ಹುಬ್ಬಳ್ಳಿ: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು. ಜಾತಿ ಕಾಲಂನಲ್ಲಿ ತಮ್ಮ ಜಾತಿ ಬರೆಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಸಚಿವ ಈಶ್ವರ ಖಂಡ್ರೆ ನೀಡಿದ ವೀರಶೈವ ಲಿಂಗಾಯತ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಖಂಡ್ರೆ ಹೇಳಿಕೆ ವೈಯಕ್ತಿಕವಾದದ್ದೇ ಹೊರತು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ಧಾರವಲ್ಲ. ಮಹಾಸಭಾ ಯಾರ ವೈಯಕ್ತಿಕ ಆಸ್ತಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಡಪಂಥೀಯರ ಟೂಲ್‌ಕಿಟ್ ಭಾಗವಾಗಿ ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ. ಮುಖ್ಯಮಂತ್ರಿ ಖುರ್ಚಿ ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಅವರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಆ ಮೂಲಕ ಹಿಂದೂ ಸಮಾಜವನ್ನು ಒಡೆದು, ಹೈಕಮಾಂಡ್ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸಮಾಜದ ಜನಪ್ರತಿನಿಧಿಗಳಾಗಲಿ, ಮಠಾಧೀಶರಾಗಲಿ ಗೊಂದಲ ಸೃಷ್ಟಿಸುವ ಬದಲು, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಠಾಧೀಶರನ್ನು ಮುಂದೆ ಬಿಟ್ಟು, ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಸಾಂವಿಧಾನಿಕವಾಗಿ ಮಾನ್ಯತೆ ಇರುವುದು ಆರು ಧರ್ಮಗಳಿಗೆ ಮಾತ್ರ ಎಂದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಕುತ್ತು ಬಂದಾಗಲೆಲ್ಲ ಅವರು ಧರ್ಮದ ವಿಚಾರ ಮುನ್ನೆಲೆಗೆ ತರುತ್ತಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಈ ರೀತಿ ಮಾಡಿದ್ದಾರೆ. ಎಲ್ಲರೂ ಜಾತಿ ಕಾಲಂನಲ್ಲಿ ಹಿಂದೂ ಅಂತಲೇ ಬರೆಯಿಸಬೇಕು ಎಂದು ಹೇಳಿದರು.