ರಾಣಿಬೆನ್ನೂರು: ತಾಲೂಕಿನ ಸುಣ್ಣಕಲ್ಲಬಿದರಿ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ರಾಣಿಬೆನ್ನೂರು ತಾಲೂಕು ಸಮಿತಿ ಪದಾಧಿಕಾರಿಗಳೊಂದಿಗೆ ವಿದ್ಯಾರ್ಥಿಗಳು ಸಭೆ ನಡೆಸಿ ತಮ್ಮ ಅಳಲು ಹೇಳಿಕೊಂಡರು.ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನೂರಾರು ವಿದ್ಯಾರ್ಥಿಗಳು ದೂರದ ಊರಿನಿಂದ ಬಂದು ವಸತಿ ನಿಲಯದಲ್ಲಿ ಆಶ್ರಯ ಪಡೆದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ, ದುರಂತವೆಂದರೆ ವಿದ್ಯಾರ್ಥಿಗಳು ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯಗೊಂಡಿದೆ. 2012ರಲ್ಲಿ ಪ್ರಾರಂಭದ ವಸತಿ ನಿಲಯ 13 ವರ್ಷ ಕಳೆದರೂ ಸ್ವಂತ ಕಟ್ಟಡ ಇಲ್ಲ ಮತ್ತು ಯಾವುದೇ ಪ್ರಕ್ರಿಯೆಗಳಿಗೂ ಇಲಾಖೆಯ ಮುಂದಾಗಿಲ್ಲದಿರುವುದು ದುರಂತವೇ ಸರಿ. ಪ್ರಸ್ತುತವಾಗಿ ಬಾಡಿಗಿ ರೂಪದಲ್ಲಿ ದನಕರುಗಳ ಕೂಡಿಹಾಕುವ ತಗಡಿನ ಗೋದಾಮಿನಲ್ಲಿ ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಈವರೆಗೂ ಕನಿಷ್ಠ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲ್ಲ. 124ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದ ಪೈಕಿ ಕೇವಲ 4 ಬಕೆಟ್, 2 ಚಂಬು, ಮೂರು ಶೌಚಾಲಯ, 3 ಸ್ನಾನದ ಕೊಠಡಿ ಸೇರಿದಂತೆ ವಿಪರೀತವಾದ ಸಮಸ್ಯೆಗಳ ಗೂಡಾಗಿದೆ ಎಂದು ಅಳಲು ತೋಡಿಕೊಂಡರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಬಿಸಿಎಂ ಇಲಾಖೆಯಲ್ಲಿ ಭಾರಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ಮತ್ತು ಅಧಿಕಾರಿಗಳಿಗೆ ಬಿಲ್ ಮಾಡಲು ಲಂಚ ನಡೆದಿದೆ ಎಂಬುದಾಗಿ ಈ ಹಾಸ್ಟೆಲ್ ಅವ್ಯವಸ್ಥೆಯೇ ಸಾಕ್ಷಿಯಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿ ಈವರೆಗೂ ಹಾಸ್ಟೆಲ್‌ಗೆ ಬಿಡುಗಡೆಯಾದ ಅನುದಾನ, ಸೌಲಭ್ಯಗಳನ್ನು ಬಹಿರಂಗ ಪಡಿಸಬೇಕು. ಕೂಡಲೇ ಬೇಡಿಕೆಯ ಪಟ್ಟಿಯ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಹಾಗೂ ಸ್ವಂತ ಕಟ್ಟಡ ಒದಗಿಸಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉನ್ನತ ಅಧಿಕಾರಿಗಳು ಭೇಟಿ ನೀಡಬೇಕು, ಮನವಿಗೆ ಸ್ಪಂದಿಸಬೇಕು ಇಲ್ಲವಾದರೆ ಬೃಹತ್ ತೆರನಾದ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಹಾಸ್ಟೆಲ್ ಘಟಕ ಅಧ್ಯಕ್ಷ ಕೃಷ್ಣ ಇದಿಯನ್ನರ್, ಕಾರ್ಯದರ್ಶಿ ಭೀಮಣ್ಣ ಎಸ್ ಎ, ಉಪಾಧ್ಯಕ್ಷ ನಿಂಗರಾಜ ನೇರ್ಕಿ, ಅರುಣ ಜೋಗೇರ, ಅಭಿಷೇಕ ಕ್ವಾಗನೂರ, ಸ್ವಾಮಿನಿಂಗ ಜಿ., ಸಹಕಾಯದರ್ಶಿ ಶಿವರಾಜ ಭೋವಿ, ದಿಲೀಪ್ ಎಸ್.ಎಚ್., ನವೀನ ಸುಂಕಪುರ, ಚಂದ್ರಶೇಖರ ಕರ್ಜಗಿ, ಮಹಾರಾಜ ಬಿ. ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.