ಕನ್ನಡಪ್ರಭ ವಾರ್ತೆ ಹಾನಗಲ್ಲ
ಇಲ್ಲಿನ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುರಸಭೆ ಆಸ್ತಿ ಉಳಿಸಿಕೊಳ್ಳುವಲ್ಲಿ ಪುರಸಭೆ ಆಡಳಿತ ಸಂಪೂರ್ಣ ಬೆಂಬಲ ನೀಡಲಿದೆ. ಕಾನೂನುಗಳನ್ನು ಅನುಸರಿಸಿ ಕೆಲಸ ಮಾಡಲು ಯಾರೂ ಹಿಂದೆ ಸರಿಯುವುದು ಬೇಡ. ಅಕ್ರಮ ಕಟ್ಟಡಗಳು, ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಸರ್ವೇ ನಡೆಸಿ ಸಾರ್ವಜನಿಕರಿಗೂ ತೊಂದರೆಯಾಗದಂತೆ ಕ್ರಮ ಜರುಗಿಸೋಣ. ಹಿಂದೆ ಆದ ಲೋಪಗಳ ಬಗೆಗೆ ಚರ್ಚಿಸುತ್ತಲೇ ಇರುವ ಕಾಲ ಇದಲ್ಲ. ಈಗ ಆಗಬೇಕಾದ ಕೆಲಸದ ಬಗೆಗೆ ಗಮನ ಹರಿಸೋಣ. ಪಟ್ಟಣದಲ್ಲಿ ನಿರ್ಮಿಸಲು ಆಯೋಜಿಸಲಾದ ಶೌಚಾಲಯ ನಿರ್ವಹಣೆ ಬಗೆಗೆ ಗಂಭೀರವಾಗಿ ಚಿಂತನೆ ನಡೆಸಬೇಕು. ಅವುಗಳ ಸ್ವಚ್ಛತೆಗೆ ಗಮನ ನೀಡದಿದ್ದರೆ ಅವು ನಿರುಪಯುಕ್ತವಾಗುವ ಸಂದರ್ಭಗಳೇ ಹೆಚ್ಚು. ಅನಧಿಕೃತ ನಳಗಳನ್ನೂ ಶೋಧ ಮಾಡಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಮೃದ್ಧಿ-೨ ಯೋಜನೆಯಲ್ಲಿ ಪಟ್ಟಣದ ಕುಡಿಯುವ ನೀರಿಗಾಗಿ ₹೩೫.೫೪ ಕೋಟಿ ವೆಚ್ಚದಲ್ಲಿ ಕರ್ನಾಟಕ ನಗರ ಮತ್ತು ಪಟ್ಟಣ ನೀರು ಸರಬರಾಜು ನಿಗಮದಿಂದ ಯೋಜನೆ ಮಂಜೂರಾಗಿ ಟೆಂಡರ್ ಹಂತದಲ್ಲಿದೆ. ಧರ್ಮಾ ಜಲಾಶಯದಿಂದ ೧೮ ಕಿಮೀ ಪೈಪ್‌ಲೈನ್ ಮೂಲಕ ಹಾನಗಲ್ಲಿಗೆ ಕುಡಿಯುವ ನೀರೊದಗಿಸುವ ಯೋಜನೆ ಇದಾಗಿದೆ ಎಂದು ನಿಗಮದ ಅಧಿಕಾರಿ ಕುಮಾರ ಸಭೆಗೆ ತಿಳಿಸಿದರು.ಸ್ಲಂಬೋರ್ಡ್ ಮನೆ ನಿರ್ಮಾಣದಲ್ಲಿ ಹಲವು ಗೊಂದಲಗಳಿವೆ. ಪುರಸಭೆ ಪರವಾನಗಿ ಬೇಕು ಬೇಡ ಎಂಬ ವಿಷಯ, ಮನೆಯ ಅಳತೆ, ನಿರ್ಮಾಣದ ಕಾಲಾವಧಿ, ಹಕ್ಕುಪತ್ರ ಹೀಗೆ ಹಲವು ಸಮಸ್ಯೆಗಳ ನಡುವೆ ಸ್ಲಂಬೋರ್ಡ್ ಮನೆ ನಿರ್ಮಾಣ ನಡೆಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೂಡಲೇ ಸಮಸ್ಯೆ ಬಗೆಹರಿಸಿ ಮುಖ್ಯಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸದಸ್ಯರಾದ ವಿಕಾಸ ನಿಂಗೋಜಿ, ನಾಗಪ್ಪ ಸೌದತ್ತಿ, ಪರಶುರಾಮ ಖಂಡೂನವರ, ಎಸ್.ಕೆ. ಪೀರಜಾದೆ ಆಗ್ರಹಿಸಿದರು.
ಅಕ್ರಮ ಕಟ್ಟಡ ನಿರ್ಮಾಣದ ವಿಷಯಕ್ಕೆ ಪುರಸಭೆ ಮುಖ್ಯಾಧಿಕಾರಿಗಳ ಗಮನ ಸೆಳೆದರೂ ನಿರ್ಲಕ್ಷ ವಹಿಸಿದ್ದೇ ಇದು ದೊಡ್ಡ ಸಮಸ್ಯೆಯಾಗಲು ಕಾರಣವಾಗಿದೆ. ಸಾಕ್ಷ್ಯ ಸಹಿತ ಮಾಹಿತಿ ನೀಡಿದರೂ ನಿರ್ಲಕ್ಷ ಏಕೆ. ಇವುಗಳ ಬಗೆಗೆ ಕ್ರಮ ಜರುಗಿಸುವುದು ಯಾವಾಗ. ಜನಪ್ರತಿನಿಧಿಗಳು ವಾರ್ಡ್‌ನಲ್ಲಿ ಸಾರ್ವಜನಿಕರಿಂದ ಅಹವಾಲು ಕೇಳುವುದೇ ಆಗಿದೆ. ಪರಿಹಾರ ಸಾಧ್ಯವಾಗುತ್ತಿಲ್ಲ. ಪಟ್ಟಣದ ಸ್ವಚ್ಛತೆಯ ವಿಷಯದಲ್ಲಿ ತೀರ ನಿರ್ಲಕ್ಷ ಆಗಿದೆ ಎಂದು ಸದಸ್ಯೆ ವೀಣಾ ಗುಡಿ ಸಭೆಯ ಗಮನ ಸೆಳೆದರು.
ಸಭೆಯಲ್ಲಿ ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದಾಗೆಲ್ಲ, ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ. ನೀವು ಹೇಳುವ ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ಈಗಾಗಲೇ ಕ್ರಮ ಜರುಗಿಸಿದ್ದೇವೆ ಎಂದು ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಎಂಜಿನಿಯರ್ ಮಿರ್ಜಿ ವಿವರಿಸುತ್ತಿದ್ದರು. ಇದರಿಂದ ಸಮಸ್ಯೆಗೆ ಪರಿಹಾರವಿಲ್ಲ ಎಂದು ಸದಸ್ಯರು ಮುಖ್ಯಾಧಿಕಾರಿಗಳಿಗೆ ತಮ್ಮ ಅಭಿಪ್ರಾಯ ಹೇಳಿದಾಗಲೂ ಕಾದು ನೋಡುವುದು ಮಾತ್ರ ಸದಸ್ಯರ ಪಾಲಿಗೆ ಉಳಿಯಿತು.