ಸಮಾಜದ ಪರಿವರ್ತನೆಯಲ್ಲಿ ವಿದ್ಯಾರ್ಥಿಗಳ ಪಾತ್ರ
ದುಡಿವ ವರ್ಗ ಸಂಪತ್ತಿನ ಒಡೆಯರಾದಾಗ ಮಾತ್ರ ಅಸಮಾನತೆ ತೊಲಗಲು ಸಾಧ್ಯ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಕೆ. ರಾಧಾಕೃಷ್ಣ ತಿಳಿಸಿದರು.
ನಗರದ ಬಲಿಜ ಭವನದಲ್ಲಿ ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಕರ್ತರ ಅಧ್ಯಯನ ಶಿಬಿರದಲ್ಲಿ ಅವರು ಸಮಾಜದ ಪರಿವರ್ತನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು.ಪ್ರಸ್ತುತ ನಮ್ಮ ಸಮಾಜದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಇದೆ. ಆಳುವ ವರ್ಗ - ದುಡಿಯುವ ವರ್ಗ ಅಸ್ತಿತ್ವದಲ್ಲಿದೆ. ಯಾರು ದುಡಿದು ದಣಿಯುತ್ತಾರೋ ಅವರು ಬಡವರಾಗಿದ್ದಾರೆ. ದುಡಿಯದೆ ಕೂತು ತಿನ್ನುವವರು ಶ್ರೀಮಂತರಾಗಿದ್ದಾರೆ. ಇದೇ ಅಸಮಾನತೆಗೆ ಮೂಲಕಾರಣವಾಗಿದೆ. ಇದರ ವಿರುದ್ಧ ಹೋರಾಡಿ, ದುಡಿಯುವ ವರ್ಗ ಸಂಪತ್ತಿನ ಒಡೆಯರಾದಾಗ ಮಾತ್ರವೇ ಅಸಮಾನತೆ ತೊಲಗುತ್ತದೆ.
ಯಾವುದೇ ವಿಚಾರವಾಗಲೀ ವೈಜ್ಞಾನಿಕವಾಗಿ ಯೋಚಿಸಿಯೇ ಸೂಕ್ತ ನಿಲುವು ತೆಗೆದುಕೊಳ್ಳಬೇಕು. ಸಮಾಜವನ್ನು ಬದಲಾಯಿಸಲು ಜ್ಞಾನವೇ ನಮ್ಮ ಅಸ್ತ್ರವಾಗಿದ್ದು ಜ್ಞಾನವಿಲ್ಲದೇ ಇದ್ದರೆ ಬರೀ ಕತ್ತಲೆಯಲ್ಲಿ ನಡೆದಂತಾಗುತ್ತದೆ. ಈಶ್ವರಚಂದ್ರ ವಿದ್ಯಾಸಾಗರ್, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಬುದ್ಧ ಮುಂತಾದವರು ಈ ಜ್ಞಾನಕ್ಕಾಗಿ ಕೇವಲ ಪಠ್ಯ ಪುಸ್ತಕಗಳ ಮೇಲೆ ಅವಲಂಬಿತವಾಗಿರಲಿಲ್ಲ. ಇಂದಿನ ವಿದ್ಯಾರ್ಥಿ ಯುವಜನರು ಸ್ ಕೇಂದ್ರಿತ ಚಿಂತನೆ ಬಿಟ್ಟು, ತನ್ನ ಕುಟುಂಬ ತಂದೆ- ತಾಯಿ ಅಷ್ಟೇ ಅಲ್ಲದೇ ಇಡೀ ಸಮಾಜದ ಎಲ್ಲಾ ನೊಂದ ತಂದೆ-ತಾಯಂದಿರ ಕಣ್ಣೀರು ಒರೆಸುವ ಹೋರಾಟದ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಸಂಘಟನೆಯ ರಾಜ್ಯಾಧ್ಯಕ್ಷೆ ಅಶ್ವಿನಿ ಕೆ.ಎಸ್., ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್, ಹನುಮಂತು, ಚಂದ್ರಕಲಾ, ರಾಜ್ಯ ಖಜಾಂಚಿ ಸುಭಾಷ್, ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರ್ ಉಪಸ್ಥಿತರಿದ್ದರು. ನೂರಾರು ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಿದ್ದರು.