ತುಮಕೂರು : ಭಾರತೀಯ ಜನತಾ ಪಾರ್ಟಿ ಸಾಮಾಜಿಕ, ಶೈಕ್ಷಣಿಕ, ಮಹಿಳಾ, ಯುವ, ಶ್ರಮಿಕರಿಗೆ, ರೈತರು ಮತ್ತು ಪಾಲುದಾರಿಕೆ ನ್ಯಾಯ ಒದಗಿಸುವಲ್ಲಿ ಅನ್ಯಾಯ ಮಾಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಟೀಕಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನ್ಯಾಯ ಒದಗಿಸುವುದಾಗಿ ನ್ಯಾಯಪತ್ರ ಘೋಷಣೆ ಮಾಡಲಾಗಿದೆ. ಧಾರ್ಮಿಕ ನ್ಯಾಯ, ಲಿಂಗ ನ್ಯಾಯ ಒದಗಿಸುತ್ತೇವೆ. ಸಾಮಾಜಿಕ ಮತ್ತು ಆರ್ಥಿಕ ಜಾತಿ ಗಣತಿ ಸಮೀಕ್ಷೆ ನಡೆಸಲಾಗುವುದು. ಮೀಸಲಾತಿ ಶೇ.50ರಷ್ಟು ತಡೆ ಇದೆ. ಎಲ್ಲರಿಗೂ ಸಂವಿಧಾನತ್ಮಕವಾಗಿ ಮೀಸಲಾತಿ ನೀಡಲು ತಿದ್ದುಪಡಿ ತರುತ್ತೇವೆ ಎಂದರು.
ಕೇಂದ್ರ ಸರ್ಕಾರದಿಂದ ಯುವಕರಿಗೆ ಅನ್ಯಾಯವಾಗಿದೆ. 2014ರಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ನಮ್ಮ ಒಕ್ಕೂಟ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಉದ್ಯೋಗ ಭರ್ತಿ ಮಾಡುತ್ತೇವೆ ಎಂದು ಅವರು ಹೇಳಿದರು.ಶಿಕ್ಷಣಕ್ಕೆ ಸಂಬಂಧಿಸಿದಂತೆ ನ್ಯೂ ಎಜುಕೇಶನ್ ಪಾಲಿಸಿಯನ್ನು ಒಪ್ಪಲಾಗಿಲ್ಲ.
ಎನ್‌ಇಪಿ ಬದಲಿಸಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ. ಡಿಪ್ಲೋಮಾ ವ್ಯಾಸಂಗ ಮಾಡಿದ ಲಕ್ಷಾಂತರ ಯುವಕರು ಉದ್ಯೋಗವಿಲ್ಲದೆ ಖಾಲಿ ಇದ್ದಾರೆ. ಇತರೆ ಪದವೀಧರರಿಗೆ ಒಂದು ವರ್ಷದ ಅಪ್ರೆಂಟ್‌ಶಿಪ್ ಮತ್ತು ಒಂದು ಲಕ್ಷ ರು. ನೀಡುತ್ತೇವೆ. ಯುವಕರಿಗೆ ಆದ್ಯತೆಯ ಮೇರೆಗೆ ಉದ್ಯೋಗ ನೀಡಲಾಗುವುದು. ಆರಂಭಿಕ ನಿಧಿ 5 ಸಾವಿರ ಕೋಟಿ ರು. ಮೀಸಲಿಡಲಾಗುವುದು ಎಂದರು.ಮಹಿಳಾ ಸಬಲೀಕರಣಕ್ಕಾಗಿ ಮೊದಲು ಯೋಜನೆಗಳನ್ನು ತಂದಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನದಲ್ಲಿ 73,74ನೇ ಕಲಂಗಳಿಗೆ ತಿದ್ದುಪಡಿ ತಂದು ಸ್ಥಳೀಯ ಅಂಸ್ಥೆಗಳಲ್ಲಿ ಅಧಿಕಾರ ಕಲ್ಪಿಸಲಾಯಿತು.
ರಾಜ್ಯದಲ್ಲಿ ಪ್ರತಿ ಮನೆಯ ಯಜಮಾನಿ ಮಹಿಳೆಗೆ ಮಹಾಲಕ್ಷ್ಮೀ ಯೋಜನೆಗೆ 4 ಸಾವಿರ ರು. ನೀಡಲಾಗುವುದು. ಬಡ ಕುಟುಂಬದ ಯಜಮಾನಿ ಮಹಿಳೆ ವರ್ಷಕ್ಕೆ 1 ಲಕ್ಷ ರು. ನೀಡಲಾಗುವುದು ಎಂದು ಅವರು ತಿಳಿಸಿದರು.ಬೆಳೆ ನಷ್ಟವಾದ ಕೂಡಲೇ ವಿಮಾ ಹಣವನ್ನು ರೈತರಿಗೆ ಕೊಡಬೇಕು. ರೈತರಿಗೆ ವಿಮೆ ಹಣ ಕೊಡದೇ ಅನ್ಯಾಯ ಮಾಡಲಾಗುತ್ತಿದೆ. ಬೆಳೆ ನಷ್ಟದ ವರದಿ ಬಂದ 30 ದಿನದೊಳಗೆ ಖಾತೆಗೆ ನೇರವಾಗಿ ವಿಮೆ ಹಣ ಜಮಾ ಮಾಡಲಾಗುವುದು.
ಇಡೀ ದೇಶದಲ್ಲಿ ಸಾವಿರಾರು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬರಗಾಲದಲ್ಲಿ ಈವರೆಗೆ ಫಸಲ್ ಬಿಮಾ ಯೋಜನೆಯ ವಿಮೆ ಹಣ ಜಮಾ ಆಗಿಲ್ಲ ಎಂದು ಅವರು ದೂರಿದರು.ದೇಶದಲ್ಲಿ 5 ಟ್ರಿಲಿಯನ್ ಡಾಲರ್ ಎಕಾನಮಿ ಮಾಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಇದರ ಪಾಲುದಾರಿಕೆಯ ಬೆನಿಫಿಟ್ ಎಲ್ಲ ಭಾರತೀಯರಿಗೂ ಸಿಗಬೇಕು. ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ಹಂಚಿಕೆಯಾಗಬೇಕು ಎಂಬ ಆಧಾರದ ಮೇಲೆ ಥೀಮ್ ಬಿಡುಗಡೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆ ಬಹಳ ಗಟ್ಟಿಯಾಗಿರಬೇಕು ಎಂದು ಅಂಬೇಡ್ಕರ್ ಅವರು ಹೇಳಿದರು. ಜಿಎಸ್‌ಟಿ ಪಾಲು ಹಂಚಿಕೆಯಲ್ಲಿ ಶೇ.೪.೫ ರಷ್ಟು ನಮಗೆ ಸಿಗಬೇಕು. ಇದರಲ್ಲಿ ಕಡಿಮೆಯಾಗಬಾರದು. ಬರ, ನೆರೆ ಹಾವಳಿ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ಪರಿಹಾರ ಕೊಡಬೇಕು ಎಂದರು.
ಸಂವಿಧಾನ ಬದಲಿಸುತ್ತೇವೆ ಎನ್ನುವುದು ಒಳ್ಳೆಯ ಬೆಳವಣಿಗೆಯಲ್ಲ. ಸಿಎಎ ಜಾರಿಯಿಂದ ಜನರಿಗೆ ಆತಂಕವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸು ವುದು ಮತ್ತು ಸಮುದಾಯಗಳಲ್ಲಿ ಇರುವ ಭಯವನ್ನು ಹೋಗಲಾಡಿಸಲಾಗುವುದು. ದೇಶದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ ನ್ಯಾಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು. ನದಿ ಜೋಡಣೆ ವಿಚಾರ ಕೃಷಿ ವಲಯದಲ್ಲಿ ನಮೂದಿಸಲಾಗಿದೆ. ನ್ಯಾಷನಲ್ ಪ್ರಾಜೆಕ್ಟ್ ಆಗಿ ಘೋಷಣೆ ಮಾಡಲಾಗುವುದು. ಗ್ಯಾರಂಟಿ ಘೋಷಣೆಗಳನ್ನು ಜನರಿಗೆ ಹಂಚಲಾಗುವುದು. ನೀಟ್‌ನ್ನು ಅನೇಕ ರಾಜ್ಯಗಳು ಒಪ್ಪಿಲ್ಲ.
ಪುನರ್ ಪರಿಶೀಲನೆ ಮಾಡುತ್ತೇವೆ. ವಿದ್ಯಾರ್ಥಿ ಸ್ನೇಹಿ ನೀತಿಯನ್ನು ಜಾರಿಗೆ ತರುತ್ತೇವೆ. ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ಅವರು ತಿಳಿಸಿದರು.ಏ. 14 ರಂದು ಕೆ.ಬಿ. ಕ್ರಾಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು. ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ ಕುರಿತು ಎನ್‌ಐಎ ಅವರು ತನಿಖೆ ಮಾಡುತ್ತಿದ್ದಾರೆ. ಈವರೆಗಿನ ತನಿಖೆಯ ಬಗ್ಗೆ ನಮ್ಮ ಜತೆ ಮಾಹಿತಿ ಹಂಚಿಕೊಂಡಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹತ್ತು ಉದ್ಯಮಿ ಕುಟುಂಬಗಳ ಆದಾಯ ದುಪ್ಪಟ್ಟಾಗಿದೆ. ಜನರ ಅಭಿವೃದ್ಧಿ ಕೆಳಗೆ ಇಳಿದಿದೆ. ಆರ್ಥಿಕ ದಿವಾಳಿಯತ್ತ ನಾವು ಹೋಗುವುದಿಲ್ಲ. 60 ವರ್ಷದ ಆಡಳಿತ ನಡೆಸಿದ ಅನುಭವವಿದೆ ಎಂದು ಅವರು ಬಿಜೆಪಿಗೆ ತಿರುಗೇಟು ನೀಡಿದರು.
ಅಶ್ವಿನಿ ಪುನೀತ್ ರಾಜಕುಮಾರ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ತಪ್ಪಿತಸ್ಥರ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎಸ್. ಷಫಿ ಅಹಮದ್, ಡಾ. ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಅಧ್ಯಕ್ಷ ರಾಮಕೃಷ್ಣ, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ಇಕ್ಬಾಲ್ ಅಹಮದ್, ಅಸ್ಲಾಂಪಾಷ, ವಾಲೆಚಂದ್ರು, ಷಣ್ಮುಖಪ್ಪ, ಡಾ. ಫರ್ಹಾನ ಬೇಗಂ, ಪಾಲಿಕೆ ಮಾಜಿ ಸದಸ್ಯ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
ಗೆದ್ದರೆ ಮಹಿಳೆಯರಿಗೆ ನೌಕರಿಯಲ್ಲಿ ಶೇ.50 ಮೀಸಲು, ನರೇಗಾ ಕೂಲಿ 400ಕ್ಕೆ ಏರಿಕೆನಮ್ಮ ಸರ್ಕಾರದ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ಡಾ.ಪರಮೇಶ್ವರ ಹೇಳಿದರು. ಜಮ್ಮು ಕಾಶ್ಮೀರಕ್ಕೆ ವಿದ್ಯಾರ್ಥಿಗಳು ಯಾರೆಲ್ಲ ಶೈಕ್ಷಣಿಕ ಸಾಲ ತೆಗೆದುಕೊಂಡಿದ್ದಾರೆ, ಬಡ್ಡಿ ಸಮೇತ ಮನ್ನಾ ಮಾಡಲಾಗುವುದು. 15 ಮಾರ್ಚ್ 2024 ಅನ್ವಯವಾಗುವಂತೆ ಯೂನಿಫರ್ಮ್ ಜಿಎಸ್‌ಟಿ ಜಾರಿ ಮಾಡುತ್ತೇವೆ ಎಂದಿದ್ದರು. ಅಮೇರಿಕಾ, ಯೂರೋಪ್ ದೇಶಗಳಲ್ಲಿ ಹೀಗೆ ಇದೆ. ನಾವು ಅಧಿಕಾರಕ್ಕೆ ಬಂದ ನಂತರ ಜಿಎಸ್‌ಟಿ ಬದಲಾವಣೆ ಮಾಡಿ ಯೂನಿಫಾರ್ಮ್ ಜಿಎಸ್‌ಟಿ ಜಾರಿಗೆ ತರುತ್ತೇವೆ ಎಂದರು. ಶೇ1 ರಿಂದ ಶೇ.28 ರಷ್ಟು ಜಿಎಸ್‌ಟಿ ಇದೆ. ಒಂದೊಂದು ಉತ್ಪನ್ನಗಳಿಗೆ ಒಂದು ರೀತಿಯ ಜಿಎಸ್‌ಟಿ ಹಾಕಲಾಗುತ್ತಿದೆ. ನರೇಗಾ ಕೂಲಿಯನ್ನು 400 ರು.ಗೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನ ಡಬಲ್ ಕೇಂದ್ರ ಸರ್ಕಾರದ ವೇತನದಲ್ಲಿ ಎರಡುಪಟ್ಟು ಹೆಚ್ಚಳ ಮಾಡಲಾಗುವುದು ಎಂದು ಡಾ.ಪರಮೇಶ್ವರ ತಿಳಸಿದರು. ಮಹಿಳೆಯರಿಗೆ ಕಾನೂನು ಅರಿವು ಮಾಡಿಸಲು ಸಂಸ್ಥೆಗಳನ್ನು ಮಾಡಲಾಗುವುದು. ರೈತರ ವಿರುದ್ಧವಾದ ಕಾನೂನುಗಳನ್ನು ತರಲಾಗಿದೆ ಎಂಬ ಕಾರಣದಿಂದ ರೈತರು ಪ್ರತಿಭಟನೆ ನಡೆಸಿದರೂ ಸ್ಪಂದಿಸಿಲ್ಲ. 300 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದರು. ಸ್ವಾಮಿನಾಥನ್ ಕೃಷಿ ವಿಜ್ಞಾನಿ ಸಲ್ಲಿಸಿರುವ ವರದಿಯ ಶಿಫಾರಸ್ಸುಗಳ ಅನ್ವಯ ರಾಜ್ಯದ ಪ್ರಮುಖ ಬೆಳೆಗಳನ್ನು ಗುರುತಿಸಿ ಬೆಂಬಲ ಬೆಲೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.