ಕರ್ನಾಟಕ ಪ್ರಾಂತ ರೈತ ಸಂಘದಿಂದ ರೈತ ಜಾಗೃತಿ ವಾಹನ ಜಾಥಾ
ರೋಣ ವಿಧಾನಸಭೆಯಿಂದ ಆಯ್ಕೆಯಾಗಿರುವ ಶಾಸಕರ ರಾಜಕೀಯ ಇಚ್ಚಾಶಕ್ತಿ ಕೊರತೆ ಮತ್ತು ಅವರ ಬೌದ್ದಿಕ ದಾರಿದ್ರ‍್ಯತನದ ಪರಿಣಾಮ ಕೃಷ್ಣ ಬಿ ಸ್ಕೀಮ್ ಮೂರನೇ ಹಂತದ ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ನಮ್ಮ ಗಜೇಂದ್ರಗಡ ಮತ್ತು ರೋಣ ತಾಲ್ಲೂಕುಗಳಿಗೆ ನೀರು ಹಂಚಿಕೆ ಮತ್ತು ನೀರಾವರಿ ಕ್ಷೇತ್ರವನ್ನು ಗುರುತಿಸುವಲ್ಲಿ ಬಾರಿ ಅನ್ಯಾಯವಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಎಂ.ಎಸ್. ಹಡಪದ ದೂರಿದರು.
ಕೃಷ್ಣಾ ಬೀ ಸ್ಕೀಂ ೩ನೇ ಹಂತದ ಕೊಪ್ಪಳ ಏತ ನೀರಾವರಿ ಯೋಜನೆ ಅಡಿಯಲ್ಲಿ ಗಜೇಂದ್ರಗಡ ತಾಲ್ಲೂಕಿನ ಬವು ದೊಡ್ಡ ಕೆರೆಗಳಾದ ಬೆಣಚಮಟ್ಟಿ, ನಾಗರಸಕೊಪ್ಪ, ಮ್ಯಾಕಲಝರಿ, ಗೋಗೇರಿ, ಮಾಟರಂಗಿ ಹಾಗೂ ಗಜೇಂದ್ರಗಡದ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿದ ಅವರು, ಈ ಯೋಜನೆಯಿಂದ ಕೊಪ್ಪಳ ಜಿಲ್ಲೆಗೆ ಒಟ್ಟು ೧೨.೮೧೫ ಟಿಎಂಸಿ ನೀರನ್ನು ಸೂಕ್ಷ್ಮ ಏತ ನೀರಾವರಿಗೆ ಕಾಯ್ದಿರಿಸಲಾಗಿದ್ದು, ಆ ಮೂಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ ಮತ್ತು ಕನಗೇರಿ ತಾಲ್ಲೂಕಿನ ನೂರಾರು ಗ್ರಾಮಗಳಿಗೆ ಸೇರಿದಂತೆ ಒಟ್ಟು ೧,೧೨೦೦೦ ಹೆಕ್ಟರ್ ಕೃಷಿ ಜಮೀನು ಸೂಕ್ಷಮ ಏತ ನೀರಾವರಿಗೆ ಒಳಪಡಲಿದೆ. ಆದರೆ ಗದಗ ಜಿಲ್ಲೆಯ ಅದರಲ್ಲೂ ಮುಖ್ಯವಾಗಿ ರೋಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಗಜೇಂದ್ರಗಡ ಮತ್ತು ರೋಣ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಪ್ಯಾಟಿ, ನೆಲ್ಲೂರು, ಕಲ್ಲಿಗನೂರು, ಮುಶಿಗೇರಿ, ರುದ್ರಾಪೂರ, ಬೇವಿನಕಟ್ಟಿ, ಅಮರಗಟ್ಟಿ, ಗುಳುಗುಳಿ, ಶಾಂತಗೇರಿ ಬೊಮ್ಮಸಾಗರ ಮತ್ತು ಸರ್ಜಾಪೂರ ಸೇರಿದಂತೆ ಒಟ್ಟು ೧೭ ಗ್ರಾಮಗಳಿಗೆ ಸೇರಿದ ೩೩೭೨ ಹೆಕ್ಟೇರ್ ಜಮೀನು ಮಾತ್ರ ಸೂಕ್ಷ್ಮ ಏತ ನೀರಾವರಿಗೆ ಒಳಪಡಲಿದೆ. ಹೀಗಾಗಿ ಈ ಯೋಜನೆಯಲ್ಲಿ ನಮ್ಮ ತಾಲ್ಲೂಕಿಗೆ ಬಾರಿ ಅನ್ಯಾವಾಗಿರುದು ಸ್ಪಷ್ಟವಾಗಿದೆ. ಮತ್ತೊಂದು ಕಡೆ ಗದಗ-ವಾಡಿ ರೈಲು ಯೋಜನೆಯಿಂದಲೂ ನಮಗೆ ಅನ್ಯಾಯವಾಗಿದೆ ಎಂದ ಅವರು, ಜನರನ್ನು ಪದೆ ಪದೆ ಮೋಸಗೊಳಿಸಲು ಸಾಧ್ಯವಿಲ್ಲ. ಈಗಾಗಲೇ ರೈತರು ಎಚ್ಚೆತ್ತುಕೊಂಡಿದ್ದಾರೆ. ನಿಮ್ಮ ಹೊಣೆಗೇಡಿತನದ ರಾಜಕೀಯದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ. ನಿಮಗೆ ಇರುವ ಆಯ್ಕೆ ನೀರು ತರಬೇಕು ಇಲ್ಲವೇ ಖುರ್ಚಿ ಖಾಲಿ ಮಾಡಬೇಕು. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕೂಲಿಕಾರ್ಮಿಕ ಮುಖಂಡ ಬಾಲು ರಾಠೋಡ ಮಾತನಾಡಿದರು. ವಕೀಲ ಫಯಾಜ್ ತೋಟದ, ಮುಖಂಡರಾದ ಚನ್ನಪ್ಪ ಗುಗಲೋತ್ತರ, ಮೈಬುಸಾಬ ಹವಾಲ್ದಾರ, ಚಂದ್ರು ರಾಠೋಡ, ಚತ್ರಪತಿ ನರಿಯವರ, ದುರಗಪ್ಪ ತಾತಲ, ಶರಣಪ್ಪ ಅವಾರಿ, ಮುತ್ತಪ್ಪ ಅಡಪಟ್ಟಿ, ನೀಲಪ್ಪ ಅವಾರಿ, ಹನುಮಗೌಡ ಪಾಟೀಲ, ಉಮೇಶ ಕುಂಕುಬಾಯಿ ಇತರರು ಇದ್ದರು.