ಮೂಲಸೌಲಭ್ಯ, ರಸಗೊಬ್ಬರ, 94 ಸಿ ಸಮಸ್ಯೆ ಪರಿಹಾರ ಭರವಸೆ

KannadaprabhaNewsNetwork |  
Published : May 01, 2026, 02:15 AM IST
ಚಿತ್ರ :  30ಎಂಡಿಕೆ1 : ‘ಬೆಳಕ ಹುಡುಕುತ್ತಾ’ ನೇರಪೋನ್ ಇನ್ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಹಲೋ ಆಕಾಶವಾಣಿ ಬೆಳಕ ಹುಡುಕುತ್ತಾ ಬಾನುಲಿಯ ನೇರ ಪೋನ್‌ಇನ್ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಗುರುವಾರ ಪಾಲ್ಗೊಂಡು ಸಾರ್ವಜನಿಕರ ಕುಂದುಕೊರತೆ ಆಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಲೋ ಆಕಾಶವಾಣಿ ಬೆಳಕ ಹುಡುಕುತ್ತಾ ಬಾನುಲಿಯ ನೇರ ಪೋನ್‌ಇನ್ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಗುರುವಾರ ಪಾಲ್ಗೊಂಡು ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಒಂದು ಗಂಟೆಗಳ ಕಾಲ ನಡೆದ ನೇರ ಪೋನ್‌ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ 16 ಕ್ಕೂ ಹೆಚ್ಚು ಜನ ದೂರವಾಣಿ ಮೂಲಕ ಕರೆ ಮಾಡಿ ರಸ್ತೆ ಸರಿಪಡಿಸುವುದು, ಕುಡಿಯುವ ನೀರು ಪೂರೈಕೆ, ಬೀದಿ ದೀಪ ಅಳವಡಿಕೆ, ಮತ್ತಿತರ ಮೂಲ ಸೌಲಭ್ಯ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಒಳಗೊಂಡ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ವಿರಾಜಪೇಟೆ ತಾಲೂಕಿನ ಕೋತೂರು ಗ್ರಾಮದ ಗಣೇಶ್ ಕುಮಾರ್ ಅವರು ಎಫ್‌ಐಡಿ ಗುರುತಿನ ಚೀಟಿ ಇಲ್ಲದೆ ರಸಗೊಬ್ಬರ ಖರೀದಿಸಲು ತೊಂದರೆಯಾಗಿದೆ. ಆದ್ದರಿಂದ ಆರ್‌ಟಿಸಿ ಒದಗಿಸುವಂತಾಗಬೇಕು ಎಂದು ಕೋರಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಿಲ್ಲ. ಆತಂಕ ಪಡುವ ಅಗತ್ಯವೂ ಇಲ್ಲ ಎಂದರು. ಸುಂಟಿಕೊಪ್ಪ ಬಳಿಯ ಏಳನೇ ಹೊಸ ಕೋಟೆಯ ಹ್ಯಾರಿಸ್ ಮಾತನಾಡಿ ಜಾಗ ಸಂಬಂಧ ತಿದ್ದುಪಡಿಗೆ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಯಾವುದೇ ಕೆಲಸ ಆಗಿಲ್ಲ ಎಂದು ದೂರಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅವರು ಜಾಗ ತಿದ್ದುಪಡಿ ಸಂಬಂಧ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.

ಮಡಿಕೇರಿ ತಾಲೂಕಿನ ಚೇರಂಬಾಣೆ ಬಳಿಯ ಕೊಳಗದಾಳು ಗ್ರಾಮದ ವಾಣಿ ಅವರು ಕರೆ ಮಾಡಿ ನಮ್ಮ ಕುಟುಂಬದಲ್ಲಿ ಹಿರಿಯರೊಬ್ಬರು ಶೇ.100 ರಷ್ಟು ವಿಕಲಚೇತನರಿದ್ದು, ರಸ್ತೆ ಸಂಪರ್ಕವಿಲ್ಲದೆ ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸಬೇಕಿದೆ. ಯಾವುದೇ ದಿನಸಿ, ಮತ್ತಿತರ ಪದಾರ್ಥ ಕೊಂಡುಕೊಳ್ಳಲು ಚೇರಂಬಾಣೆಗೆ ಹೋಗಬೇಕಿದೆ. ರಸ್ತೆ ಸರಿ ಇಲ್ಲದೆ ಆಟೋ ಕೂಡ ಬರುವುದಿಲ್ಲ. ಡಾಂಬರೀಕರಣ ರಸ್ತೆ ನಿರ್ಮಿಸಬೇಕು ಎಂದು ಕೋರಿದರು. ಈ ಕುರಿತು ಜಿಲ್ಲಾಧಿಕಾರಿ ಅವರು ಆದ್ಯತೆ ಮೇಲೆ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಹಾಗೆಯೇ ಶಾಸಕರ ಗಮನ ಸೆಳೆಯಲಾಗುವುದು ಎಂದು ಹೇಳಿದರು. ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಸತೀಶ್ ಅವರು ಪ್ರವಾಹ ಪೀಡಿತ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು, ಜಾಗ ನೀಡುವಂತೆ ತಹಶೀಲ್ದಾರರಿಗೆ ಮನವಿ ಮಾಡಿ, ತೂಚಮಕೇರಿ ಬಳಿ ಜಾಗ ಗುರುತಿಸಲಾಗಿದೆ. ಆದರೆ ಸರ್ವೆ ಅವರು ಜಾಗ ಅಳತೆ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಜಾಗ ಅಳತೆ ಮಾಡುವ ಬಗ್ಗೆ ಸರ್ವೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಗುವುದು. ಹಾಗೆಯೇ ಶಾಸಕರ ಜೊತೆ ಚರ್ಚಿಸಿ ಪರಿಹರಿಸಲಾಗುವುದು ಎಂದರು. ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ಧಾಪುರದ ಚಂಗಪ್ಪ ಅವರು ಓಡಾಡಲು ಗ್ರಾಮ ನಕಾಶೆಯಡಿ ರಸ್ತೆ ಬಿಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಕಡತವು ಒಂದು ಟೇಬಲ್‌ನಿಂದ ಮತ್ತೊಂದು ಟೇಬಲ್‌ಗೆ ಬರಲು 3 ತಿಂಗಳು ತೆಗೆದುಕೊಳ್ಳುತ್ತಾರೆ. ಇದುವರೆಗೆ ಕೆಲಸವಾಗಿಲ್ಲ ಎಂದು ಗಮನ ಸೆಳೆದರು. ಈ ಸಂಬಂಧ ಅಧಿಕಾರಿಯನ್ನು ಕಳುಹಿಸಿಕೊಡಲಾಗುವುದು. ಗ್ರಾಮ ನಕಾಶೆ ಇದ್ದಲ್ಲಿ ಜಾಗ ಬಿಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು. ಚೇರಂಬಾಣೆಯ ರಘು ಅವರು ಮಾತನಾಡಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದು ಹೇಳಿದರು. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗ್ರಾ.ಪಂ.ಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಡಿಸಿ ಉತ್ತರಿಸಿದರು.

ಮಡಿಕೇರಿಯ ರೂಪ ಅವರು ಕರೆ ಮಾಡಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಬಳಿ ಕುಡಿಯುವ ನೀರು ಪೂರೈಸುವ ಪೈಪುಲೈನ್ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಿಲ್ಲ. ಹೀಗಾಗಿ ಮಕ್ಕಳು, ವಯಸ್ಸಾದವರು ಗುಂಡಿಗೆ ಬೀಳುತ್ತಿದ್ದು, ಆಯಾಯ ಕಾಮಗಾರಿ ಸಂದರ್ಭದಲ್ಲಿಯೇ ಗುಂಡಿ ಮುಚ್ಚುವಂತಾಗಬೇಕು. ಜೊತೆಗೆ ಬೀದಿ ದೀಪ ಅಳವಡಿಸುವಂತಾಗಬೇಕು ಎಂದು ಕೋರಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಗುವುದು ಎಂದರು. ಸುಂಟಿಕೊಪ್ಪ ಬಳಿಯ ಕಂಬಿಬಾಣೆಯ ಸಾರ್ವಜನಿಕರೊಬ್ಬರು ಕರೆ ಮಾಡಿ ಅರ್ಧ ಎಕರೆ ಜಾಗಕ್ಕಾಗಿ 1987 ರಿಂದ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅಲೆಯುತ್ತಿದ್ದೇನೆ, ಆದರೂ ಸಹ ಕೆಲಸ ಆಗಿಲ್ಲ ಎಂದು ದೂರಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು. ಸಿವಿಲ್ ವ್ಯಾಜ್ಯ ಇದ್ದಲ್ಲಿ ಡಿಸಿ ನ್ಯಾಯಾಲಯದಲ್ಲಿ ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.ಸೋಮವಾರಪೇಟೆಯ ಬೋಪಯ್ಯ ಅವರು ಮಾತನಾಡಿ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷತವಾಗಿ ಭೇಟಿ ನೀಡುವ ಕಾರ್ಯ ಆಗಬೇಕು ಎಂದರು. ಮತ್ತೊಬ್ಬರು ಪ್ರತಿ ತಿಂಗಳು ಜನಸ್ಪಂದನಾ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎಂ.ಶಕುಂತಲಾ ಅವರು ನಡೆಸಿಕೊಟ್ಟರು. ಮಡಿಕೇರಿ ಆಕಾಶವಾಣಿ ಮುಖ್ಯಸ್ಥ ಪಿ.ಎಂ.ಜಗದೀಶ್, ತಾ.ಪ.ಇಒ ಶೇಖರ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಆಹಾರ ಇಲಾಖೆ ಉಪ ನಿರ್ದೇಶಕರಾದ ಭೀಮರಾಯ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಶಿಷ್ಯ ಸಂಬಂಧ ಕೃಷ್ಣಾರ್ಜುನರಂತಿರಲಿ: ಡಾ.ಶ್ರೀಧರ ಪೈ
ಆರೋಗ್ಯ ಇಲಾಖೆಗೆ ಕೆಬಿಎಲ್‌ 3 ವಾಹನ ಹಸ್ತಾಂತರ