ಕನ್ನಡಪ್ರಭ ವಾರ್ತೆ ಕುಶಾಲನಗರ
ಕಪ್ಪು ಹಣದ ಹೆಸರಿನಲ್ಲಿ ದೇಶದ ಜನರ ಬದುಕಿನ ಭರವಸೆ ಕಿತ್ತು ಹಾಕಿದ ಕೇಂದ್ರ ಸರ್ಕಾರ ಜನತೆಯನ್ನು ಕಷ್ಟದ ಬದುಕಿನತ್ತ ದೂಡಿದೆ. ದೇಶದಲ್ಲಿ ಹಣದುಬ್ಬರ ಆರ್ಥಿಕ ಏರುಪೇರು ಆಗಿದ್ದು ಜನಸಾಮಾನ್ಯನ ಬದುಕು ದುಸ್ತರವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಆರೋಪಿಸಿದ್ದಾರೆ.ಕುಶಾಲನಗರ ಕಾರು ನಿಲ್ದಾಣ ಆವರಣದಲ್ಲಿ ಸೋಮವಾರ ನಡೆದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸಚಿವ ಕೆ. ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಶಕ್ತಿ ಕುಸಿದಿದ್ದು ಈ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿದೆ ಎಂದರು.
ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕಾರ್ಯಕರ್ತರು ಪಕ್ಷದ ಬೆನ್ನೆಲುಬಾಗಿ ಕೆಲಸ ನಿರ್ವಹಿಸಬೇಕು ಎಂದರು.ಬಿಜೆಪಿ ಬಂಡವಾಳ ಶಾಹಿಗಳ ಪರ ಪಕ್ಷವಾಗಿದ್ದು ಶ್ರೀಮಂತ- ಬಡವರ ಅಂತರ ಅಧಿಕವಾಗುತ್ತಿದೆ, ದೇಶದಲ್ಲಿ ಪ್ರಜಾಪ್ರಭುತ್ವ ನಾಶವಾಗುತ್ತಿದೆ ಎಂದ ಅವರು, ಕಳೆದ ಸಾಲಿನಲ್ಲಿ ರಾಜ್ಯದಿಂದ ಆಯ್ಕೆಯಾದ ಸಂಸತ್ ಸದಸ್ಯರು ಕೇಂದ್ರದಲ್ಲಿ ಯಾವುದೇ ರೀತಿಯ ಜನಪರ ಧ್ವನಿ ಎತ್ತದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಕ್ಷೇತ್ರ ಶಾಸಕ ಡಾ .ಮಂತರ್ ಗೌಡ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಈ ಬಾರಿ ಬಿಜೆಪಿಯ ಬೇರು ಕಿತ್ತೊಗೆಯ ಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅಭ್ಯರ್ಥಿ ಲಕ್ಷ್ಮಣ್, ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ನೆನಪಿಸಿದರು.
ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದ ಪ್ರಮುಖರಿಗೆ ಸನ್ಮಾನಿಸಿ, ಗೌರವಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ್ ಮಾಚಯ್ಯ, ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ ಪಿ ಚಂದ್ರಕಲಾ, ಶಾಮ್, ಪಕ್ಷದ ವಿವಿಧ ವಿಭಾಗಗಳ ಪ್ರಮುಖರು ಪುರಸಭಾ ಸದಸ್ಯರು ಕಾರ್ಯಕರ್ತರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ನಿರೂಪಿಸಿದರು. ನಂಜುಂಡಸ್ವಾಮಿ ಸ್ವಾಗತಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ ವಂದಿಸಿದರು.