ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಅನಂತನಾಥ ಬಸದಿಯು ಜೈನ ಧರ್ಮೀಯರ ಪ್ರಾಚೀನ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಉಪಾಧ್ಯಾಯ ಮನೆತನದವರು ಟ್ರಸ್ಟಿಗಳಾಗಿ ಬಸದಿಯ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಸ್ತುತ ಮೂವರು ಟ್ರಸ್ಟಿಗಳಿದ್ದು ಸಂಪ್ರದಾಯದಂತೆ ಸರದಿಯ ಪ್ರಕಾರ ಬಸದಿಯ ನಿತ್ಯ ಪೂಜೆ, ಧಾರ್ಮಿಕ ವಿಧಿವಿಧಾನ ಹಾಗೂ ಸ್ವಚ್ಛತೆಯ ಜವಾಬ್ದಾರಿ ನಿರ್ವಹಿಸಿಕೊಂಡು ಬರುತ್ತಿದ್ದರು.
ಈ ವರ್ಷದ ಪೂಜಾ ಕಾರ್ಯಗಳ ಜವಾಬ್ದಾರಿ ಸುಭಾಷ ಮಂಜಪ್ಪ ಉಪಾಧ್ಯಾಯ ಅವರಿಗೆ ಬಂದಿದ್ದು, ಅವರು ಊರಿನಲ್ಲಿ ಇಲ್ಲದ ಕಾರಣ ತಮ್ಮ ಬದಲಿಗೆ ಮತ್ತೊಬ್ಬ ಉಪಾಧ್ಯಾಯರನ್ನು ನೇಮಿಸಿ ಪೂಜಾ ಕಾರ್ಯ ನಡೆಸಲು ವ್ಯವಸ್ಥೆ ಮಾಡಿದ್ದರು. ಆದರೆ ಪೂಜಾ ಕಾರ್ಯ ಮಾಡುತ್ತಿದ್ದ ವ್ಯಕ್ತಿಯು ದೇವಸ್ಥಾನದ ಮುಂಬಾಗಿಲು ಬಂದ್ ಮಾಡಿರುವುದು ಹಾಗೂ ಪೂಜಾ ಕಾರ್ಯಗಳ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಯಿಂದ ಭಕ್ತರಲ್ಲಿ ಒಂದು ರೀತಿಯ ಆತಂಕ, ಬೇಸರ ಮೂಡಿದೆ.ರಾಜ್ಯ ಸರ್ಕಾರದ ಸುತ್ತೋಲೆಯಂತೆ ದೇವಸ್ಥಾನಗಳ ಮೂಲ ಅರ್ಚಕರಿಗೆ ಮಾಸಿಕ ₹೬,೦೦೦ ಹಾಗೂ ಸಹ ಅರ್ಚಕರಿಗೆ ₹೫,೦೦೦ ಸಂಭಾವನೆ ನೀಡುವ ವ್ಯವಸ್ಥೆಯಿದೆ. ಈ ಹಿನ್ನೆಲೆ ಅರ್ಚಕರ ಸಂಭಾವನೆ ಹಾಗೂ ಪೂಜಾ ಕಾರ್ಯಗಳ ನಿರ್ವಹಣೆಗೆ ಸಂಬಂಧಿಸಿದ ವಿಷಯವನ್ನು ಪರಿಶೀಲಿಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಭಕ್ತಾದಿಗಳಿಗೆ ದೇವರ ದರ್ಶನದಲ್ಲಿ ತೊಂದರೆಯಾಗದಂತೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗದಂತೆ ಸಮಸ್ಯೆ ಪರಿಹರಿಸಬೇಕು ಎಂದು ಜೈನ ಸಮಾಜದ ಪದಾಧಿಕಾರಿಗಳು, ಬಾಂಧವರು ತಹಸೀಲ್ದಾರರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಉಪತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು.