ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಾತಿ ಜನ ಗಣತಿ ವರದಿ ದೋಷ ಪೂರಿತ ವರದಿಯಾಗಿದೆ, ಈ ವರದಿಯಲ್ಲಿ ಉಪ್ಪಾರ ಜನಾಂಗದವರಿಗೆ ಅನ್ಯಾಯವಾಗಿದೆ. ಸರ್ಕಾರ ಇನ್ನೊಮ್ಮೆ ಸಮೀಕ್ಷೆ ನಡೆಸಿ ವರದಿ ಸಿದ್ದ ಪಡಿಸಬೇಕು ಎಂದು ಉಪ್ಪಾರ ಮಹಾ ಸಭಾ ರಾಜ್ಯ ಉಪಾಧ್ಯಕ್ಷ ಬಿ.ವೆಂಕಟೇಶ್ ಆಗ್ರಹಿಸಿದರು.ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರವು ಇತ್ತೀಚೆಗೆ ಜಾತಿ ಗಣತಿ ವರದಿಯನ್ನ ಸ್ವೀಕರಿಸಿದೆ. ಈ ವರದಿ ಸಾರ್ವಜನಿಕರಲ್ಲಿ ಸಂದೇಹ ಹುಟ್ಟುಹಾಕಿದೆ. ಸುಮಾರು ಏಳೆಂಟು ವರ್ಷಗಳ ಹಿಂದೆ ಜಾತಿ ಗಣತಿ ಸಿದ್ದ ಪಡಿಸಿದ್ದಾರೆ. ಆ ಜಾತಿ ಗಣತಿ ವರದಿ ಸಮರ್ಪಕವಾಗಿ ಇಲ್ಲ ಎಂದರು.
ವರದಿಯಲ್ಲಿ ಜನಸಂಖ್ಯೆ ಕುಸಿತಜಾತಿ ಗಣತಿಯಲ್ಲಿ ಉಪ್ಪಾರರ ಜನಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ದೋಷಪೂರಿತ ವರದಿಯನ್ನ ಒಪ್ಪಿಕೊಳ್ಳುವದರಿಂದ ಅನ್ಯಾಯವಾಗಲಿದೆ. ಸರ್ಕಾರ ಅನೇಕರಿಗೆ ಶಿಕ್ಷಣ, ರಾಜಕೀಯ, ಉದ್ಯೋಗ ಹಾಗೂ ವ್ಯವಸಾಯ ಸೇರಿದಂತೆ ಅನೇಕ ಜಾತಿ ಉಪಜಾತಿಗಳಿಗೆ ಅನ್ಯಾಯ ಆಗಬಹುದು. ನೂರಾರು ಉಪಜಾತಿಗಳನ್ನು ವರದಿಯಲ್ಲಿ ಕೈ ಬಿಟ್ಟಿರೋದು ಅತ್ಯಂತ ಆಘಾತಕಾರಿಯಾಗಿದೆ ಎಂದರು.
ರಾಜ್ಯದಲ್ಲಿ ಉಪ್ಪಾರ ಜನಸಂಖ್ಯೆ ಸುಮಾರು 25 ಲಕ್ಷಕ್ಕೂ ಹೆಚ್ಚು ಇದೆ. ಆದರೆ ವರದಿಯಲ್ಲಿ ಐದಾರು ಲಕ್ಷಕ್ಕೆ ಇಳಿಸಿದ್ದಾರೆ. ಈ ವರದಿಗೆ ಬಹುತೇಕ ಉಪ್ಪಾರರ ವಿರೋಧವಿದೆ. ಸಮಾಜದ ಶ್ರೀಗಳು, ಪ್ರಮುಖರು, ಗಣ್ಯ ವ್ಯಕ್ತಿಗಳು, ಮಠಾಧೀಶರು ಸಮಾಲೋಚನೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ನಮ್ಮ ನಿಲುವು ಯಾವ ಜಾತಿಗು ಅನ್ಯಾಯವಾಗಬಾರದು ಎಂಬುದಾಗಿದೆ ಎಂದರು.29ರಂದು ವಧು-ವರರ ಸಮಾವೇಶ
ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾವತಿಯಿಂದ ಏಪ್ರಲ್ 20 ರ ಭಾನುವಾರದಂದು ಬೆಂಗಳೂರಿನ ಆನಂದರಾವ್ ಸರ್ಕಲ್ ನ ರಿಯ್ಯಾಲ್ಟೋ ಹೋಟೆಲ್ ನಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ಉಪ್ಪಾರ ಸಮಾಜದ ವಧು-ವರರ ಮತ್ತು ಪಾಲಕರ ಸಮಾಗಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವಿವಿಧ ರಾಷ್ಟ್ರಗಳಿಂದ ಮತ್ತು ವಿವಿಧ ರಾಜ್ಯಗಳಿಂದ ಉಪ್ಪಾರ ಸಮಾಜದ ಹಲವಾರು ವಧು ಮತ್ತು ವರರು ಆಗಮಿಸುತ್ತಿದ್ದಾರೆ. ಸಮಾಜ ಭಾಂದವರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಉಪ್ಪಾರ ಮಹಾ ಸಭಾದ ಸೋಮಶೇಖರ್,ಕಾಂತರಾಜು,ವಿ.ಶಿವಪ್ಪ, ಆನಂದ್,ಗೋಪಾಲ,ಮಂಜುನಾಥ್ ಇದ್ದರು.