ಕಬ್ಬೂರು ಜಿಪಂ ಅಭ್ಯರ್ಥಿ ಆಯ್ಕೆ ಕುರಿತು ಹರಿದಾಡುವ ಮಾಹಿತಿ ಸುಳ್ಳು: ಶಾಸಕ ಬಸವರಾಜ ಶಿವಣ್ಣನವರ

KannadaprabhaNewsNetwork |  
Published : Oct 22, 2026, 02:00 AM IST
21ಎಚ್‌ವಿಆರ್3 | Kannada Prabha

ಸಾರಾಂಶ

ಮಂಜುನಾಥ ನೀಲಗುಂದ ಅವರಿಗೆ ಕಬ್ಬೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಕುರಿತು ತಾನಾಗಲಿ ಅಥವಾ ಪಕ್ಷದ ಹೈಕಮಾಂಡ್ ಆಗಲಿ ಯಾವುದೇ ಅಧಿಕೃತ ಭರವಸೆ, ಬೆಂಬಲ ಅಥವಾ ಪ್ರೋತ್ಸಾಹ ನೀಡಿಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದ್ದಾರೆ.

ಹಾವೇರಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹಾವೇರಿ ತಾಲೂಕಿನ ಕಬ್ಬೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳು ಮತದಾರರಲ್ಲಿ ಗೊಂದಲ ಮೂಡಿಸುತ್ತಿದ್ದು, ಪಕ್ಷದ ಹೈಕಮಾಂಡ್‌ನಿಂದ ಯಾವುದೇ ಅಧಿಕೃತ ಭರವಸೆ ನೀಡಿಲ್ಲ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟವಾದ ಬಳಿಕ ಕಬ್ಬೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಮಂಜುನಾಥ ನೀಲಗುಂದ ಅವರು ತಮ್ಮನ್ನು ಪ್ರಬಲ ಅಭ್ಯರ್ಥಿಯೆಂದು ಬಿಂಬಿಸಿಕೊಳ್ಳುತ್ತಾ, ಶಾಸಕರ ಭಾವಚಿತ್ರ ಬಳಸಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಕ್ಷೇತ್ರದ ಮತದಾರರು ಹಾಗೂ ಪಕ್ಷದ ಮುಖಂಡರಲ್ಲಿ ಗೊಂದಲ ಉಂಟಾಗಿದೆ.

ಮಂಜುನಾಥ ನೀಲಗುಂದ ಅವರಿಗೆ ಕಬ್ಬೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಕುರಿತು ತಾನಾಗಲಿ ಅಥವಾ ಪಕ್ಷದ ಹೈಕಮಾಂಡ್ ಆಗಲಿ ಯಾವುದೇ ಅಧಿಕೃತ ಭರವಸೆ, ಬೆಂಬಲ ಅಥವಾ ಪ್ರೋತ್ಸಾಹ ನೀಡಿಲ್ಲ. ಆದರೂ ಟಿಕೆಟ್ ತಮಗೇ ದೊರೆಯಲಿದೆ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುವುದು ಸರಿಯಲ್ಲ. ಇದೇ ರೀತಿ ತಮ್ಮ ಭಾವಚಿತ್ರವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಿದರೆ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪಕ್ಷದಲ್ಲಿ ಕಳೆದ 30ರಿಂದ 40 ವರ್ಷಗಳಿಂದ ತತ್ವ, ಸಿದ್ಧಾಂತ ಹಾಗೂ ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸುತ್ತಿರುವ ಅನೇಕ ಹಿರಿಯ ಮತ್ತು ಅನುಭವಿ ಮುಖಂಡರಿದ್ದಾರೆ. ಅವರ ಪಕ್ಷನಿಷ್ಠೆ, ಸೇವೆ ಹಾಗೂ ಸಂಘಟನೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪಕ್ಷದ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಆದ್ದರಿಂದ ಕಬ್ಬೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಊಹಾಪೋಹಗಳು ಹಾಗೂ ಅಧಿಕೃತವಲ್ಲದ ಮಾಹಿತಿಗಳಿಗೆ ಮತದಾರರು ಕಿವಿಗೊಡಬಾರದು. ಪಕ್ಷದ ಅಕೃತ ನಿರ್ಧಾರ ಪ್ರಕಟವಾಗುವವರೆಗೆ ಎಲ್ಲರೂ ಸಂಯಮದಿಂದ ಇರಬೇಕು. ವರಿಷ್ಠರು ಕೈಗೊಳ್ಳುವ ಅಂತಿಮ ನಿರ್ಧಾರಕ್ಕೆ ಬದ್ಧರಾಗಿ ಪಕ್ಷದ ಶಿಸ್ತು, ಒಗ್ಗಟ್ಟು ಹಾಗೂ ಸಂಘಟನೆಯ ಗೌರವ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಯುವಕ ನಾಪತ್ತೆ
ಕಾರಟಗಿಯಲ್ಲಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ರಥೋತ್ಸವ ಸಂಭ್ರಮ