ಸದಾಶಿವ ವರದಿಯಿಂದ 99 ಸಮುದಾಯಗಳಿಗೆ ಅನ್ಯಾಯ

KannadaprabhaNewsNetwork | Published : Oct 27, 2024 2:36 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಈ ಹಿಂದೆ ತಯಾರಿಸಲಾದ ಸದಾಶಿವ ಆಯೋಗದ ವರದಿಯನ್ನೇ ಯಥಾವತ್ತಾಗಿ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿದೆ. ಇದರಿಂದ ಲಂಬಾಣಿ, ಭೋವಿ, ಒಡ್ಡರ, ಕೊರಮ, ಕೊರಚ ಸೇರಿದಂತೆ 99 ಸಮುದಾಯಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಇದನ್ನು ಇಲ್ಲಿಗೆ ಕೈಬಿಡಬೇಕು ಎಂದು ಸೇವಾಲಾಲ ಸೇನೆ ಜಿಲ್ಲಾಧ್ಯಕ್ಷ ಸುರೇಶ ಚವ್ಹಾಣ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಈ ಹಿಂದೆ ತಯಾರಿಸಲಾದ ಸದಾಶಿವ ಆಯೋಗದ ವರದಿಯನ್ನೇ ಯಥಾವತ್ತಾಗಿ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿದೆ. ಇದರಿಂದ ಲಂಬಾಣಿ, ಭೋವಿ, ಒಡ್ಡರ, ಕೊರಮ, ಕೊರಚ ಸೇರಿದಂತೆ 99 ಸಮುದಾಯಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಇದನ್ನು ಇಲ್ಲಿಗೆ ಕೈಬಿಡಬೇಕು ಎಂದು ಸೇವಾಲಾಲ ಸೇನೆ ಜಿಲ್ಲಾಧ್ಯಕ್ಷ ಸುರೇಶ ಚವ್ಹಾಣ ಆಗ್ರಹಿಸಿದರು.

ನಗರದಲ್ಲಿ ನಡೆದ ಲಂಬಾಣಿ, ಭೋವಿ, ಕೊರಮ ಸಮುದಾಯಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗ ಪ್ರತಿಯೊಂದು ಕಡೆಗೂ ತೆರಳದೆ ಒಂದು ಮನೆಯಲ್ಲಿ ಕುಳಿತು ವರದಿ ತಯಾರಿಸಿದೆ. ಹೀಗಾಗಿ ಬಿಜೆಪಿ ಸರ್ಕಾರವಿದ್ದಾಗ ಸದಾಶಿವ ಆಯೋಗದ ವರದಿ ಸ್ಥಗಿತಗೊಳಿಸಿ ಕಾಂತರಾಜ ವರದಿಯನ್ನು ಪುರಸ್ಕರಿಸಿ ಒಳಮೀಸಲಾತಿಗಾಗಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಆ ಸಮಯದಲ್ಲಿ ಕೆಲವರು ವಿರೋಧಿಸಿದರು. ಬಳಿಕ ಒಳ ಮೀಸಲಾತಿ ವಿಚಾರವನ್ನು ನ್ಯಾಯಾಲಯ ರಾಜ್ಯ ಸರ್ಕಾರದ ಮೇಲೆ ಬಿಟ್ಟಿದ್ದರಿಂದ ಈಗ ಅವರು ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಚುನಾವಣೆ ವೇಳೆ ಒಳಮೀಸಲಾತಿ ವಿಚಾರ ಮುಂದಿಟ್ಟುಕೊಂಡ ಕಾಂಗ್ರೆಸ್ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸದಾಶಿವ ವರದಿ ಜಾರಿ ಆಗದಂತೆ ತಡೆಯುತ್ತೇವೆ ಎಂದಿದ್ದರು. ಹೀಗಾಗಿ ಬಂಜಾರಾ ಸಮುದಾಯದವರು ಬಿಜೆಪಿ ಹಟಾವೊ ತಾಂಡಾ ಬಚಾವೋ ಎಂದು ಅಭಿಯಾನ ನಡೆಸಿದರು. ನಮ್ಮ ಸಮುದಾಯದ ಕಿವಿಯಲ್ಲಿ ಹೂವಿಟ್ಟು ಚುನಾಯಿತರಾದ ಬಳಿಕ ಕಾಂಗ್ರೆಸ್ ಸದಾಶಿವ ವರದಿ ಜಾರಿಮಾಡುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಕೊರಮ ಸಮಾಜದ ಜಿಲ್ಲಾಧ್ಯಕ್ಷ ರವೀಂದ್ರ ಜಾಧವ ಮಾತನಾಡಿ, ರಾಜಕೀಯ ಪಕ್ಷಗಳು ಓಟ್ ಬ್ಯಾಂಕ್‌ಗಾಗಿ ಸಂವಿಧಾನವನ್ನು ವಿರೋಧ ಮಾಡಿ ಇಂತಹ ಕಾಯ್ದೆ ಮಾಡುತ್ತಿದ್ದಾರೆ. ಅಹಿಂದ ನಾಯಕ ಸಿದ್ಧರಾಮಯ್ಯನವರು ಸದಾಶಿವ ಆಯೋಗದ ವರದಿ ಜಾರಿ ಮಾಡಲು ಬಿಡುವುದಿಲ್ಲ ಎಂದಿದ್ದರು.ನುಡಿದಂತೆ ನಡೆದು, ಶೋಷಿತ ಸಮಾಜಗಳಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದರು.

ರಾಷ್ಟ್ರೀಯ ಬಂಜಾರ ಪರಿಷತ್‌ ಯುವ ಘಟಕದ ರಾಜ್ಯಾಧ್ಯಕ್ಷ ಪ್ರಕಾಶ ಚವ್ಹಾಣ ಮಾತನಾಡಿ, ಕೇವಲ ಒಂದು ಸಮಾಜವನ್ನು ಗುರಿಯಾಗಿಸಿ ತಯಾರಿಸಿದ ಸದಾಶಿವ ಆಯೋಗದ ವರದಿ ಕೈ ಬಿಡಬೇಕು. ತಮ್ಮ ಸಮುದಾಯಕ್ಕೆ ಲಾಭವಾಗುಂತೆ ಮಾಡಿಕೊಂಡಿದ್ದಾರೆ. ಅದನ್ನು ಕೈಬಿಟ್ಟು ಹೊಸ ಜಾತಿಗಣತಿ ಆಧಾರದ ಮೇಲೆ ಒಳ‌ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಚುನಾವಣೆ ವೇಳೆ ಭರವಸೆ ನೀಡಿ, ನಮ್ಮ ಮತಗಳಿಂದ ಆರಿಸಿಬಂದು ಈಗ ನಮಗೆ ಅನ್ಯಾಯ ಮಾಡುತ್ತಿದ್ದೀರಿ. ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ಒಳ ಮೀಸಲಾತಿ ಮಾಡಬೇಕು. ಇಲ್ಲವಾದರೆ ಕಾಂಗ್ರೆಸ್ ಹಠಾವೋ ಅಭಿಯಾನ ಕೈಗೆತ್ತಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಂಜಾರಾ ಸಮಾಜದ ಗುರುಗಳಾದ ಗೋಪಾಲ ಮಹಾರಾಜರು, ಮುಖಂಡರಾದ ರವೀಂದ್ರ ಜಾಧವ್, ರಾಜಶೇಖರ ಭಜಂತ್ರಿ, ಚಂದ್ರಶೇಖರ ರಾಠೋಡ, ರವಿ ಲಮಾಣಿ, ಅಪ್ಪು ರಾಠೋಡ, ಕಿರಣ ನಾಯಕ ಸೇರಿದಂತೆ ಲಂಬಾಣಿ, ಭೋವಿ, ಒಡ್ಡರ, ಕೊರಮ ಸಮಾಜದ ಮುಖಂಡರು ಉಪಸ್ಥಿತರಿದ್ದರು.-------------

Share this article