ಮುಳಗುಂದ: ಒಂದು ಸಮಾಜದ ಅಭಿವೃದ್ಧಿ ಅದರ ಮೂಲ ಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟದಿಂದ ಅಳೆಯಲಾಗುತ್ತದೆ. ಇತ್ತೀಚೆಗೆ ಸರ್ಕಾರ ಕೈಗೊಂಡಿರುವ ಹಲವು ಯೋಜನೆಗಳು ಈ ಎರಡೂ ಕ್ಷೇತ್ರಗಳಲ್ಲಿ ಚೈತನ್ಯ ತುಂಬುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ ಅದರಿಂದ ಪ್ರತಿಫಲ ಅಪೇಕ್ಷೆ ಖಂಡಿತ ಸಿಗಲಾರದು. ಆದುದರಿಂದಲೇ ಎಲ್ಲರೂ ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದರು.
ರಸ್ತೆ, ಕುಡಿಯುವ ನೀರು, ಆರೋಗ್ಯ ಕೇಂದ್ರ, ವಿದ್ಯುತ್ ಮತ್ತು ವಸತಿಗೃಹಗಳ ಕಾಮಗಾರಿಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಜನಸಾಮಾನ್ಯರಿಗೆ ಮೂಲ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನಜೀವನ ಸುಲಭವಾಗಲು, ಗ್ರಾಮ- ನಗರ ನಡುವಿನ ಅಂತರ ಕಡಿಮೆಯಾಗಲು ಇದು ಸಹಾಯಕವಾಗಲಿದೆ ಎಂದರು.ಸಮಾಜದ ಪ್ರಗತಿಗೆ ಒಟ್ಟಾರೆ ಸಮರ್ಪಕ ಕಾಮಗಾರಿ ಮತ್ತು ಗುಣಮಟ್ಟದ ಶಿಕ್ಷಣ, ಇವೆರಡೂ ಸಮಾಜವನ್ನು ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಮುನ್ನಡೆಸುವ ಬಲವಾದ ಆಧಾರಗಳು. ಮೂಲ ಸೌಕರ್ಯ ಒದಗಿದಾಗ ಜನಜೀವನ ಸುಲಭವಾಗುತ್ತದೆ. ಉತ್ತಮ ಶಿಕ್ಷಣ ದೊರೆತಾಗ ಮುಂದಿನ ಪೀಳಿಗೆಯ ಭವಿಷ್ಯ ಭದ್ರವಾಗುತ್ತದೆ ಎಂದರು.
ಈ ವೇಳೆ ಕಬಲಾಯತಕಟ್ಟಿಯ ದುರ್ಗಾದೇವಿ ದೇವಸ್ಥಾನದ ಸಮಿತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ಈ ವೇಳೆ ಸಿದ್ದು ಪಾಟೀಲ, ಅಶೋಕ ಮಂದಾಲಿ, ಮಲ್ಲಯ್ಯ ಕೆ. ಸೇರಿದಂತೆ ಗ್ರಾಮದ ಹಿರಿಯರು, ಗಣ್ಯರು ಇದ್ದರು.