ದೇಶದ ಭವಿಷ್ಯ ರೂಪಿಸುವ ಯುವಜನತೆ ಇಂದು ಮಾದಕ ವಸ್ತುಗಳು ಸೇರಿದಂತೆ ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಕಲಘಟಗಿ:

ದೇಶದ ಭವಿಷ್ಯ ರೂಪಿಸುವ ಯುವಜನತೆ ಇಂದು ಮಾದಕ ವಸ್ತುಗಳು ಸೇರಿದಂತೆ ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಯುವಜನರಲ್ಲಿ ಜಾಗೃತಿ ಮೂಡಿಸಿ, ದುಶ್ಚಟಗಳಿಂದ ದೂರವಿಟ್ಟು ಸ್ವಾಸ್ಥ್ಯ ಜೀವನ ನಡೆಸಲು ಪ್ರೇರೇಪಿಸುವ ಉದ್ದೇಶದಿಂದ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮಾದಕ ವಸ್ತು ಮುಕ್ತ ಭಾರತ ನಿರ್ಮಾಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ ಹೊನೋಲೆ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಕಲಘಟಗಿ ವಕೀಲರ ಸಂಘ, ಪೊಲೀಸ್, ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲ್ಯಾಣ ಕಿರಣ ಸಮಾಜ ಸೇವಾ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಮಾದಕ ವಸ್ತು ಮುಕ್ತ ಭಾರತ ನಿರ್ಮಾಣ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಾದ್ಯಂತ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ವ್ಯಸನಮುಕ್ತ ಜೀವನಕ್ಕೆ ಮರಳಲು ಬಯಸುವವರು 14446 ಹಾಗೂ 1933 ಸಹಾಯವಾಣಿಗಳ ಸದುಪಯೋಗ ಪಡೆದುಕೊಳ್ಳಬೇಕು. ಯುವಜನರಲ್ಲಿ ಆಶಾಭಾವನೆ ಮೂಡಿಸುವ ಜತೆಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಶಿವನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ, ಕಲ್ಯಾಣ ಕಿರಣ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಬಿ.ವೈ. ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ. ರವಿ ಸೋಮಣ್ಣವರ, ಪಿಎಸ್‌ಐ ಕರವೀರಪ್ಪನವರ, ಸಿಡಿಪಿಒ ವಿದ್ಯಾ ಬಡಿಗೇರ ಸೇರಿದಂತೆ ಜಾಗೃತಿ ಅಭಿಯಾನದಲ್ಲಿ ಜಿ.ಇ. ಸ್ಕೂಲ್, ಜನತಾ ಇಂಗ್ಲಿಷ್ ಸ್ಕೂಲ್ ಹಾಗೂ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು, ಎನ್‌ಸಿಸಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ರವಿ ತೋಟಗಂಟಿ ನಿರೂಪಿಸಿದರು.