ಗಂಗಾವತಿ: ತಾಲೂಕಿನ ಸಾಣಾಪುರ ಗ್ರಾಮ ಪಂಚಾಯಿತಿ ಪಿಡಿಒ ವತ್ಸಲಾ ಅವರ ವಿರುದ್ಧ ಸರ್ಕಾರಿ ಅನುದಾನ ದುರುಪಯೋಗ ಹಾಗೂ ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ವಾಸ್ತವಾಂಶ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವ ಕುರಿತಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ನಾಲ್ವರು ಅಧಿಕಾರಿಗಳ ತನಿಖಾ ತಂಡವನ್ನು ರಚಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಸಿದ್ದಾರೆ.
ಇದೀಗ ಕೊಪ್ಪಳ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಕೊಪ್ಪಳ ತಾಪಂ ಸಹಾಯಕ ನಿರ್ದೇಶಕ ಮಹೇಶ, ಕೊಪ್ಪಳ ಸಾಮಾಜಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಎಂ., ಕೊಪ್ಪಳ ಜಿ.ಪಂ. ಲೆಕ್ಕಾಧಿಕಾರಿ ರಫೀಕ್ ಮತ್ತು ಜಿಲ್ಲಾ ಪಂಚಾಯತಿಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಶ್ ಅವರನ್ನು ಒಳಗೊಂಡ ತಂಡವನ್ನು ರಚಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಆದೇಶಿದ್ದಾರೆ.
ಸಾಣಾಪುರ ಗ್ರಾಮದ ನ್ಯಾಯವಾದಿ ಬೆಟ್ಟಪ್ಪ ಹನುಮಂತಪ್ಪ ಅವರು ಪಿಡಿಒ ವತ್ಸಲಾ ವಿರುದ್ಧ ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ಸಲ್ಲಿಸಿದ್ದರು. ಸರ್ಕಾರಿ ಅನುದಾನದ ದುರುಪಯೋಗ ಹಾಗೂ ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು.ಗ್ರಾಮದ ಒಂದನೇ ವಾರ್ಡ್‌ನಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಪಿಡಿಒ ಅವರು ಕುಮ್ಮಕ್ಕು ನೀಡಿದ್ದಾರೆ. ಕುಡಿಯುವ ನೀರಿನ ಪೈಪ್‌ಲೈನ್ ಸ್ವಚ್ಛತೆ ಕೈಗೊಳ್ಳದಿರುವುದು ಹಾಗೂ ಗ್ರಾಮದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸದಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದರು.