ಸೆಕ್ಯೂರಿಟಿ ಏಜೆನ್ಸಿ ಮೂಲಕ ಶಿಕ್ಷಕರ ನೇಮಕ ಹಿಂದೆ ಪ್ರಭಾವಿ: ಆಮ್‌ಆದ್ಮಿ

KannadaprabhaNewsNetwork |  
Published : May 28, 2024, 01:47 AM ISTUpdated : May 28, 2024, 06:42 AM IST
ಆಪ್‌ ಆದ್ಮಿ ಪಕ್ಷ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಬಿಬಿಎಂಪಿ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಹಿರಿಹಾಯ್ದಿದೆ.

 ಬೆಂಗಳೂರು :  ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಡಿಟೆಕ್ಟಿವ್‌– ಸೆಕ್ಯೂರಿಟಿ ಏಜೆನ್ಸಿಗಳಿಂದ ಯಾವುದೇ ಟೆಂಡರ್‌ ಕರೆಯದೇ ಶಿಕ್ಷಕರು, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆಮ್ ಆದ್ಮಿ ಪಕ್ಷ ಹರಿಹಾಯ್ದಿದೆ.

ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ। ಸತೀಶ್‌ ಕುಮಾರ್‌, ಬಿಬಿಎಂಪಿ ಶಾಲೆಗಳಲ್ಲಿ ಕಳಪೆ ಫಲಿತಾಂಶ ದಾಖಲಾಗುತ್ತಿದ್ದರೂ ತಲೆಕೆಡಿಸಿಕೊಳ್ಳದ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಬಿಬಿಎಂಪಿ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರಕ್ಕೆ ಶಿಕ್ಷಣದ ಗುಣಮಟ್ಟಕ್ಕಿಂತ ಏಜೆನ್ಸಿಗಳ ಲಾಬಿಯೇ ಮುಖ್ಯವಾಗಿದೆ. ಹೊಸ ಟೆಂಡರ್‌ ಕರೆಯದೆ ನೇಮಕಾತಿ ಪ್ರಕ್ರಿಯೆಗೆ ಆದೇಶಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಶಿಕ್ಷಣ ಇಲಾಖೆ ಮೂಲಕವೇ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದು ನೀಡಿದ್ದ ಭರವಸೆಯನ್ನು ರಾಜ್ಯ ಸರ್ಕಾರ ಹುಸಿಗೊಳಿಸಿದೆ. ನುಡಿದಂತೆ ನಡೆವ ಸರ್ಕಾರ ಎಂದು ಬೀಗುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊರಗುತ್ತಿಗೆ ಲಾಬಿಗೆ ಒಳಗಾಗಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹತ್ತಾರು ವರ್ಷಗಳಿಂದ ಡಿಟೆಕ್ಟಿವ್‌-ಸೆಕ್ಯೂರಿಟಿ ಏಜೆನ್ಸಿಗಳಿಂದಲೇ ಹೊರಗುತ್ತಿಗೆ ಮೇಲೆ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಇದರರ್ಥ ಶಿಕ್ಷಕರ ನೇಮಕಾತಿ ಹಿಂದೆ ದೊಡ್ಡ ಲಾಬಿಯಿದೆ. ಇದರ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರಿದ್ದಾರೆ. ಶೀಘ್ರದಲ್ಲಿಯೇ ಅವರು ಯಾರೆಂದು ದಾಖಲೆಗಳ ಸಮೇತ ಬಹಿರಂಗಗೊಳಿಸಲಿದ್ದೇವೆ ಎಂದರು.

ಈಗ ಕೆಲಸ ಮಾಡುತ್ತಿರುವವರಲ್ಲಿ 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಲವಾರು ಮಂದಿ ಇದ್ದಾರೆ. ಈಗ ಅವರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದರೆ ಅವರು ಎಲ್ಲಿಗೆ ಹೋಗಬೇಕು? ದಕ್ಷಿಣ ಮತ್ತು ಆರ್‌.ಆರ್‌.ನಗರ ವಲಯದ ಶಿಕ್ಷಕರ ನೇಮಕಾತಿ ಟೆಂಡರ್‌ ಆಗಿದೆ. ಇದರಲ್ಲಿ 600 ಮಂದಿ ಶಿಕ್ಷಕರು ಇದ್ದಾರೆ. ಶಿಕ್ಷಕರನ್ನು ಮಾರುಕಟ್ಟೆ ಸರಕಿನಂತೆ ಬಳಸಿಕೊಳ್ಳುತ್ತಿರುವ ವಿಚಾರ ಶಿಕ್ಷಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಪಾಠ ಮಾಡುತ್ತಿರುವ ಶಿಕ್ಷಕರು, ಉಪಾನ್ಯಾಸಕರಲ್ಲಿ ಹಲವರು ಡಾಕ್ಟರೇಟ್ ‌ಸೇರಿದಂತೆ ಉನ್ನತ ವಿದ್ಯಾಭ್ಯಾಸ ಮಾಡಿದವರು. ಅಂಥವರನ್ನು ಬಿಟ್ಟು ಪತ್ತೆದಾರಿ‌ ಸಂಸ್ಥೆಯ ಮೂಲಕ ಶಿಕ್ಷಕರನ್ನು ನೇಮಿಸಿಕೊಳ್ಳುವ ಕ್ರಮವೇ ಅಸಂಬದ್ಧ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 2024-25ನೇ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಇಲಾಖೆಯಿಂದ ಬಿಬಿಎಂಪಿ ಶಾಲೆ ಕಾಲೇಜುಗಳಿಗೆ ಶಿಕ್ಷಕರನ್ನು ಒದಗಿಸಲಾಗುವುದು. ಮೂಲ ಸೌಕರ್ಯಗಳನ್ನು ಬಿಬಿಎಂಪಿ ಒದಗಿಸಲಿದೆ ಎಂದು ಹೇಳಿದ್ದರು. ಇದನ್ನು ವಿರೋಧಿಸಿ ಸುಮಾರು 700ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರು ಶಾಲೆ ಬಹಿಷ್ಕರಿಸಿ ಪ್ರತಿಭಟಿಸಿದ್ದರು. ಆದರೆ ಇದಾವುದಕ್ಕೂ ಮಣಿಯದೆ ಅನರ್ಹ ಶಿಕ್ಷಕರಿದ್ದಾರೆ ಎಂದಿದ್ದರು. ಆದರೆ ಈಗ ಅದೇ ಶಿಕ್ಷಕರು ಅರ್ಹರಾಗಿದ್ದು ಹೇಗೆ ಎಂದು ಸತೀಶ್ ಕುಮಾರ್‌ ಪ್ರಶ್ನಿಸಿದರು.

ಯಾವ ಮಾನದಂಡದ ಅಡಿಯಲ್ಲಿ ಶಿಕ್ಷಕರ ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ನೀಡಲಾಗುತ್ತದೆ ಎಂಬುದನ್ನು ರಾಜ್ಯ ಸರ್ಕಾರ ಜನತೆಗೆ ತಿಳಿಸಬೇಕು.

-ಡಾ। ಸತೀಶ್‌ ಕುಮಾರ್‌, ನಗರ ಅಧ್ಯಕ್ಷ, ಆಮ್‌ ಆದ್ಮಿ ಪಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ