ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಶ್ರೀ ಸಾಲೂರು ಬೃಹನ್ಮಠದಲ್ಲಿ ನೂರಾರು ದೇವರಗುಡ್ಡ ಭಕ್ತರಿಗೆ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಜೀ ದೀಕ್ಷೆ ನೀಡಿ ಉಪದೇಶಿಸಿ ಆಶೀರ್ವಾದ ಮಾಡಿದರು. ಬಳಿಕ ದೇವರ ಗುಡ್ಡರ ಪರಂಪರೆ ಮತ್ತು ಸಂಪ್ರದಾಯದ ಬಗ್ಗೆ ವಿವರವಾಗಿ ಮಾತನಾಡಿದ ಅವರು, ಅನಾದಿಕಾಲದಿಂದಲೂ ಶ್ರೀಮಠದಲ್ಲಿ ದೇವರಗುಡ್ಡ ದೀಕ್ಷೆ ಪಡೆಯುವುದು ವಾಡಿಕೆ ಮತ್ತು ಸಂಪ್ರದಾಯವಾಗಿದೆ. ಉನ್ನತಾಧಿಕಾರಿಗಳು ಸೇರಿದಂತೆ ಲಕ್ಷಾಂತರ ಭಕ್ತರು ಜಾತಿ-ಧರ್ಮ ಮುಕ್ತವಾಗಿ ದೀಕ್ಷೆ ಪಡೆಯುತ್ತಾರೆ. ಮಹದೇಶ್ವರರ ಸಂಕಲ್ಪದಂತೆ ಎಲ್ಲರೂ ಸಮಾನರು ಅನ್ನುವ ಸಂಕೇತವೂ ಈ ಪದ್ಧತಿಯಾಗಿದೆ ಎಂದರು.
ಸೋಮವಾರ ಮತ್ತು ಶುಕ್ರವಾರ ಸಾಮಾನ್ಯವಾಗಿ ಗುಡ್ಡನಿಗೆ ದೀಕ್ಷೆ ನೀಡಲಾಗುತ್ತದೆ. ಮಹದೇಶ್ವರ ಒಕ್ಕಲಿನ ಯಾವುದೇ ಜನಾಂಗದವರಾದರೂ ಕೂಡ ಗುಡ್ಡ ದೀಕ್ಷೆ ಪಡೆಯಬಹುದು. ಈ ದೀಕ್ಷೆ ಪಡೆದವರು ಸಾಮಾನ್ಯವಾಗಿ ದುಶ್ಚಟಗಳಿಂದ ದೂರವಾಗಿದ್ದುಕೊಂಡು ಸನ್ಮಾರ್ಗಿಗಳಾಗಿ ಬಾಳುವರು. ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಬಾಲ್ಯ ಹಾಗೂ ಯೌವನದಲ್ಲಿ ಗುಡ್ಡರನ್ನಾಗಿ ಮಾಡುತ್ತಾರೆ. ಒಂದು ದಿನದ ಸಂಪಾದನೆಯನ್ನು ಶ್ರೀಮಠಕ್ಕೆ ಕಾಣಿಕೆಯಾಗಿ ಸಲ್ಲಿಸುವುದು ಇವರ ವಾಡಿಕೆಯಾಗಿದೆ ಎಂದರು.
ಪ್ರಸ್ತುತ ಮಹದೇಶ್ವರ ಕಾವ್ಯ ಜಗತ್ತಿನ ಪ್ರಮುಖ ಮಹಾಕಾವ್ಯಗಳಲ್ಲಿ ಒಂದೆದು ಗುರುತಿಸಲ್ಪಟ್ಟಿರುವುದಕ್ಕೆ ದೇವರ ಗುಡ್ಡರ ಕಾಣಿಕೆ ಅಮೋಘವಾದುದಾಗಿದೆ. ದೇವರ ಗುಡ್ಡರನ್ನು ಬಿಡಿಸುವುದು ಶ್ರೀ ಸಾಲೂರು ಮಠದಲ್ಲಿಯೇ. ಇಲ್ಲಿ ಪೀಠಾಧಿಪತಿಗಳು ದೇವರ ಗುಡ್ಡರಿಗೆ ದೀಕ್ಷೆಯನ್ನು ನೀಡಿ ಉಪದೇಶಿಸುತ್ತಾರೆ. ಅದರಂತೆ ಅವರು ಮಹದೇಶ್ವರರ ಕಾಯಕ- ದಾಸೋಹ ತತ್ವಗಳನ್ನು ಪಾಲಿಸಿಕೊಂಡು ಸಂಸ್ಕಾರಯುತರಾಗಿ ಬಾಳುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು. ನೂರಾರು ದೇವರ ಗುಡ್ಡರು ದೀಕ್ಷೆ ಪಡೆದು ಶಾಲೂರು ಶ್ರೀಗಳಿಂದ ಆಶೀರ್ವಚನ ಪಡೆದರು.ದಾಸೋಹ ವ್ಯವಸ್ಥೆ: