ಅಂತರ್ಜಾಲದಲ್ಲಿ ಕನ್ನಡದಲ್ಲಿ ಮಾಹಿತಿ ಸಿಗಬೇಕು

KannadaprabhaNewsNetwork |  
Published : May 19, 2024, 01:46 AM IST
ನ್ನಡ ಭಾಷೆ ಉಳಿಯಬೇಕಾದ ರೆ ಅಂತರ್ಜಾಲದಲ್ಲಿ ಮಾಹಿತಿ ಸಾಹಿತ್ಯ ಕನ್ನಡದಲ್ಲಿ ಸಿಗುವಂತಾಗಬೇಕು  | Kannada Prabha

ಸಾರಾಂಶ

ಕನ್ನಡ ಭಾಷೆ ಉಳಿಯಬೇಕಾದರೆ ಅಂತರ್ಜಾಲದಲ್ಲಿ ಮಾಹಿತಿ ಸಾಹಿತ್ಯ ಅಥವಾ ಜ್ಞಾನ ಕನ್ನಡದಲ್ಲಿ ಸಿಗುವಂತಾಗಬೇಕು ಎಂದು ತಂತ್ರಜ್ಞಾನ ಬರಹಗಾರ, ಕರಾವಳಿ ವಿಕಿಮಿಡಿಯನ್ಸ್ ಕಾರ್ಯದರ್ಶಿ ಯು.ಬಿ.ಪವನಜ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕನ್ನಡ ಭಾಷೆ ಉಳಿಯಬೇಕಾದರೆ ಅಂತರ್ಜಾಲದಲ್ಲಿ ಮಾಹಿತಿ ಸಾಹಿತ್ಯ ಅಥವಾ ಜ್ಞಾನ ಕನ್ನಡದಲ್ಲಿ ಸಿಗುವಂತಾಗಬೇಕು ಎಂದು ತಂತ್ರಜ್ಞಾನ ಬರಹಗಾರ, ಕರಾವಳಿ ವಿಕಿಮಿಡಿಯನ್ಸ್ ಕಾರ್ಯದರ್ಶಿ ಯು.ಬಿ.ಪವನಜ ಹೇಳಿದರು. ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಹಮ್ಮಿಕೊಂಡಿದ್ದ ವಿಕಿಪೀಡಿಯ ಸಮುದಾಯ ಬೆಳವಣಿಗೆ ಕಾರ್ಯಾಗಾರದಲ್ಲಿ ಮಾತನಾಡಿ, ಕಥನ ಸಾಹಿತ್ಯ ಕನ್ನಡದಲ್ಲಿ ಲಭ್ಯವಿದೆ. ಆದರೆ, ಮಾಹಿತಿ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಕನ್ನಡದಲ್ಲಿ ಇಲ್ಲ. ಅಂತರ್ಜಾಲದಲ್ಲಿ ನಾವು ಹುಡುಕುವ ಮಾಹಿತಿಗಳು ಇಂಗ್ಲಿಷ್‌ನಲ್ಲೇ ಹೆಚ್ಚು ಸಿಗುತ್ತಿವೆ ಎಂದರು. ಜನರಲ್ಲಿ ಇಂಗ್ಲಿಷ್‌ ಪಿತ್ತ ಹೋಗಬೇಕು:

ನಮ್ಮಲ್ಲಿ ಇಂಗ್ಲಿಷ್ ಬಗ್ಗೆ ಭ್ರಮೆ ಇದೆ. ಇಂಗ್ಲಿಷ್ ಗೊತ್ತಿದ್ದರೆ ಮಾತ್ರ ಅವಕಾಶ ಸಿಗುತ್ತದೆ, ಹೆಚ್ಚಾಗುತ್ತದೆ ಎಂಬ ಭಾವನೆ ಇದೆ. ಇದು ಸುಳ್ಳು. ಕನ್ನಡ ಕಲಿತರೂ ಅವಕಾಶ ಇದೆ. ಜ್ಞಾನ ಸಂಪಾದನೆ ಮಾಡಬಹುದು. ಜನರಲ್ಲಿರುವ ಇಂಗ್ಲಿಷ್‌ನ ಪಿತ್ತ ಹೋಗಬೇಕು ಎಂದರೆ, ಪ್ರಪಂಚದ ಜ್ಞಾನ ಕನ್ನಡದಲ್ಲಿ ಲಭ್ಯವಾಗಬೇಕು ಎಂದರು.

ವಿಕಿಪೀಡಿಯಾದಲ್ಲಿ ಕನ್ನಡ ಮಾಹಿತಿ ಕಡಿಮೆ:

ವಿಕಿಪೀಡಿಯಾವು ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶವಾಗಿದ್ದು, ಜಗತ್ತಿನ ೩೩೨ ಭಾಷೆಗಳಲ್ಲಿ, ಭಾರತದ ೨೪ ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ. ವಿಕಿಪೀಡಿಯದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ೬೦ ಲಕ್ಷ ಲೇಖನಗಳಿದ್ದರೆ, ಕನ್ನಡದಲ್ಲಿ ೩೨ ಸಾವಿರವಷ್ಟೇ ಇದೆ ಎಂದರು. ವಿಕಿಪೀಡಿಯಾಗೆ ಲೇಖನ ಬರೆಯುವುದು ನಿಜವಾದ ಸಮಾಜಸೇವೆ:

ವಿಕಿಪೀಡಿಯದಲ್ಲಿ ಯಾರು ಬೇಕಾದರೂ ಮಾಹಿತಿ ಸಂಪಾದನೆ ಮಾಡಬಹುದು. ಇಲ್ಲಿ ಲೇಖನ ಬರೆದವರಿಗೆ ಸಂಭಾವನೆ ಕೊಡುವುದಿಲ್ಲ. ಗೌರವ, ಸನ್ಮಾನಗಳು ಇರುವುದಿಲ್ಲ. ಮನ್ನಣೆಯ ದಾಹ ಉಳ್ಳ ಸಾಹಿತಿಗಳಿಗೆ, ಲೇಖಕರಿಗೆ ಇದು ವೇದಿಕೆಯಲ್ಲ. ವಿಕಿಪೀಡಿಯಗೆ ಲೇಖನ ಬರೆಯುವುದು ನಿಜವಾದ ಸಮಾಜಸೇವೆ ಎಂದರು. ಶಿಬಿರದಲ್ಲಿ ವಿಕಿಪೀಡಿಯದಲ್ಲಿ ಲೇಖನ ಬರೆಯುವ ಬಗ್ಗೆ ತಿಳಿಸಿಕೊಡಲಾಗುವುದು. ಇದಲ್ಲದೇ ಅನುವಾದದ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಅನುವಾದವೂ ಈಗ ದೊಡ್ಡ ಉದ್ಯಮವಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಶಿಕ್ಷಕ ಬಿ.ಎಸ್.ವಿನಯ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗ ತಂತ್ರಜ್ಞಾನ ವೇಗವಾಗಿ ಸಾಗುತ್ತಿದೆ. ನಾವು ಅವುಗಳನ್ನು ತಿಳಿದುಕೊಳ್ಳದಿದ್ದರೆ ಉಳಿಗಾಲವಿಲ್ಲ. ಕಂಪ್ಯೂಟರ್, ಮೊಬೈಲ್ ಯುಗದಲ್ಲಿ ಅವುಗಳ ಬಗ್ಗೆ ಹೆಚ್ಚು ಗೊತ್ತಿಲ್ಲದಿದ್ದರೂ ಕಲಿತು ಕೊಂಡಿದ್ದೇವೆ. ಕನ್ನಡವನ್ನು ಓದುವುದಕ್ಕೆ ಬಾರದವರು ಕೂಡ ಈಗ ಮೊಬೈಲ್‌ನಲ್ಲಿ ಒಟಿಪಿಯನ್ನು ಓದಿ ಹೇಳುವ ಸಾಮರ್ಥ್ಯ ಹೊಂದಿದ್ದಾರೆ. ತಂತ್ರಜ್ಞಾನ ಈಗ ಅನಿವಾರ್ಯವಾಗಿದೆ. ಅದು ಗೊತ್ತಿಲ್ಲದಿದ್ದರೆ ಅನರಕ್ಷರಸ್ಥರಿಗೆ ಸಮವಾಗುತ್ತೇವೆ ಎಂದರು.ಮಾಹಿತಿಗಳು ನಮ್ಮದೇ ಭಾಷೆಯಲ್ಲಿ ಸಿಗುವಂತಾಗಬೇಕು:

ಅಂತರ್ಜಾಲದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರುವಷ್ಟು ಮಾಹಿತಿ ಕನ್ನಡದಲ್ಲಿ ಇಲ್ಲ. ಕನ್ನಡ ಭಾಷೆ ಬೆಳೆಯಬೇಕಾದರೆ, ಈಗಿನ ಅಗತ್ಯಕ್ಕೆ ತಕ್ಕಂತೆ ಭಾಷೆಯನ್ನು ಬಳಸಬೇಕು. ಜಗತ್ತಿನ ಮಾಹಿತಿಗಳು ನಮ್ಮದೇ ಭಾಷೆಯಲ್ಲಿ ಸಿಗುವಂತಾಗಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪವನಜ ಅವರು ರಾಜ್ಯದಾದ್ಯಂತ ಸುತ್ತಾಡಿ ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ಕನ್ನಡದಲ್ಲಿ ಹಾಕುವ ಬಗ್ಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು. ಕಾಲೇಜು ಪ್ರಾಂಶುಪಾಲ ಎನ್.ಮಹದೇವಸ್ವಾಮಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರಜ್ಞಾ ದೇವಾಡಿಗ, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ.ವರಪ್ರಸಾದ್, ಬೋಧಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ