ಹಾವೇರಿ: ಸಾಹಿತ್ಯದ ಅಧ್ಯಯನದಿಂದ ಮನುಷ್ಯನ ಆಂತರಿಕ ವಿಕಾಸವಾಗುತ್ತದೆ. ಉತ್ತಮ ಸಾಹಿತ್ಯದ ಓದಿನಿಂದ ಒಳ್ಳೆಯ ನಾಗರಿಕರು ಸೃಷ್ಟಿಯಾಗುತ್ತಾರೆ. ಓದಿಗೆ ಎಲ್ಲರನ್ನೂ ಬದಲಾಯಿಸುವ ಶಕ್ತಿ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾವೇರಿ ಸಹಯೋಗದಲ್ಲಿ ನಡೆದ ಪುಸ್ತಕ ಪ್ರೀತಿ ಆಯ್ದ ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಓದುಗ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿಂದು ನಡೆಯುವ ಅನೇಕ ಅವಘಡಗಳಿಗೆ ಓದು ಮತ್ತು ಜ್ಞಾನದ ಕೊರತೆಯೇ ಕಾರಣವಾಗಿದೆ. ಯುವಕರು ಮತ್ತು ಮುಂದಿನ ಪೀಳಿಗೆಗೆ ಓದುವ ಸಂಸ್ಕೃತಿಯನ್ನು ಬೆಳೆಸಬೇಕಿದೆ. ಪ್ರತಿಯೊಂದು ಪುಸ್ತಕವು ವಿಮರ್ಶೆಗೆ ಒಳಪಡಬೇಕು. ಲೇಖಕರ ಅನುಭವಗಳನ್ನು ಸಂವಾದಕ್ಕಿಳಿಸಿದರೆ ಓದುಗರ ಮತ್ತು ಹೊಸ ಬರಹಗಾರರ ಸಂದೇಹಗಳಿಗೆ ಉತ್ತರ ಸಿಗುತ್ತದೆ. ಈ ಹಿನ್ನೆಲೆ ಪುಸ್ತಕ ಪ್ರೀತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜಿಲ್ಲೆಯ ಮತ್ತು ಇತರೆ ಭಾಗದ ಲೇಖಕರನ್ನು ಮತ್ತು ಓದುಗರನ್ನು ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿ, ಇದು ಪುಸ್ತಕ ಪ್ರೀತಿ ಆರನೇ ಕಾರ್ಯಕ್ರಮವಾಗಿದ್ದು, ಇಲ್ಲಿಯವರೆಗೆ ಒಟ್ಟು 23 ಪುಸ್ತಕಗಳನ್ನು ವಿಮರ್ಶಿಸಿ ಸಮಾಜಕ್ಕೆ ಪರಿಚಯಿಸಲಾಗಿದೆ. ಲೇಖಕರು, ವಿಮರ್ಶಕರು ಮತ್ತು ಓದುಗರನ್ನು ಒಂದೇ ವೇದಿಕೆಗೆ ತಂದು ಸಂವಾದ ಮಾಡುತ್ತಿರುವುದರಿಂದ ಬರವಣಿಗೆಯ ಹಿಂದಿನ ಶಕ್ತಿ, ವಸ್ತು, ವಿಷಯ, ಶೈಲಿ, ಕಸರತ್ತು ಮತ್ತು ಅನಿವಾರ್ಯತೆಗಳ ಕುರಿತು ವಿಚಾರ ವಿನಿಮಯದಿಂದ ಲೇಖಕರಿಗೆ ಪ್ರೋತ್ಸಾಹ ಮತ್ತು ಹೊಸ ಬರಹಗಾರರಿಗೆ ಉತ್ಸಾಹವನ್ನು ತುಂಬಲಾಗುತ್ತಿದೆ. ಇಂದು ಇಬ್ಬರು ಪ್ರಮುಖ ಲೇಖಕರ ಪುಸ್ತಕಗಳನ್ನು ಆಯ್ದುಕೊಂಡಿದ್ದೇವೆ. ಈ ಕಾರ್ಯ ಸಾಹಿತ್ಯಕ ವಲಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತಿದೆ ಎಂದರು. ಪಿ.ಸಿ. ಹಿರೇಮಠ ಅವರು ಗೂಳಪ್ಪ ಅರಳಿಕಟ್ಟಿಯವರ ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಕುರಿತು ವಿಮರ್ಶಿಸಿದರು. ಡಾ. ಶಮಂತಕುಮಾರ ಕೆ.ಎಸ್. ಅವರು ಮಾಲತಿ ಗೋರೆಬೈಲ್ ಅವರ ಗುಬ್ಬಿ ಲಾಟೀನು ಕೃತಿ ಕುರಿತು ಮಾತನಾಡಿದರು. ಲೇಖಕಿ ಮಾಲತಿ ಗೋರೆಬೈಲ್ ಮಾತನಾಡಿದರು. ನಂತರ ಲೇಖಕರು ಮತ್ತು ವಿಮರ್ಶಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ವೇಳೆ ಇತ್ತೀಚೆಗೆ ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮಾರಕ ಕಥಾ ಪುರಸ್ಕಾರವನ್ನು ಪಡೆದ ಮಣಿಕಂಠ ಗೋದಮನಿ ಅವರನ್ನು ಸನ್ಮಾನಿಸಲಾಯಿತು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಸತೀಶ ಕುಲಕರ್ಣಿ, ಕರಿಯಪ್ಪ ಹಂಚಿನಮನಿ, ಶಂಕರ ತುಮಣ್ಣನವರ, ವಾಗೀಶ ಹೂಗಾರ, ಮಹಾದೇವಿ ಕಣವಿ, ಜುಬೇಧಾ ನಾಯಕ, ರೇಣುಕಾ ಗುಡಿಮನಿ, ನಾಗರಾಜ ಹುಡೇದ, ಸಂತೋಷ ಪಿಸೆ ಮತ್ತು ಇತರರು ಇದ್ದರು. ನಿರ್ಮಲಾ ಎಸ್. ಸ್ವಾಗತಿಸಿದರು. ಮಣಿಕಂಠ ಗೋದಮನಿ ನಿರೂಪಿಸಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ವಂದಿಸಿದರು.