ಗಾಯತ್ರಿ ಜಪಾನುಷ್ಠಾನದಿಂದ ಆತ್ಮಶಕ್ತಿ ಜಾಗೃತ: ಸ್ವಾಮಿ ಪ್ರಣವಾನಂದ ಶ್ರೀಗಳು

KannadaprabhaNewsNetwork |  
Published : Nov 29, 2026, 02:30 AM IST
ಫೋಟೋ ನ.೨೭ ವೈ.ಎಲ್.ಪಿ. ೦೬ | Kannada Prabha

ಸಾರಾಂಶ

೨೧ ಸಾವಿರ ಅಥರ್ವಶೀರ್ಷ ಪಾರಾಯಣ, ಮಹಾರುದ್ರಾನುಷ್ಠಾನ ಮಾಡಿ ಹವನ ಮಾಡಬೇಕೆಂಬ ಸಂಕಲ್ಪ ಮಾಡಿದ್ದೆವು. ಆದರೆ ೨೬ ಸಾವಿರ ಉಪನಿಷತ್ ಪಾರಾಯಣ ನಡೆದು ಇಂದು ರುದ್ರಾನುಷ್ಠಾನ ಕೂಡ ಪೂರ್ಣಗೊಂಡಿದೆ.

ಯಲ್ಲಾಪುರ: ಪ್ರತಿಯೊಬ್ಬರ ಮನೆಯಲ್ಲಿ ಗಾಯತ್ರಿ ಜಪ ಮತ್ತು ಲಲಿತಾ ಸಹಸ್ರನಾಮ ನಿತ್ಯವೂ ನಡೆಯಬೇಕು. ಅಂತಹ ಶ್ರೇಷ್ಠ ಪ್ರದೇಶ ಯಲ್ಲಾಪುರ. ಇಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ವೇದ ವಿದ್ವಾಂಸರು, ಗಾಯತ್ರಿ ಅನುಷ್ಠಾನಕರು ಇದ್ದಾರೆ. ಇಂತಹ ಆಧ್ಯಾತ್ಮಿಕ ವ್ಯಕ್ತಿಗಳನ್ನು ಬೇರೆಡೆ ಕಾಣಲು ಸಾಧ್ಯವಾಗದು ಎಂದು ಶಿರಸಿಯ ಶೀಗೇಹಳ್ಳಿ ಸ್ವಾಮಿ ಪ್ರಣವಾನಂದ ಶ್ರೀಗಳು ನುಡಿದರು.

ಅವರು, ಶುಕ್ರವಾರ ತಾಲೂಕಿನ ಸಿದ್ಧಿವಿನಾಯಕ ದೇವಸ್ಥಾನ ಚಂದಗುಳಿ(ಘಂಟೆ ಗಣಪತಿ) ಸನ್ನಿಧಿಯಲ್ಲಿ ವಾರ್ಷಿಕವಾಗಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ೮ ಕಾಯಿ ಗಣಹವನ, ಪೂಜ್ಯ ಪ್ರಣಾವಾನಂದ ಶ್ರೀಗಳ ನಿರ್ದೇಶನದಂತೆ ಮಹಾರುದ್ರಾನುಷ್ಠಾನ, ಭಗವದ್ಗೀತಾ ಪಠಣ ಹಾಗೂ ವಿ. ನಾಗೇಂದ್ರ ಭಟ್ಟ ಹಿತ್ಲಳ್ಳಿ, ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ದಂಪತಿಗಳಿಗೆ ಸನ್ಮಾನ ಮತ್ತು ಕಾರ್ತಿಕೋತ್ಸವದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಆತ್ಮಶಕ್ತಿ ಜಾಗೃತವಾಗಬೇಕಾದರೆ ನಿತ್ಯವೂ ಗಾಯತ್ರಿ ಜಪಾನುಷ್ಠಾನ ಆಗಲೇಬೇಕು ಎಂದ ಶ್ರೀಗಳು, ೨೧ ಸಾವಿರ ಅಥರ್ವಶೀರ್ಷ ಪಾರಾಯಣ, ಮಹಾರುದ್ರಾನುಷ್ಠಾನ ಮಾಡಿ ಹವನ ಮಾಡಬೇಕೆಂಬ ಸಂಕಲ್ಪ ಮಾಡಿದ್ದೆವು. ಆದರೆ ೨೬ ಸಾವಿರ ಉಪನಿಷತ್ ಪಾರಾಯಣ ನಡೆದು ಇಂದು ರುದ್ರಾನುಷ್ಠಾನ ಕೂಡ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಅತಿರುದ್ರಾನುಷ್ಠಾನ ಇಲ್ಲಿ ಆಗಬೇಕೆಂಬುದು ನಮ್ಮ ಸಂಕಲ್ಪ. ಚಂದಗುಳಿ ಆಧ್ಯಾತ್ಮಿಕ ನೆಲೆಯನ್ನು ಹೊಂದಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಮೋದ ಹೆಗಡೆ ಅವರು, ಚಂದಗುಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಧ್ಯಾತ್ಮಿಕ ಶಕ್ತಿ ಸದಾ ಜಾಗೃತವಾಗಿದೆ. ಇಂತಹ ಪೂಜ್ಯರ ಮಾರ್ಗದರ್ಶನದಲ್ಲಿ ನಮ್ಮ ಮಕ್ಕಳನ್ನು ಆಧ್ಯಾತ್ಮಿಕದತ್ತ ತರಬೇಕಾಗಿದೆ ಎಂದರು.

ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ ಸನ್ಮಾನಿತರನ್ನು ಅಭಿನಂದಿಸಿ, ಮಾತನಾಡಿ, ಪ್ರಮೋದ ಹೆಗಡೆ ರಾಜಕೀಯವಾಗಿ ಸೋತಿದ್ದರೂ ಸಮಾಜದಲ್ಲಿ ಗೆದ್ದಿದ್ದಾರೆ. ಜಿಲ್ಲೆಯ ಜನರ ಮನಸ್ಸನ್ನು ಗೆದ್ದಿದ್ದಾರೆ. ಅವರು ಆರ್‌ಎಸ್ಎಸ್ ಮೂಲಕ ಬೆಳೆದವರಾದ್ದರಿಂದ ಸಾತ್ವಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಅಂತಹ ಸಾಧಕರಿಗೆ ಗಣಪತಿಯ ಸನ್ನಿಧಾನದಲ್ಲಿ ಸನ್ಮಾನ ದೊರೆಯುವುದಕ್ಕೂ ಪುಣ್ಯ ಬೇಕು ಎಂದರು.

ರುದ್ರಾನುಷ್ಠಾನದಲ್ಲಿ ಭಾಗವಹಿಸಿದ ಪುರೋಹಿತರಾದ ನಾರಾಯಣ ಭಟ್ಟ ಮೊಟ್ಟೆಪಾಲ, ರಾಮಕೃಷ್ಣ ಭಟ್ಟ ಮಾಗೋಡ ಆಶೀರ್ವಾದದ ನುಡಿಗಳನ್ನಾಡಿದರು. ದೇವಸ್ಥಾನದ ಅಧ್ಯಕ್ಷ ವಿ. ಲಕ್ಷ್ಮಿನಾರಾಯಣ ಭಟ್ಟ ತಾರೀಮಕ್ಕಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಸದಸ್ಯರಾದ ಎಲ್.ಪಿ. ಭಟ್ಟ ಗುಂಡ್ಕಲ್ ಸನ್ಮಾನಪತ್ರ ವಾಚಿಸಿ, ವಂದಿಸಿದರು. ಸುಬ್ರಾಯ ಭಟ್ಟ ಗುಂಡ್ಕಲ್ ನಿರ್ವಹಿಸಿ, ಸನ್ಮಾನಪತ್ರ ವಾಚಿಸಿದರು. ಪ್ರಾರಂಭದಲ್ಲಿ ಮಾತೆಯರಿಂದ ಭಗವದ್ಗೀತಾ ಪಠಣ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕ್ಕರೆ ಕನಿಷ್ಠ ಮಾರಾಟ ಬೆಲೆ ಕೆ.ಜಿ.ಗೆ ₹60ಕ್ಕೆ ಹೆಚ್ಚಿಸಿ
ಸೈನಿಕ ಶಾಲೆ ಪ್ರವೇಶಾತಿಗೆ ಜ.31ರಂದು ಪರೀಕ್ಷೆ