ಸ್ಪರ್ಧಾತ್ಮಕ ಯುಗದಲ್ಲಿ ಮಾಹಿತಿ ತಂತ್ರಜ್ಞಾನ ಅವಶ್ಯಕ

KannadaprabhaNewsNetwork | Published : Dec 25, 2024 12:46 AM

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಹಾಗೂ ದೇಶ ವಿದೇಶದಲ್ಲಿ ಶಿಕ್ಷಣ ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಕಲಿತರಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತಿಕ ಕ್ರೀಡೆ, ವಿವಿಧ ವೇದಿಕೆಗಳ ಉದ್ಘಾಟನೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಹಾಗೂ ದೇಶ ವಿದೇಶದಲ್ಲಿ ಶಿಕ್ಷಣ ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಕಲಿತರಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಸೋಮವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್, ರೇವರ್ಸ್, ರೇಂಜರ್ಸ್, ಯುವ ರೆಡ್ ಕ್ರಾಸ್ ಹಾಗೂ ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಎನ್ನುವುದು ಪ್ರಮುಖ ಘಟ್ಟ . ಈ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಪ್ರಬುದ್ಧರಾಗಿರುತ್ತಾರೆ ಎಂದರು.

ನರಸಿಂಹರಾಜಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗಾಗಿ ಈ ಹಿಂದೆ ಒಟ್ಟು ₹2 ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಇದರಲ್ಲಿ ಕಾಲೇಜು ಸಮೀಪದ ಬಸ್ಸು ನಿಲ್ಧಾಣ, ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಆಡಳಿತ ಮಂಡಳಿಯವರು ಆಡಿಟೋರಿಯಮ್‌, ಶೌಚಾಲಯಕ್ಕೆ ಹಣ ಕೇಳಿದ್ದಾರೆ. ಶೀಘ್ರದಲ್ಲೇ ಹಣ ಬಿಡುಗಡೆ ಮಾಡುತ್ತೇನೆ ಎಂದರು.

ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ₹65 ಸಾವಿರ ಖರ್ಚು ಮಾಡುತ್ತಿದೆ. 45 ಸಾವಿರ ಕುಟುಂಬಗಳು ವರ್ಷಕ್ಕೆ ₹ 50 ಸಾವಿರ ರು. ಪ್ರತಿಫಲ ಪಡೆಯುತ್ತಿದ್ದಾರೆ. ಮುಂದೆ ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತದೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯ್ತಿ ರಸ್ತೆ ಅಭಿವೃದ್ದಿಗೆ ₹10 ಕೋಟಿ ಬಿಡುಗಡೆಯಾಗಿದೆ ಎಂದರು.

ಶಿವಮೊಗ್ಗ ಭದ್ರಾ ಕಾಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ದೇಶದ ಅಭಿವೃದ್ಧಿಗೆ ಯುವಜನ ಪಾತ್ರ ಬಹಳ ದೊಡ್ಡದು. ಶಿಕ್ಷಣ ಅಂದರೆ ಕೇವಲ ಅಂಕಗಳಿಸುವುದು ಮಾತ್ರವಲ್ಲ. ಮಾನವೀಯತೆ, ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಅತಿಥಿಯಾಗಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಈ ಹಿಂದೆ ಕಾಲೇಜಿನ ಕಾಂಪೌಂಡು ನಿರ್ಮಿಸಲು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅನುದಾನ ನೀಡಿದ್ದರು. ಈಗ ಪ್ರವಾಸೋದ್ಯಮ ನಿಗಮದ ಸಿ.ಎಸ್.ಆರ್. ಪಂಡಿನಿಂದ ₹27 ಲಕ್ಷ ಬಿಡುಗಡೆ ಮಾಡಿದ್ದಾರೆ. ಕಾಲೇಜಿನ ರಸ್ತೆಗೆ ಶಾಸಕರು ₹20 ಲಕ್ಷ ನೀಡಿದ್ದಾರೆ. ಕುವೆಂಪು ಹೇಳಿದಂತೆ ಸಮಾಜವನ್ನು ಸರ್ವಜನಾಂಗದ ತೋಟ ಮಾಡಲು ಎಲ್ಲರೂ ಕೈ ಜೋಡಿಸೋಣ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯವರು ಕಾಲೇಜಿಗೆ ಅನುದಾನ ನೀಡುವಂತೆ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಶಿವಮೊಗ್ಗ ಭದ್ರಾ ಕಾಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಅವರಿಗೆ ಮನವಿ ಪತ್ರ ಅರ್ಪಿಸಿದರು.

ಸಭೆ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ವಹಿಸಿದ್ದರು. ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಎನ್.ಧನಂಜಯಮೂರ್ತಿ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜುಬೇದ, ಕಿರಣ್, ಬಿ.ಎಸ್.ಸುಬ್ರಮಣ್ಯ,ಶಿಲ್ಪ, ಬಿನುಜೋಸೆಫ್, ಸುರೇಶ್,ಕಾಲೇಜಿನ ಇತಿಹಾಸ ಸಹ ಪ್ರಧ್ಯಾಪಕ ಡಿ.ನಾಗೇಶಗೌಡ, ಐ,ಕ್ಯೂ.ಎ.ಸಿ. ಸಂಚಾಲಕ ಆರ್.ಕೆ.ಪ್ರಸಾದ್,ಸಾಂಸ್ಕೃತಿಕ ವೇದಿಕೆ ಸಂಚಾಲಕ ಜೆ.ಮಂಜುನಾಥ್ ಇದ್ದರು.

Share this article