ಕನ್ನಡಪ್ರಭ ವಾರ್ತೆ ಕುಣಿಗಲ್ ಪಟ್ಟಣದ ಚಿಕ್ಕಕೆರೆ ಬಳಿ ಅರಕೆರೆ ಮೂಲದ ವ್ಯಕ್ತಿ ಹನುಮಂತರಾಜು(22) ರಸ್ತೆ ಅಪಘಾತದಲ್ಲಿ ಗಾಯಗೊಂಡ ವೇಳೆ ಸಮಯಕ್ಕೆ ಆಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಗಾಯಾಳುವನ್ನು ಸರಕು ಸಾಗಣೆ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ ಅಮಾನವೀಯ ಘಟನೆ ಶನಿವಾರ ನಡೆದಿದೆ. ಅರಕೆರೆ ಗ್ರಾಮದ ಯುವಕ ಹನುಮಂತರಾಜು ಕುಣಿಗಲ್ ನಿಂದ ತನ್ನ ಸ್ವಗ್ರಾಮಕ್ಕೆ ಹೋಗುವಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸವಾರರು 108 ವಾಹನಕ್ಕೆ ಕರೆ ಮಾಡಿದ್ದಾರೆ. ಈ ವೇಳೆ ಸುಮಾರು 1 ಗಂಟೆಗಳ ಕಾಲ ಗಾಯಾಳು ರಸ್ತೆಯಲ್ಲಿಯೇ ಬಿದ್ದದ್ದು ಕೊನೆಗೆ ದಾರಿಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ವಾಹನದಲ್ಲಿಯೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜೆಡಿಎಸ್ ಮುಖಂಡ ಕುಲಮೇ ಪಾಳ್ಯದ ಶಿವಣ್ಣ ಮಾಧ್ಯಮದ ಜೊತೆ ಮಾತನಾಡಿ ಕುಣಿಗಲ್ ಶಾಸಕರು 108 ವಾಹನದ ಬಗ್ಗೆ ರಾಜಕೀಯ ಎಂದು ಹೇಳುವುದನ್ನು ಬಿಟ್ಟು ಆದ ಘಟನೆಯನ್ನು ಸಮರ್ಥಿಸಿಕೊಳ್ಳದ ಹೊರತು ಅಲ್ಲಿಗೆ ಬೇಕಾದ ಸವಲತ್ತು ಹಾಗೂ ಜವಾಬ್ದಾರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಕುಣಿಗಲ್ ನಲ್ಲಿ 108 ವಾಹನ ಸಮಸ್ಯೆ ಉಂಟಾಗಿದೆ ಇದನ್ನು ಬಗೆಹರಿಸಲು ಪ್ರಯತ್ನಿಸಬೇಕೆಂದು ಒತ್ತಾಯಿಸಿದ್ದಾರೆ .
ಒಂದೇ ವಾರದಲ್ಲಿ ಮರುಕಳಿಸಿದ ಘಟನೆಇನ್ನೂ ಕಳೆ 5 ದಿನಗಳ ಹಿಂದೆ ಮಧುಮೇಹದಿಂದ ಬಳಲುತ್ತಿದ್ದ ಕುಣಿಗಲ್ ತಾಲ್ಲೂಕಿನ ಹೊಸಕೆರೆಯ ಚೌಡಮ್ಮದೇವಿ ದೇವಾಲಯದ ಅರ್ಚಕರಾದ ಕಾಶೀನಾಥ್ (53) ಅವರು ನವೆಂಬರ್ 16ರ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಊರಿಗೆ ಮರಳುತ್ತಿದ್ದರು. ಸಂಜೆ 5 ಗಂಟೆಯ ಸುಮಾರಿಗೆ ಕಿತ್ತನಾಮಂಗಲ ಗೊಲ್ಲರಹಟ್ಟಿ ಬಳಿ ಮಿನಿ ಸರಕು ಸಾಗಣೆ ವಾಹನವೊಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಆ್ಯಂಬುಲೆನ್ಸ್ ವಿಳಂಬ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರಿಗಾಗಿ ಸ್ಥಳೀಯರು 108 ತುರ್ತು ಸಹಾಯವಾಣಿಗೆ ಹಲವು ಬಾರಿ ಕರೆ ಮಾಡಿದರೂ ಸುಮಾರು ಎರಡು ಗಂಟೆಗಳ ಕಾಲ ವಾಹನ ಸ್ಥಳಕ್ಕೆ ಬರಲಿಲ್ಲ. ಕೊನೆಗೆ ಗ್ರಾಮಸ್ಥರು ಅನಿವಾರ್ಯವಾಗಿ ಸರಕು ಸಾಗಣೆ ವಾಹನವೊಂದರಲ್ಲಿ ಗಾಯಾಳುವನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಆದರೆ, ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು.