ಮನದ ಜೊತೆ ಮಾಡಿದರೆ ಅಂತರಂಗದ ಅರಿವು ಸಾಧ್ಯ

KannadaprabhaNewsNetwork | Published : Jan 15, 2024 1:47 AM

ಸಾರಾಂಶ

ಪ್ರತಿನಿತ್ಯ ನಿಮ್ಮ ಜೊತೆ ನೀವು ಮಾತನಾಡಿಕೊಳ್ಳುವುದರಿಂದ ಅಂತರಂಗ ಅರಿಯಲು ಸಾಧ್ಯವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದಾರೆ.

ಚಿತ್ರದುರ್ಗ: ಪ್ರತಿನಿತ್ಯ ನಿಮ್ಮ ಜೊತೆ ನೀವು ಮಾತನಾಡಿಕೊಳ್ಳುವುದರಿಂದ ಅಂತರಂಗ ಅರಿಯಲು ಸಾಧ್ಯವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಎಂದು ಸಾಹಿತಿ ಸಂಗೇನಹಳ್ಳಿ ಡಾ.ಅಶೋಕ್ ಕುಮಾರ್ ನೆನಪು ಮಾಡಿಕೊಂಡರು.

ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವೇದ, ಕುರಾನ್, ಬೈಬಲ್ ಸೇರಿದಂತೆ ಎಲ್ಲ ಧರ್ಮ ಗ್ರಂಥಗಳು ಸ್ವಲ್ಪ ಕಾಲ ವಿಶ್ರಾಂತಿ ಪಡೆದರೆ, ಮನುಷ್ಯನಲ್ಲಿರುವ ಅಂತರಂಗ ಜಾಗೃತಗೊಂಡು ಮಾನವೀಯ ಗುಣಗಳು ದೇಶವನ್ನು ಆಳುತ್ತವೆ ಎಂದು ವಿವೇಕಾನಂದರು ಹೇಳಿದ್ದಾರೆ. ಯುವಕರು ಮನೋದೌರ್ಬಲ್ಯ ಗೆಲ್ಲಬೇಕು. ಮೊಬೈಲ್‍ನಂತಹ ಆಧುನಿಕ ಅವಿಷ್ಕಾರ ಮನುಷ್ಯರ ಮಾನವೀಯ ಸಂಬಂಧಗಳನ್ನು ನಾಶಪಡಿಸುತ್ತಿವೆ ಎಂದರು.

ನಿವೃತ್ತ ಪ್ರಾಂಶುಪಾಲ ಜೆ.ಯಾದವರಡ್ಡಿ ಮಾತನಾಡಿ, ಸ್ವಾಮಿ ವಿವೇಕಾನಂದರು ದರಿದ್ರ ದೇವೋಭವ ಪ್ರತಿಪಾದಿಸಿದರು. ವೇಶ್ಯೆಯರು, ಭಿಕ್ಷುಕರು, ನಿರ್ಗತಿಕರಿಗೆ ಮರುಗುವುದೇ ನಿಜವಾದ ಧರ್ಮ ಎಂದಿದ್ದಾರೆ. ದೇಶದ ಹೊರಗಡೆ ಭಾರತದ ಶ್ರೇಷ್ಠತೆ, ಆಧ್ಯಾತ್ಮಿಕ ಪರಂಪರೆ ಪ್ರಚಾರ ಮಾಡಿದ್ದಾರೆ. ಸಾಮಾಜಿಕ ಪಿಡುಗುಗಳಾದ ಜಾತಿ ವ್ಯವಸ್ಥೆ, ಬಡತನ, ಮೇಲು-ಕೀಳು, ವಿಜ್ಞಾನ, ಕೈಗಾರಿಕೆ, ಉತ್ತೇಜಿಸುವ ಬಗ್ಗೆ ಹಾಗೂ ವಸಾಹತುಶಾಹಿ ಕೊನೆಗಾಣಿಸುವ ಬಗ್ಗೆ ಭಾಷಣ ಮಾಡುತ್ತಿದ್ದರು ಎಂದರು.

ನಿವೃತ್ತ ಪ್ರಾಚಾರ್ಯ ಎಚ್‌.ಲಿಂಗಪ್ಪ ಮಾತನಾಡಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್ ಟಾಗೋರ್ ಹೇಳಿದಂತೆ ಭಾರತ ಅರಿಯಬೇಕೆಂದರೆ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು. 3 ವರ್ಷಗಳ ಕಾಲ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಾಲ್ನಡಿಗೆಯಲ್ಲಿ ದೇಶ ಸುತ್ತಿದರು. ದೇಶದಲ್ಲಿ ತುಂಬಿರುವ ವಿಭಿನ್ನ ಸಂಸ್ಕೃತಿ, ಆಚಾರ ವಿಚಾರ, ಸಾಮಾಜಿಕ ಧಾರ್ಮಿಕ ಆಚರಣೆಗಳು ಅನೇಕ ರಾಜರುಗಳ ಆಡಳಿತ ವೈಖರಿ ಕಣ್ಣಾರೆ ಕಂಡರು.

ಭಾರತ ವೈಜ್ಞಾನಿಕ ಮನೋಭಾವ ದೊಂದಿಗೆ ಅಭಿವೃದ್ಧಿ ಹೊಂದಬೇಕಾದರೆ, ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಮಾಡಬೇಕೆಂದರೆ ಅದು ಯುವಕರಿಂದ ಮಾತ್ರ ಸಾಧ್ಯ ಎಂದು ಭಾವಿಸಿದ್ದರು. ಅದಕ್ಕಾಗಿ ಪ್ರಭುದ್ಧ ಭಾರತ ನಿರ್ಮಾಣವಾಗುವವರೆಗೂ ಏಳಿ, ಎದ್ದೇಳಿ, ಗುರಿ ಮುಟ್ಟುವರೆಗೂ ನಿಲ್ಲಬೇಡಿ ಎಂದು ಯುವಕರಿಗೆ ಕರೆ ನೀಡಿದ್ದರು ಎಂದರು.

ಕೋಟೆ ನಾಡು ಬುದ್ಧ ವಿಹಾರದ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್, ದಲಿತ ಮುಖಂಡ ಭೀಮನಕೆರೆ ಶಿವಮೂರ್ತಿ, ಕರಿಬಸಪ್ಪ, ಐಯುಡಿಪಿ ಲೇಔಟ್ ಶಕುಂತಲಮ್ಮ, ಬಿಎಸ್‍ಐ ಕಾರ್ಯದರ್ಶಿ ಬಾಲನಹಳ್ಳಿ ರಾಮಣ್ಣ, ಜಿಲ್ಲಾ ಖಜಾಂಚಿ ಭೀಮನಕೆರೆ ತಿಪ್ಪೇಸ್ವಾಮಿ, ಬುರುಜನರೊಪ್ಪ ಹನುಮಂತಪ್ಪ, ವಕೀಲ ಬೆನಕನಹಳ್ಳಿ ಚಂದ್ರಪ್ಪ ಇದ್ದರು.

Share this article