- ದಾಂಪತ್ಯಕ್ಕೆ ಕಾಲಿಟ್ಟ ಶಾಲಿನಿ, ಟಿ.ರಕ್ಷಿತಾ, ಎ.ರುಚಿತ । ಅಧಿಕಾರಿಗಳಿಂದ ಹಾರೈಕೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಶ್ರೀ ರಾಮ ನಗರದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಶುಕ್ರವಾರ ಮೂವರು ಮಹಿಳಾ ನಿವಾಸಿಗಳಾದ ಶಾಲಿನಿ (28), ಟಿ.ರಕ್ಷಿತಾ (21) ಮತ್ತು ಎ.ರುಚಿತ (24) ಅವರೊಂದಿಗೆ ಬದುಕು ಕಟ್ಟಿಕೊಳ್ಳಲು ಮೂವರು ಯುವಕರು ಮುಂದಾಗಿದ್ದು, ಅವರ ವಿವಾಹ ಮಹೋತ್ಸವಕ್ಕೆ ಮಹಿಳಾ ನಿಲಯ ಸಾಕ್ಷಿಯಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ ಅವರ ಸಂಪೂರ್ಣ ಮೇಲುಸ್ತುವಾರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಘಟಕಗಳು, ಮಹಿಳಾ ನಿಲಯದ ಅಧಿಕಾರಿ, ಸಿಬ್ಬಂದಿ ತಮ್ಮ ಸ್ವಂತ ಮಕ್ಕಳ ಮದುವೆ ಸಮಾರಂಭ ಎಂಬಂತೆ ಅಚ್ಚುಕಟ್ಟಾಗಿ ಮತ್ತು ಸಂಭ್ರಮದಿಂದ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.ಶ್ರೀ ರಾಮನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ನಿಲಯದ ನಿವಾಸಿ ಶಾಲಿನಿ ಅವರೊಂದಿಗೆ ನಾಗರಾಜ ಸತಿಪತಿಗಳಾದರು. ವಿಶೇಷವೆಂದರೆ, ಇಬ್ಬರಿಬ್ಬರೂ ಶ್ರವಣ ಹಾಗೂ ವಾಕ್ ದೋಷವಿದೆ. ಇನ್ನು ರಕ್ಷಿತಾ ಟಿ. ಅವರೊಂದಿಗೆ ಬಸವರಾಜ್, ರುಚಿತ ಅವರೊಂದಿಗೆ ಪ್ರವೀಣ ವಿವಾಹ ಸಂಭ್ರಮ ನೆರವೇರಿತು.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ರಾಜ್ಯ ಮಹಿಳಾ ನಿಲಯ ಸಂಸ್ಥೆಯಲ್ಲಿ ಈಗ ಹಾಲಿ 45 ನಿವಾಸಿಗಳು ಇದ್ದಾರೆ. ಇಲ್ಲಿಯವರೆಗೆ ಸಂಸ್ಥೆಯಲ್ಲಿ 46 ವಿವಾಹಗಳನ್ನು ಇಲಾಖೆ ನಿಯಮಾನುಸಾರ ನಡೆಸಿದ್ದು, ವರದಿ ಪಡೆದುಕೊಂಡಿದ್ದಾರೆ. ಈ ಹಿಂದೆ ವಿವಾಹವಾದ ಮಹಿಳೆಯರು ತಮ್ಮ ಸಂಸಾರದೊಂದಿಗೆ ಸುಖ- ಜೀವನ ನಡೆಸುತ್ತಿದ್ದಾರೆ.ವಿವಾಹ ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ.ವೇಲಾ, ನ್ಯಾಯಾಧೀಶ ಹಾಗೂ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ಜಿಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಡಿಎಚ್‌ಒ ಡಾ.ಷಣ್ಮುಖಪ್ಪ, ಮಹಿಳಾ ನಿಲಯದ ಅಧೀಕ್ಷಕರು, ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ಆಶೀರ್ವದಿಸಿದರು. ಆಮಂತ್ರಿತರು ವಧು-ವರರಿಗೆ ಉಡುಗೊರೆಗಳನ್ನು ನೀಡಿ ಹರಿಸಿದರು.
- - --31ಕೆಡಿವಿಜಿ45.ಜೆಪಿಜಿ:
ದಾವಣಗೆರೆಯಲ್ಲಿ ಶುಕ್ರವಾರ ರಾಜ್ಯ ಮಹಿಳಾ ನಿಲಯದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ವಧು-ವರರಿಗೆ ಗಣ್ಯರು, ಅಧಿಕಾರಿಗಳು ಶುಭ ಹಾರೈಸಿದರು.