ರಲ್ಲಿ ಕೇಂದ್ರ-ರಾಜ್ಯ ಹಂತದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಆರಂಭವಾಯಿತು, ಭಾರತ ದೇಶದಲ್ಲಿ ಅತಿ ಹೆಚ್ಚು ಇರುವ ಯುವ ಶಕ್ತಿ ಉದ್ಯಮಶೀಲರನ್ನಾಗಿಸಿ ದುಡಿಯುವ ವರ್ಗಕ್ಕೆ ಆರ್ಥಿಕ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದರು.ಉದ್ಯಮಿಗಳಾಗಲು ಪ್ರೇರಣೆಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಎನ್.ರವಿಚಂದ್ರ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ಸಂಸ್ಕಾರವೂ ಮುಖ್ಯವಾಗುತ್ತದೆ, ಮೂರು ದಿನಗಳ ಉದ್ಯಮಶೀಲತಾ ಶಿಬಿರವು ವಿದ್ಯಾರ್ಥಿಗಳನ್ನು ಭಾವೀ ಉದ್ದಿಮೆದಾರರಾಗಿಸಲು ಪ್ರೇರೇಪಿಸುತ್ತದೆ, ಶಿಬಿರದಲ್ಲಿ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದು ಉದ್ದಿಮೆದಾರರಬೇಕು ಇಲ್ಲವೇ ಕೌಶಲ್ಯಗಳನ್ನು ಪಡೆದು ಉದ್ಯೋಗವನ್ನಾದರೂ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಕೋಲಾರ ಜಿಲ್ಲೆಯ ಯುವಕ ಯುವತಿಯರಿಗೆ ಕೈಗಾರಿಕಾ ಕೌಶಲ್ಯಾಭಿವೃದ್ಧಿ ಇಲ್ಲದ ಕಾರಣದಿಂದ ಸಾವಿರಾರು ಮಂದಿ ಹೊರ ರಾಜ್ಯಗಳಿಂದ ಆಗಮಿಸಿ ಇಲ್ಲಿನ ಕೈಗಾರಿಕೆಗಳಲ್ಲಿ ಕೆಲಸ ಮಾಡುವಂತ ವಾತಾವರಣ ಇದೆ, ಆದ್ದರಿಂದ ಜಿಲ್ಲೆಯ ವಿದ್ಯಾರ್ಥಿಗಳು ಕೈಗಾರಿಕಾ ಕೌಶಲ್ಯ ಪಡೆದುಕೊಳ್ಳಲು ಮುಂದಾಗಬೇಕೆಂದರು.ಸೌಲಭ್ಯಗಳ ಬಗ್ಗೆ ಮಾಹಿತಿ
ಕೈಗಾರಿಕಾ ವಾಣಿಜ್ಯ ಇಲಾಖೆಯ ಉಪ ನಿರ್ದೇಶಕ ರಫೀಕ್ ಅಹಮದ್ ಮಾತನಾಡಿ, ಮೂರು ದಿನಗಳ ಶಿಬಿರ ಅರ್ಥಪೂರ್ಣ ವಿಷಯಗಳೊಂದಿಗೆ ಸಾಗಲಿದ್ದು, ಶಿಬಿರ ಹೊರತಾಗಿಯೂ ತಮ್ಮ ಇಲಾಖೆಯಿಂದ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು, ಉದ್ದಿಮೆ ಆಯ್ಕೆ, ಆರ್ಥಿಕ ನೆರವು, ಪ್ರೋತ್ಸಾಹ ಯೋಜನೆ, ರಿಯಾಯಿತಿ ಸೌಲಭ್ಯಗಳು, ಸವಲತ್ತು, ತಾಂತ್ರಿಕ ಮಾಹಿತಿ ತಮ್ಮ ಇಲಾಖೆಯಲ್ಲಿ ಲಭ್ಯವಿರುತ್ತದೆ ಎಂದರು.ಅಧ್ಯಕ್ಷತೆ ವಹಿಸಿತ್ತ ಕಾಲೇಜಿನ ಪ್ರಾಂಶುಪಾಲ ಡಾ.ಎ.ಮುನಿಶಾಮಪ್ಪ ಮಾತನಾಡಿ, ಕಾಲೇಜಿನಲ್ಲಿ ಕೇವಲ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿ ಮಾತ್ರವಲ್ಲದೆ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇಂತ ಶಿಬಿರವನ್ನು ಏರ್ಪಡಿಸಲಾಗುವುದು, ಕೇವಲ ಕೌಶಲ್ಯ ಮಾತ್ರವಲ್ಲದೆ ಸಮರ್ಪಣಾ ಭಾವ ಇದ್ದರೆ ಉದ್ದಿಮೆಗಳಲ್ಲಿ ಯಶಸ್ಸು ಸಾಧ್ಯ ಎಂದರು.ಶಿಬಿರಗಳು ಸಹಕಾರಿ:ಪ್ರಾಸ್ತಾವಿಕವಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಎಸ್.ಮುರಳೀಧರ್ ಮಾತನಾಡಿ, ವಿದ್ಯಾರ್ಥಿಗಳನ್ನು ಉದ್ಯಮಶೀಲರನ್ನಾಗಿಸಲು ಇಂತ ಚಟುವಟಿಕೆಗಳು ಸಹಕಾರಿಯಾಗಿದೆ ಎಂಬ ಕಾರಣ ಶಿಬಿರ ಆಯೋಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಶೈಲಜಾ ಉಪಸ್ಥಿತರಿದ್ದರು. ಸಿಡಾಕ್ ತರಬೇತುದಾರ ರಘು ಸ್ವಾಗತಿಸಿ, ಕಾಲೇಜಿನ ಉಪನ್ಯಾಸಕ ಕೆ.ಎನ್.ಶ್ರೀನಿವಾಸಮೂರ್ತಿ ನಿರೂಪಿಸಿ ವಂದಿಸಿದರು.