ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಬಾಹ್ಯ ಆನಂದ ಅನುಭವಿಸಬೇಕಾದರೆ ಅಂತರಂಗದ ಶುದ್ಧಿ ಅತ್ಯವಶ್ಯಕ ಎಂದು ಮೈಸೂರಿನ ಕೆ.ಆರ್.ನಗರದ ಯಡತೊರೆ ಯೋಗಾನಂದ ಮಠದ ಶಂಕರ ಭಾರತಿ ಶ್ರೀಗಳು ಹೇಳಿದರು. ಇಲ್ಲಿಯ ಹವ್ಯಕ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಉಪದೇಶಾಮೃತ ನೀಡಿದರು. ಶಂಕರಾಚಾರ್ಯ ಭಗವತ್ಪಾದರು ಈ ವಿಶ್ವಕ್ಕೆ ಸೌಂದರ್ಯ ಲಹರಿ, ಶಿವಾನಂದ ಲಹರಿ ಮೊದಲಾದ ಅಮೂಲ್ಯ ಸ್ತೋತ್ರ ರತ್ನಗಳನ್ನು ನೀಡಿದ್ದು, ಅವುಗಳ ನಿತ್ಯ ಪಠಣದ ಮೂಲಕ ಅಂತರಂಗ ಶುದ್ಧಿಯ ಜತೆಗೆ ಮೋಕ್ಷದ ಮಾರ್ಗ ಕಾಣಬಹುದಾಗಿದೆ. ಈ ರತ್ನಗಳನ್ನು ಜನರು ಭಕ್ತಿಭಾವದಿಂದ ಪಠಿಸುವುದು ಅಗತ್ಯ ಎಂದರು. ಇಡೀ ಭರತ ಖಂಡದಲ್ಲಿ ಸೌಂದರ್ಯ ಲಹರಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ ಶಂಕರಾಚಾರ್ಯ ಭಗವತ್ಪಾದರ ಸಂದೇಶ ಬಿತ್ತರಿಸುವ ಕಾರ್ಯವನ್ನು ಎಡತೊರೆ ಮಠ ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಬಂದಿದೆ ಎಂದರು. ಇದೇ ಸಂದರ್ಭದಲ್ಲಿ ಅವಳಿ ನಗರದ ವಿವಿಧ ಮಹಿಳಾ ಮಂಡಲಗಳ ಸುಮಾರು ಇನ್ನೂರಕ್ಕೂ ಹೆಚ್ಚು ಮಹಿಳೆಯರು ಸೌಂದರ್ಯ ಲಹರಿಯ ಶ್ಲೋಕಗಳ ಪಠಣ ಮಾಡಿದರು.ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ.ಭಟ್ ಸ್ವಾಗತಿಸಿದರು.