ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಎಲ್ಲ ಸಮಾಜಕ್ಕೂ ಕಾರ್ಯಕ್ರಮ ರೂಪಿಸಿದ್ದು, ಎಲ್ಲ ಸಮಾಜದ ಪರವಾಗಿ ಕೆಲಸ ಮಾಡುತ್ತಿದೆ. ನಮ್ಮ ಘೋಷಣೆ ಎಲ್ಲರಿಗೂ ಸಮಬಾಳು- ಎಲ್ಲರಿಗೂ ಸಮಪಾಲು ಎಂಬುದಾಗಿದೆ. ರಾಜ್ಯ ಸರ್ಕಾರ ನಡೆಸುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಿಂದ ಯಾವುದೇ ಸಮಾಜಕ್ಕೂ ತೊಂದರೆಯಾಗುವುದಿಲ್ಲ ಎಂದು ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೆಲವು ಸಮಾಜಗಳಿಗೆ ಅನ್ಯಾಯವಾಗಿದ್ದು, ಅವುಗಳಿಗೆ ಸೌಲಭ್ಯ ಕಲ್ಪಿಸಬೇಕು ಮತ್ತು ಯಾವ ಸಮಾಜದಲ್ಲಿ ಸಾಕ್ಷರತೆ ಪ್ರಮಾಣ ಮತ್ತು ಉದ್ಯೋಗ ಪ್ರಮಾಣದ ಬಗ್ಗೆ ಮಾಹಿತಿ ಪಡೆದು, ಆರ್ಥಿಕವಾಗಿ ಹಿಂದುಳಿದ ಸಮಾಜಗಳಿಗೆ ಶಕ್ತಿ ಕೊಡುವ ಕೆಲಸ ಈ ಸರ್ವೇಯಿಂದ ಆಗಲಿದೆ ಎಂದು ತಿಳಿಸಿದರು.ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಲ್ಟ್ರಾ ಲೆಫ್ಟಿಸ್ಟ್ ಎಂಬ ಕೇಂದ್ರ ಸಚಿವ ಜೋಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಯಾವ ಧರ್ಮವನ್ನೂ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಆಗಲಿ ನಮ್ಮ ಸರ್ಕಾರವಾಗಲಿ ಮಾಡುತ್ತಿಲ್ಲ. ಗ್ಯಾರಂಟಿ ಯೋಜನೆ ನೀಡಿದ್ದು, ಇದರಲ್ಲಿ ಯಾವುದಾದರೂ ಯೋಜನೆಯಲ್ಲಿ ಜಾತಿ ಇದೆಯಾ ಎಂದು ಪ್ರಶ್ನಿಸಿದ ಅವರು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಡಿ. ನಾವು ಸೋಲಲಿ, ಗೆಲ್ಲಲಿ ನಮ್ಮ ತತ್ವ ಸಿದ್ಧಾಂತ ಬಿಟ್ಟುಕೊಡುವುದಿಲ್ಲ. ಜಾತಿ ಮೇಲೆ ರಾಜಕಾರಣ ಮಾಡುವವರು ನೀವು ಎಂದು ಹರಿಹಾಯ್ದರು.
ವೋಟ್ ಚೋರಿ ಕುರಿತು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿರುವುದನ್ನು ಸಲೀಂ ಅಹ್ಮದ್ ಸ್ವಾಗತಿಸಿದರು. ಚುನಾವಣಾ ಆಯೋಗ ಚುನಾವಣಾ ಆಯೋಗವಾಗಿ ಉಳಿಯದೆ ಬಿಜೆಪಿ ಕಮಿಷನ್ ಆಗಿ ಹೋಗಿದೆ. ಜನರಿಗೆ ಆಯೋಗದ ಮೇಲೆ ವಿಶ್ವಾಸ ಹೋಗಿದೆ. ತಪ್ಪು ಆಗಿದೆ ಎಂದರೆ ಪ್ರಮಾಣ ಮಾಡಿ ಎನ್ನುವುದು ಎಷ್ಟು ಸರಿ? ಎಸ್‌ಐಟಿ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.