ಕಬ್ಬು ಬೆಳೆಗಾರರ ಪರ ದೇಶಪಾಂಡೆ ಹೋರಾಡಲಿ

KannadaprabhaNewsNetwork | Published : Oct 27, 2023 12:30 AM

ಸಾರಾಂಶ

ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಪತ್ರಿಕೆಗೆ ನೀಡಿರುವ ಹೇಳಿಕೆಗಳು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ರಕ್ಷಕರ ರೀತಿಯಲ್ಲಿವೆ.

ಹಳಿಯಾಳ:

ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಪತ್ರಿಕೆಗೆ ನೀಡಿರುವ ಹೇಳಿಕೆಗಳು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ರಕ್ಷಕರ ರೀತಿಯಲ್ಲಿವೆ. ಅವರು ತಾವು ಶಾಸಕರು ಎಂಬುದನ್ನು ಮರೆಯದೇ ರೈತರ ಪರ ಕಾರ್ಯನಿರ್ವಹಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ ಹೇಳಿದ್ದಾರೆ.

ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಬ್ಬು ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಎಫ್‌ಆರ್‌ಪಿ ದರ ಸಾಲದೆ ರೈತರಿಗೆ ನಷ್ಟವಾಗುತ್ತಿದೆ. ಅದಕ್ಕಾಗಿ ಸರ್ಕಾರ ಹೆಚ್ಚು ಬೆಲೆ ನೀಡಬೇಕು. ಕಳೆದ ವರ್ಷದ ₹ 150 ಬಾಕಿ ಕೊಡಬೇಕು, ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಡಿಮೆ ಮಾಡಬೇಕು ಎಂದು ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದರೆ, ಶಾಸಕರು ಹೋರಾಟದ ದಿಕ್ಕು ತಪ್ಪಿಸುವ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಇವರದ್ದೇ ಸರ್ಕಾರ ಅಧಿಕಾರದಲ್ಲಿದ್ದು ಅಧಿಕಾರಿಗಳಿಗೆ, ಸಚಿವರಿಗೆ ಸರಿಯಾಗಿ ರೈತರ ಬವಣೆ ಮನವರಿಕೆ ಮಾಡಿಕೊಡಬೇಕು. ಈ ಮೂಲಕ ರೈತರ ಕಬ್ಬಿಗೆ ಹೆಚ್ಚಿನ ದರ ಕೊಡಿಸಬೇಕು. ಆಗ ಶಾಸಕರ ಜವಾಬ್ದಾರಿಯನ್ನು ಜನ ಮೆಚ್ಚುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿನ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚುವರಿ ₹ 100, ₹ 200 ಕೊಡುತ್ತಿದ್ದು, ಅದೇ ಪ್ರಕಾರ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರಿಗೂ ಹೆಚ್ಚಿನ ದರ ಕೊಡಲು ಶಾಸಕರು ತಿಳಿಸಬೇಕು. ಕಳೆದ ವರ್ಷ ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೆಚ್ಚು ಕಡಿತ ಮಾಡಿಕೊಂಡಿರುವುದನ್ನು ರೈತರಿಗೆ ಶಾಸಕರು ಕೊಡಿಸಲಿ. ಆಗ ಇವರನ್ನು ನಾನು ಮೆಚ್ಚುತ್ತೆವೆ ಎಂದು ತಿಳಿಸಿದ್ದಾರೆ.

ಶಾಸಕ ದೇಶಪಾಂಡೆ ಅವರು ಹೋರಾಟ ಹತ್ತಿಕ್ಕಲು ಯತ್ನಿಸಬಾರದು. ವಾಮಮಾರ್ಗ ಬಳಸಿದರೇ ರಾಜ್ಯ ಸರ್ಕಾರಕ್ಕೆ ಮತ್ತು ಶಾಸಕರಿಗೆ ರಾಜ್ಯಾದ್ಯಂತ ಇರುವ 30 ಲಕ್ಷ ಕಬ್ಬು ಬೆಳೆಗಾರರು ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ಕುರುಬೂರ್‌ ಶಾಂತಕುಮಾರ ಎಚ್ಚರಿಸಿದ್ದಾರೆ.

ಕಬ್ಬು ಬೆಳೆಗಾರರು ಕಬ್ಬು ಕಟಾವಿನ ಬಗ್ಗೆ ಆತಂಕಪಡುವ ಅವಶ್ಯಕತೆಯಿಲ್ಲ. ಪ್ರಸಕ್ತ ವರ್ಷ ಎಲ್ಲೆಡೆ 50%ರಷ್ಟು ಕಬ್ಬು ಕಡಿಮೆಯಾಗಿದ್ದು, ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿಗೆ ಮುಗಿ ಬೀಳಲಿದ್ದಾರೆ. ಅದಕ್ಕಾಗಿ ಶಾಸಕರು ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಕೊಟ್ಟರೇ ರೈತರಿಗೆ ನ್ಯಾಯ ದೊರೆಯಲಿದೆ ಎಂದು ಮನವಿ ಮಾಡಿದ್ದಾರೆ.

Share this article