ಜಲಕಳೆ ತೆರವು, ಕೆರೆ ಕಾಲುವೆಗಳ ಸುಧಾರಣೆಯ ಸವಾಲು..!

KannadaprabhaNewsNetwork |  
Published : Sep 22, 2025, 01:01 AM IST
21ಡಿಡಬ್ಲೂಡಿ7ಕಲಘಟಗಿ ಸಮೀಪದ ದೇವಿಕೊಪ್ಪದ ಕೆರೆಗೆ ನೀರು ಹರಿದು ಬರುವ ಪೈಪಲೈನ ಬಳಿಯೇ ಹುಟ್ಟಿಕೊಂಡಿರುವ ಜಲಕಳೆ.  | Kannada Prabha

ಸಾರಾಂಶ

ಸಾಮಾನ್ಯವಾಗಿ ಈಗ ಏತ ನೀರಾವರಿ ಮೂಲಕ ನೀರು ಪಡೆಯುತ್ತಿರುವ ಕಲಘಟಗಿಯ ಬಹುತೇಕ ಕೆರೆಗಳು ಊರ ಹೊರಗಿವೆ. ಕೃಷಿಗಾಗಿಯೇ ಈ ಕೆರೆಗಳಿಗೆ ನೀರು ಹರಿಸುತ್ತಿದ್ದು, ಈ ಮೊದಲು ಗುಡ್ಡ- ಗಾಡುಗಳಿಂದ ಹರಿದು ಬರುವ ನೀರೇ ಮೂಲವಾಗಿತ್ತು. ಹೀಗಾಗಿ ಈ ಕೆರೆಗಳಿಗೆ ಕೊಳಚೆ ನೀರಿನ ಸೇರ್ಪಡೆಯೇ ಇರಲಿಲ್ಲ.

ಬಸವರಾಜ ಹಿರೇಮಠ

ಧಾರವಾಡ: ಮೊದಲ ಹಂತದಲ್ಲಿ 41 ಕೆರೆಗಳಿಗೆ ಈಗಾಗಲೇ ಬೇಡ್ತಿ ಬಂದಿದ್ದಾಳೆ. ಜತೆಗೆ ಎರಡನೇ ಹಂತದಲ್ಲಿ 107 ಕೆರೆಗಳನ್ನು ಗುರುತಿಸಿದ್ದು ಸದ್ಯದಲ್ಲಿಯೇ ಈ ಕೆರೆಗಳಿಗೂ ಬೇಡ್ತಿಯು ಹರಿಯುವುದು ನಿಶ್ಚಿತ. ಆದರೆ, ಈ ಏತ ನೀರಾವರಿ ಯೋಜನೆ ಸಂಪೂರ್ಣ ಯಶಸ್ವಿಯಾಗಲು ಕೆಲವು ಸವಾಲುಗಳಿದ್ದು, ಅವು ಪರಿಹಾರವಾಗಬೇಕಿದೆ.

ಬೇಡ್ತಿ ನದಿ ನೀರು ಸಂಪೂರ್ಣ ಶುದ್ಧವಾಗಿಲ್ಲ. ಹುಬ್ಬಳ್ಳಿಯ ಭಾಗದಿಂದ ಬರುವ ಗಟಾರು, ಕೊಳಚೆ ನೀರು ಈ ನದಿ ಅಥವಾ ಕೊಳ್ಳದ ಒಡಲು ಸೇರುತ್ತಿದೆ. ಈ ನೀರು ಕಲಘಟಗಿ ಕೆರೆಗಳನ್ನು ತಲುಪುತ್ತಿದೆ. ಈ ನೀರು ಕೃಷಿ, ಮೀನುಗಾರಿಕೆ, ತೋಟಗಾರಿಕೆ ಅಂತಹ ಕಾರ್ಯಗಳಿಗೆ ತಕ್ಕುದಾದುದು ಸರಿ. ಒಳ್ಳೆಯ ಉತ್ಪನ್ನವೂ ಬರಲಿದೆ. ಆದರೆ, ಈ ಮೊದಲಿದ್ದ ಕೆರೆಗಳ ಸ್ವಚ್ಛತೆಯನ್ನು ಈ ನೀರು ಹಾಳು ಮಾಡುತ್ತಿರುವ ಬಗ್ಗೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಜಲಕಳೆ ಸೃಷ್ಟಿ: ಸಾಮಾನ್ಯವಾಗಿ ಈಗ ಏತ ನೀರಾವರಿ ಮೂಲಕ ನೀರು ಪಡೆಯುತ್ತಿರುವ ಕಲಘಟಗಿಯ ಬಹುತೇಕ ಕೆರೆಗಳು ಊರ ಹೊರಗಿವೆ. ಕೃಷಿಗಾಗಿಯೇ ಈ ಕೆರೆಗಳಿಗೆ ನೀರು ಹರಿಸುತ್ತಿದ್ದು, ಈ ಮೊದಲು ಗುಡ್ಡ- ಗಾಡುಗಳಿಂದ ಹರಿದು ಬರುವ ನೀರೇ ಮೂಲವಾಗಿತ್ತು. ಹೀಗಾಗಿ ಈ ಕೆರೆಗಳಿಗೆ ಕೊಳಚೆ ನೀರಿನ ಸೇರ್ಪಡೆಯೇ ಇರಲಿಲ್ಲ. ಸ್ವಾಭಾವಿಕವಾಗಿ ಈ ಕೆರೆಗಳು ಸ್ವಚ್ಛತೆ ಕಾಪಾಡಿಕೊಂಡಿದ್ದವು. ಈಗ ಬೇಡ್ತಿ ನದಿಯ ನೀರಿನ ಸೇರ್ಪಡೆಯಿಂದ ಕೆರೆಗಳಲ್ಲಿ ಜಲಕಳೆ ಬೆಳೆಯುತ್ತಿದೆ.

ಜಲ ಕಳೆ ನಿಧಾನವಾಗಿ ಇಡೀ ಕೆರೆಯನ್ನು ಆವರಿಸಿಕೊಳ್ಳುತ್ತಿದ್ದು, ಜಲಚರಗಳಿಗೂ ಹಾಗೂ ಪರಿಸರಕ್ಕೂ ಹಾನಿಕರ. ಹೀಗಾಗಿ ಈ ಜಲಕಳೆ ತೆರವುಗೊಳಿಸಿ ಕೆರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

ಕಾಲುವೆ ಸುಧಾರಣೆ: ಏತ ನೀರಾವರಿ ಮೂಲಕ ನೀರು ಪೈಪಲೈನ್ ಮೂಲಕ 41 ಕೆರೆಗಳಿಗೆ ಹೋಗುತ್ತಿದ್ದು, ಆ ಕೆರೆಯಿಂದ ಕಟ್ಟಕಡೆಯ ರೈತರಿಗೆ ನೀರು ಮುಟ್ಟಲು ಇನ್ನೂ ಕೆಲವು ಸುಧಾರಣೆಗಳಾಗಬೇಕಿದೆ ಎಂದು ಬೆಂಡಲಗಟ್ಟಿಯ ರೈತ ನಾಗೇಶ ಮನವಿ ಮಾಡುತ್ತಾರೆ. ಸಚಿವ ಸಂತೋಷ ಲಾಡ್‌ ಅವರು ಮಾಡಿದ ಕೆಲಸ ಇಡೀ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ, ಕೆರೆಯಿಂದ ಸರಾಗವಾಗಿ ನೀರುಹರಿಯಲು ಕಾಲುವೆಗಳ ಸುಧಾರಣೆಯಾಗಬೇಕಿದೆ. ಈ ಕಾರ್ಯವಾದರೆ ಮಾತ್ರ ಕಟ್ಟಕಡೆಯ ರೈತರಿಗೂ ನೀರು ತಲುಪುತ್ತದೆ. ಇಲ್ಲವಾದಲ್ಲಿ ನೀರು ಮಧ್ಯದಲ್ಲಿ ಸೋರಿ ಹೋಗುತ್ತದೆ ಎಂದು ಕಾಲುವೆ ಸುಧಾರಣೆಯ ಬೇಡಿಕೆ ಇಟ್ಟರು.

ಕೋಡಿ ಹರಿಸಿ ಕಳೆ ಹೊರ ಹಾಕಿ: ಏತ ನೀರಾವರಿ ಮೂಲಕ ಬೇಡ್ತಿ ನದಿ ನೀರು ಕೆರೆಗಳಿಗೆ ಪೈಪ್‌ಲೈನ್ ಮೂಲಕ ತಲುಪುತ್ತಿದೆ. ಸದಾ ತುಂಬಿರುವ ಕೆರೆಯ ನೀರಿನ ಕೋಡಿಯನ್ನು ಆಗಾಗ ಹರಿಸುವ ಮೂಲಕ ಹೊಸದಾಗಿ ಜನ್ಮತಾಳುತ್ತಿರುವ ಜಲಕಳೆಯನ್ನು ಹೊರ ಹಾಕುವುದೊಂದೆ ಪರಿಹಾರ ಎನ್ನುವ ಪರಿಸರವಾದಿಗಳು, ಆಯಾ ಕೆರೆಗಳ ವ್ಯಾಪ್ತಿಯ ಗ್ರಾಪಂಗಳು ಕಡ್ಡಾಯವಾಗಿ ಈ ಕಾರ್ಯ ಮಾಡಬೇಕು. ಜತೆಗೆ ನೀರು ಬಳಕೆದಾರರು ಸಂಘವನ್ನು ರಚಿಸಿಕೊಂಡು ತಮ್ಮೂರಿನ ಕೆರೆಗಳನ್ನು ರಕ್ಷಿಸಲು ತಂಡ ರಚಿಸಿಕೊಳ್ಳಬೇಕು. ಇದರೊಂದಿಗೆ ಸರ್ಕಾರ ಕಾಲುವೆಗಳನ್ನು ಮರು ನಿರ್ಮಿಸುವ ವರೆಗೂ ಕೂರದೇ ಸದ್ಯಕ್ಕೆ ತಾತ್ಕಾಲಿಕವಾದರೂ ಕಾಲುವೆಗಳನ್ನು ಸುಧಾರಿಸಿಕೊಂಡು ಕಟ್ಟಕಡೆಯ ರೈತರಿಗೂ ನೀರುಮುಟ್ಟುವಂತೆ ಮಾಡಿಕೊಂಡಾಗ ಈ ಯೋಜನೆ ಯಶಸ್ವಿಯಾಗಲಿದೆ ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಚಿಂತಕ ಡಾ. ಪ್ರಕಾಶ ಭಟ್‌.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ