ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡದೆ ಅನ್ಯಾಯ: ಬಿಜೆಪಿ ಒಬಿಸಿ ಮೋರ್ಚಾ

KannadaprabhaNewsNetwork | Published : Dec 14, 2024 12:48 AM

ಸಾರಾಂಶ

ವಿವಿಧ ಅಭಿವೃದ್ಧಿ ನಿಗಮಗಳಿಗೆ ನೀಡಬೇಕಾದ ಅನುದಾನ ಬಿಡುಗಡೆ ಮಾಡದೆ, ಈ ವರ್ಗದ ಜನರಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿ, ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ತುಮಕೂರಿನಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರುಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ಅಭಿವೃದ್ಧಿ ನಿಗಮಗಳಿಗೆ ನೀಡಬೇಕಾದ ಅನುದಾನ ಬಿಡುಗಡೆ ಮಾಡದೆ, ಈ ವರ್ಗದ ಜನರಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿ, ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಬಿಜಿಎಸ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದರು.ಹಿಂದುಳಿದ, ಅತಿ ಹಿಂದುಳಿದ, ಅಲೆಮಾರಿ ಸಮುದಾಯಗಳು ಹಿಂದಿನ ಸರ್ಕಾರದಲ್ಲಿ ಪಡೆಯುತ್ತಿದ್ದ ಸ್ವಯಂ ಉದ್ಯೋಗ ಯೋಜನೆ, ವಿದ್ಯಾರ್ಥಿ ಅರಿವು ಯೋಜನೆ, ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್‌ವೆಲ್ ಕೊರೆಸುವ ಯೋಜನೆ ಸ್ಥಗಿತಗೊಂಡಿದೆ. ಹಿಂದುಳಿದ ವರ್ಗಕ್ಕೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ದೂರಿದರು.ತಮ್ಮಿಂದ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಮಾಡಿಕೊಡಿ, ವ್ಯವಸ್ಥೆಯನ್ನು ಹಾಳು ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷರು, ನಿಗಮಗಳಿಗೆ ಹಣ ನೀಡಿ ಆಯಾ ಸಮುದಾಯದ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಕಾಂಗ್ರೆಸ್‌ನವರು ಚುನಾವಣೆಗೆ ಬಳಸಿದ್ದಾರೆ, ಇವರಿಗೆ ಜನರ ಹಿತಕ್ಕಿಂಥಾ ಚುನಾವಣೆ ಗೆಲ್ಲುವುದೇ ಮುಖ್ಯವಾಗಿದೆ ಎಂದು ಟೀಕಿಸಿದರು.ರೈತ ಮೋರ್ಚಾ ಮುಖಂಡ ಎಸ್.ಶಿವಪ್ರಸಾದ್ ಮಾತನಾಡಿ, ದೇವರಾಜ ಅರಸು ಅವರ ನಂತರ ತಾವೇ ಹಿಂದುಳಿದ ನಾಯಕ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಯಾವುದೇ ಪ್ರಾತಿನಿದ್ಯ ಸಿಗದ ಹಿಂದುಳಿದ ವರ್ಗಗಳ ಸಣ್ಣಪುಟ್ಟ ಸಮುದಾಯಗಳ ಜನರಲ್ಲಿ ಆರ್ಥಿಕ ಶಕ್ತಿ ತುಂಬುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ನೀಡಿದ್ದ ಭರವಸೆಯನ್ನು ಈಡೇರಿಸದೆ ಜನರನ್ನು ದಿಕ್ಕುತಪ್ಪಿಸಿದರು. ರಾಜಕೀಯ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಮಂತ್ರ ಜಪಿಸುತ್ತಿದ್ದಾರೆ, ಈ ಸಮುದಾಯಗಳ ಕಲ್ಯಾಣಕ್ಕೆ ಅನ್ಯಾಯ ಮಾಡಿದ್ದಾರೆ ಎಂದರು.ಪರಿಶಿಷ್ಟ ಜಾತಿ ವರ್ಗದ ನಿಗಮಗಳ ಹಣವನ್ನು ತೆಗೆದುಕೊಂಡು ಅನ್ಯ ಉದ್ದೇಶಕ್ಕೆ ಬಳಸಿ ಆ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಆನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ. ನೈತಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿಯೂ ದಿವಾಳಿಯಾಗಿದೆ ಎಂದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಹಿಂದುಳಿದ ವರ್ಗದವರು ಆಶಾಭಾವನೆ ಹೊಂದಿದ್ದರು. ದೇವರಾಜ ಅರಸು ನಂತರ ಹಿಂದುಳಿದ ವರ್ಗದಲ್ಲಿ ದೊಡ್ಡ ಬದಲಾವಣೆ ತರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಒಂದೂವರೆ ವರ್ಷದಲ್ಲೇ ಇವರ ಮುಖವಾಡ ಕಳಚಿಬಿದ್ದಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ನಿಗಮಗಳಿಗೆ ಹಿಂದಿನ ಬೊಮ್ಮಾಯಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ 546 ಕೋಟಿ ರು. ಅನುದಾನ ಬಿಡುಗಡೆ ಮಾಡಿದರೆ, ಸಿದ್ದರಾಮಯ್ಯ ಸರ್ಕಾರ 1500 ಕೋಟಿ ರು. ಅನುದಾನ ಘೋಷಿಸಿ ಬಿಡುಗಡೆ ಮಾಡಿರುವುದು ಕೇವಲ 170 ಕೋಟಿ ರು. ಎಂದರು. ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಹಿಂದುಳಿದ ವರ್ಗವನ್ನು ಗುರಾಣಿ ಮಾಡಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಆ ವರ್ಗ ನೆನಪಿಸಿಕೊಳ್ಳುವಂತಹ ಯಾವುದೇ ಕೆಲಸ ಮಾಡಲಿಲ್ಲ. ಹಿಂದುಳಿದ ವರ್ಗದ ನಾಯಕ ಎಂದು ಹೇಳಿಕೊಂಡು ಆ ವರ್ಗಕ್ಕೆ ಏನೇನೂ ನೀಡದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಿಲುವುಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಚಾರ ಮಾಡಬೇಕು ಎಂದು ಹೇಳಿದರು. ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ ಮಾತನಾಡಿ, ಹಿಂದುಳಿದ ವರ್ಗಗಳ ಸಣ್ಣಪುಟ್ಟ ಸಮಾಜದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಸ್ಥಾಪನೆಯಾಗಿರುವ ಅಭಿವೃದ್ಧಿ ನಿಗಮಗಳಿಗೆ ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆ ಮಾಡದೆ ನಿರ್ಲಕ್ಷ ಮಾಡಿದೆ. ನಿಗಮಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿ ಇಲ್ಲವೆ ಎಲ್ಲಾ ನಿಗಮಗಳನ್ನು ಮುಚ್ಚಿಬಿಡಲಿ ಎಂದು ಹೇಳಿದರು. ಒಬಿಸಿ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಬನಶಂಕರಿ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಬಾಬು, ನಗರ ಅಧ್ಯಕ್ಷ ಹನುಮಂತಪುರ ಹನುಮಂತರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚೇತನ್, ನಗರಪಾಲಿಕೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ್, ವಿಷ್ಣುವರ್ಧನ್, ಪುಟ್ಟರಾಜು, ಸತ್ಯಮಂಗಲ ಜಗದೀಶ್, ಜೆಡಿಎಸ್ ಮುಖಂಡ ಶ್ರೀನಿವಾಸಪ್ರಸಾದ್, ಮುಖಂಡರಾದ ಶಂಕರ್, ನಂಜೇಗೌಡ, ಜೆ.ಜಗದೀಶ್, ಬಂಬೂ ಮೋಹನ್, ನಿಸರ್ಗ ರಮೇಶ್, ನಾಗರತ್ನಮ್ಮ, ಜ್ಯೋತಿ ತಿಪ್ಪೇಸ್ವಾಮಿ, ಕಟ್‌ವೆಲ್ ರಂಗನಾಥ್, ಕೆ.ಎಂ.ಶಿವಕುಮಾರ್, ಗಿರೀಶ್, ಹರೀಶ್ ಮೊದಲಾದವರು ಭಾಗವಹಿಸಿದ್ದರು.

ಹಿಂದುಳಿದ ವರ್ಗದ ಜನರ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಕೃಷಿ ಅನುದಾನ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರ ಹಿಂದುಳಿದವರ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ರು.ಗಳನ್ನು ನಿಗಮಗಳಿಗೆ ಬಿಡುಗಡೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ 1500 ಕೋಟಿ ರು.ಗಳಲ್ಲಿ ಕೇವಲ 170 ಕೋಟಿ ರು. ಬಿಡುಗಡೆ ಮಾಡಿದೆ.

ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಬಿಜೆಪಿ ಅಧ್ಯಕ್ಷ

Share this article