ಹಿಂದೂ ಸಮಾಜ ಒಡೆಯುವ ಹುನ್ನಾರ : ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪ

KannadaprabhaNewsNetwork |  
Published : Sep 22, 2025, 01:01 AM IST
ಬಳ್ಳಾರಿಯ ಬಿಜೆಪಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಜನಾರ್ದನ ರೆಡ್ಡಿ, ಸಮೀಕ್ಷೆ ಹೆಸರಿನಲ್ಲಿ ಜಾತಿಗಳ ನಡುವೆ ಕಲಹ ಸೃಷ್ಟಿಸಲು ಸಿ.ಎಂ.ಸಿದ್ಧರಾಮಯ್ಯ ಮುಂದಾಗಿದ್ದಾರೆ ಎಂದು ಆರೋಪಿಸಿದರು.  | Kannada Prabha

ಸಾರಾಂಶ

ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ, ಈ ಮೂಲಕ ಹಿಂದೂ ಸಮಾಜವನ್ನು ಒಡೆಯುವ ಕೊಳಕು ರಾಜಕೀಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.

  ಬಳ್ಳಾರಿ :  ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ, ಈ ಮೂಲಕ ಹಿಂದೂ ಸಮಾಜವನ್ನು ಒಡೆಯುವ ಕೊಳಕು ರಾಜಕೀಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆಪಾದಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ಹಾಗೂ ಕ್ರೈಸ್ತ ಮಿಷನರಿಗಳ ಒತ್ತಡದಿಂದಾಗಿಯೇ ಕ್ರೈಸ್ತ ಎಂಬ ಹೆಸರನ್ನು ಸೇರಿಸಿ ಜನರ ಮತಾಂತರ ಮಾಡುವ ಹೀನ ಕೃತ್ಯಕ್ಕೆ ಸಿದ್ದರಾಮಯ್ಯ ಮುಂದಾಗಿರುವುದು ಅತ್ಯಂತ ನಾಚಿಕೆಗೇಡು ಎಂದರು.

ಈ ಸಮೀಕ್ಷೆಯಲ್ಲಿ ಜಾತಿಗಳ ನಡುವೆ ಕದನ ಸೃಷ್ಟಿಸುವ ಹುನ್ನಾರವಿದೆ. ಸರ್ಕಾರ ಕೂಡಲೇ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯಬೇಕು. ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ, ಸಮೀಕ್ಷೆ ಕಾರ್ಯಕ್ಕೆ ಮುಂದಾಗಬೇಕು. ಸರ್ಕಾರ ಪ್ರತಿಪಕ್ಷಗಳ ಸಲಹೆ ನಿರಾಕರಿಸಿದರೆ, ಸಮೀಕ್ಷೆಗೆ ಅಸಹಕಾರ ತೋರಿಸುತ್ತೇವೆ. ಸಮೀಕ್ಷೆ ಬರುವವರಿಗೆ ಯಾವುದೇ ಮಾಹಿತಿ ನೀಡದಂತೆ ಬಹಿಷ್ಕರಿಸುತ್ತೇವೆ ಎಂದು ರೆಡ್ಡಿ ಎಚ್ಚರಿಸಿದರು.

ನನ್ನದೇನೂ ತಪ್ಪಿಲ್ಲ:

ಕುಡಿತಿನಿ ಬಳಿ ಸ್ಥಾಪನೆ ಆಗಬೇಕಿದ್ದ ಮಿತ್ತಲ್ ಕಂಪನಿಯ ಉಕ್ಕಿನ ಕಾರ್ಖಾನೆ ಆಂಧ್ರಪ್ರದೇಶಕ್ಕೆ ಹೋಗಿದೆ. ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಬೇಡಿಕೆಯಷ್ಟು ಅದಿರು, ನೀರು ಹಾಗೂ ಮೂಲ ಸೌಕರ್ಯ ಕಲ್ಪಿಸಬೇಕಾಗುತ್ತದೆ. ಜತೆಗೆ ಅಗತ್ಯ ಸಹಕಾರ ಕೊಟ್ಟರೆ ಮಾತ್ರ ಕೈಗಾರಿಕೆ ಸ್ಥಾಪನೆ ಸಾಧ್ಯ. ಆದರೆ, ಕಾಂಗ್ರೆಸ್ ಸರ್ಕಾರ ಯಾವುದೇ ಸಹಕಾರ ನೀಡಲಿಲ್ಲ. ಸರ್ಕಾರ ನಿಯಮದಂತೆ ನಿಗದಿತ ಸ್ಥಳದಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು. ಇಲ್ಲವೇ ರೈತರ ಜಮೀನು ಹಿಂದಕ್ಕೆ ನೀಡಬೇಕು ಎಂದು ರೆಡ್ಡಿ ಒತ್ತಾಯಿಸಿದರು.

ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಸಂಬಂಧ ಸಚಿವ ಎಂ.ಬಿ. ಪಾಟೀಲ್ ಹಾಗೂ ಸಂತೋಷ್‌ ಲಾಡ್ ಅವರಿಬ್ಬರ ಸಮ್ಮುಖದಲ್ಲಿ ಚರ್ಚಿಸಿ, ಮನವರಿಕೆ ಮಾಡಿಕೊಡಲಾಗಿದೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ ಎಂದರು.

ಬಳ್ಳಾರಿ ಜಿಲ್ಲೆಯಿಂದ ಸಾಕಷ್ಟು ಅದಿರು ಪಡೆದು ಪ್ರಗತಿ ಕಂಡುಕೊಂಡಿರುವ ಜಿಂದಾಲ್ ಕಂಪನಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ವಾಯುಮಾಲಿನ್ಯ ತಡೆಗಟ್ಟಬಹುದಿತ್ತು. ಆದರೆ, ಅವರು ಮಾಡುತ್ತಿಲ್ಲ. ಬಳ್ಳಾರಿಗೆ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿಕೊಡುವುದಾಗಿ ಹೇಳಿದ್ದ ಜಿಂದಾಲ್ ಕಂಪನಿ ನುಡಿದಂತೆ ನಡೆದುಕೊಂಡಿಲ್ಲ. ಅವರಿಗೆ ಬಳ್ಳಾರಿ ಜಿಲ್ಲೆಯ ಅದಿರು ಮಾತ್ರ ಬೇಕಿದೆಯೇ ವಿನಃ ಈ ಜಿಲ್ಲೆಯ ಪ್ರಗತಿ ಬೇಕಾಗಿಲ್ಲ ಎಂದು ದೂರಿದರು.

ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ ಕುಮಾರ್ ಮೋಕಾ, ಹಿರಿಯ ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಗುರ್ರಂ ವೆಂಕಟರಮಣ, ಗುರುಲಿಂಗನಗೌಡ, ಕೆ.ಎಸ್. ದಿವಾಕರ, ಕೋಟೆ ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ