ಕನ್ನಡಪ್ರಭ ವಾರ್ತೆ ಹಾಸನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ವಾಹನ ಚಾಲಕರಾಗಿ 26 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಶುಕ್ರವಾರ ವಯೋನಿವೃತ್ತಿಯಾದ ಎಚ್. ಎಸ್. ನಾಗರಾಜ್ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಮ್ಮ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ವಯೋನಿವೃತ್ತಿ ಎನ್ನುವುದು ಸರ್ಕಾರಿ ಸೇವೆಯಲ್ಲಿ ಸಹಜ. ಆದರೆ ಜೀವನದಲ್ಲಿ ವಯೋನಿವೃತ್ತಿ ಎನ್ನುವಂತಹದ್ದು ಇಲ್ಲ. ಕರ್ತವ್ಯದ ನಿಮಿತ್ತ ತಾವು ಕೆಲಸ ಮುಗಿಸಿ ಮನೆಗೆ ಹೋಗುವುದು ತಡರಾತ್ರಿಯಾದಾಗ ಸುರಕ್ಷಿತವಾಗಿ ನಾಗರಾಜ್ ಮನೆಗೆ ತಲುಪಿಸುತ್ತಿದ್ದರು. ಕೆಲಸದ ವೇಳೆ ತಮ್ಮ ಕುಟುಂಬದವರಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಿರುವುದಿಲ್ಲ. ಆದರೆ ಈಗ ಮನೆಯವರೊಂದಿಗೆ ಸಂತೋಷ ಹಾಗೂ ನೆಮ್ಮದಿಯಿಂದ ಜೀವನ ಕಳೆಯಿರಿ ಎಂದು ಶುಭ ಹಾರೈಸಿದರು.ಇಲಾಖೆ ನಿವೃತ್ತ ಸೂಪರಿಂಟೆಂಡೆಂಟ್ ಎಂ.ಎ.ಸುಬ್ಬೇಗೌಡ ಅವರು ಮಾತನಾಡಿ, ನಾಗರಾಜ್ ಅವರು ಬಹಳ ಶಿಸ್ತಿನಿಂದ ಕಚೇರಿಯ ಕೆಲಸಗಳನ್ನು ನಿಭಾಯಿಸುತ್ತಿದ್ದವರು. ಕಚೇರಿಯಲ್ಲಿನ ವಾಹನಗಳನ್ನೂ ಸಹ ಅಷ್ಟೆ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದವರು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೇಣು ಕುಮಾರ್ ಮಾತನಾಡಿ, ನಾವು ಚಿಕ್ಕವರಿದ್ದಾಗಿನಿಂದ ನಾಗರಾಜ್ ಅಣ್ಣ ಅವರನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಅವರು ನಮ್ಮಂತವರಿಗೆ ಸ್ಫೂರ್ತಿಯಾಗಿದ್ದಾರೆ. ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಅವರು ಎಲ್ಲರೊಟ್ಟಿಗೂ ವಿಶ್ವಾಸದಿಂದ, ಆತ್ಮೀಯವಾಗಿರುವ ವ್ಯಕ್ತಿ. ಸಾಮಾಜಿಕವಾಗಿ ಅನೇಕ ವಿಚಾರಗಳನ್ನು ಬಲ್ಲವರು. ಇಂದಿನಿಂದ ಅವರ ಹೊಸ ಜೀವನ ಆರಂಭವಾಗುತ್ತಿದೆ. ಅವರಿಗೆ ಅನಾರೋಗ್ಯದ ವೇಳೆಯಲ್ಲಿಯೂ ಕರ್ತವ್ಯ ನಿಷ್ಠೆಯನ್ನು ತೋರಿದವರಾಗಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಾಗರಾಜು ಅವರು, ಸತತ ೨೬ ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಿದ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದರಲ್ಲದೆ, ಕರ್ತವ್ಯದ ಸಂದರ್ಭದಲ್ಲಿದ್ದ ಎಲ್ಲಾ ವಾರ್ತಾಧಿಕಾರಿಗಳನ್ನು ಸ್ಮರಿಸಿದರು. ತಮ್ಮ ಪತ್ನಿ ವೃತ್ತಿ ಜೀವನದಲ್ಲಿ ಕರ್ತವ್ಯ ನಿರ್ವಹಿಸಲು ನೀಡಿದ ಸಹಕಾರವನ್ನು ಸ್ಮರಿಸಿದರು. ಇಲಾಖೆಯಲ್ಲಿ ಕಳೆದ ಅನುಭವಗಳು ಅಪಾರವಾಗಿವೆ. ಕೆಲಸದ ವೇಳೆಯಲ್ಲಿ ಯಾರ ಮನಸ್ಸಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಇರಲಿ. ನಮ್ಮ ಇಲಾಖೆಯ ಸಿಬ್ಬಂದಿಗೆ, ಪತ್ರಕರ್ತರಿಗೆ, ನನ್ನ ಸ್ನೇಹಿತರೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿಗೆ ನಾ ಆಭಾರಿಯಾಗಿದ್ದೇನೆ ಎಂದರು.
ಪ್ರಥಮ ದರ್ಜೆ ಸಹಾಯಕರಾದ ರವೀಂದ್ರ, ಕಲಾವಿದರಾದ ಬಿ.ಟಿ ಮಾನವ, ಸಿಬ್ಬಂದಿಯಾದ ಪ್ರಸಾದ್, ಸುರೇಶ್, ಪವನ್ ಕುಮಾರ್, ಅಂಬಿಕಾ ಮತ್ತಿತರರು ಹಾಜರಿದ್ದರು.