ದೇಶ ಮುನ್ನಡೆಸುವ ನಾವೀನ್ಯತೆ ಯೋಜನೆಗಳು

KannadaprabhaNewsNetwork |  
Published : Aug 02, 2025, 12:00 AM IST
ಪೋಟೋ: 01ಎಸ್‌ಎಂಜಿಕೆಪಿ01ಶಿವಮೊಗ್ಗ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಏರ್ಪಡಿಸಿದ್ದ 48ನೇ ರಾಜ್ಯ ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿ ಮತ್ತು ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಂಶೋಧನಾ ವಿಭಾಗದ ಹಿರಿಯ ವಿಜ್ಞಾನಿ ಡಾ.ಪ್ರಶಾಂತ್ ಮಿಶ್ರ ಉದ್ಘಾಟಿಸಿದರು.  | Kannada Prabha

ಸಾರಾಂಶ

ಪಠ್ಯಾಧಾರಿತ ಯೋಚನೆಗಳಿಗಿಂತ ನಾವೀನ್ಯತೆ ಆಧಾರಿತ ಯೋಜನೆಗಳು ದೇಶದ ಭವಿಷ್ಯವನ್ನು ಮುನ್ನಡೆಸಲಿದೆ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಂಶೋಧನಾ ವಿಭಾಗದ ಹಿರಿಯ ವಿಜ್ಞಾನಿ ಡಾ.ಪ್ರಶಾಂತ್ ಮಿಶ್ರ ಅಭಿಪ್ರಾಯಪಟ್ಟರು.

ಶಿವಮೊಗ್ಗ: ಪಠ್ಯಾಧಾರಿತ ಯೋಚನೆಗಳಿಗಿಂತ ನಾವೀನ್ಯತೆ ಆಧಾರಿತ ಯೋಜನೆಗಳು ದೇಶದ ಭವಿಷ್ಯವನ್ನು ಮುನ್ನಡೆಸಲಿದೆ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಂಶೋಧನಾ ವಿಭಾಗದ ಹಿರಿಯ ವಿಜ್ಞಾನಿ ಡಾ.ಪ್ರಶಾಂತ್ ಮಿಶ್ರ ಅಭಿಪ್ರಾಯಪಟ್ಟರು.ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಏರ್ಪಡಿಸಿದ್ದ 48ನೇ ರಾಜ್ಯ ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿ ಮತ್ತು ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾತಾವರಣದಲ್ಲಿರುವ ತೊಡಕುಗಳನ್ನು ಸವಾಲಾಗಿ ಸ್ವೀಕರಿಸಿ. ನಾವೀನ್ಯತೆಯ ಸ್ಪರ್ಶ ನೀಡುವ ಮೂಲಕ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿ. ಬದುಕಿನಲ್ಲಿ ಹೊಸತನದ ಆಲೋಚನೆಗಳಿದ್ದರೆ ಮಾತ್ರ ಮುನ್ನಡೆ ಸಾಧ್ಯ. ಅನುಭವ ಆಧಾರಿತ ಕಲಿಕೆ ಹೊಸ ಜ್ಞಾನವನ್ನು ನೀಡಿದರೆ, ಜ್ಞಾನದ ತಳಹದಿ ಆವಿಷ್ಕಾರಿ ವಿಜ್ಞಾನವಾಗಿ ರೂಪುಗೊಳ್ಳುತ್ತದೆ ಎಂದರು.

ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ. ಮೂಲ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದ ತಾಂತ್ರಿಕ ವಿಚಾರಗಳನ್ನು ಅಂತರ ಶಿಸ್ತೀಯಗೊಳಿಸಿ. ಇದರಿಂದ ಹೆಚ್ಚು ಆವಿಷ್ಕಾರಿ ಯೋಜನೆಗಳು ರೂಪಗೊಳ್ಳಲು ಸಾಧ್ಯ. ಯಾವಾಗಲೂ ಇಷ್ಟಪಟ್ಟು ಕೆಲಸ ಮಾಡಿ, ಕುತೂಹಲದಿಂದಿರಿ, ಸಮಸ್ಯೆ ಪರಿಹರಿಸುವ ಕೌಶಲ್ಯ ಸದಾ ಉದ್ದೀಪನಗೊಳಿಸಿಕೊಳ್ಳಿ ಎಂದು ಆಶಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ.ಅಶೋಕ.ಎಂ.ರಾಯಚೂರು ಮಾತನಾಡಿ, ಸಂಶೋಧನೆ ಮತ್ತು ನಾವೀನ್ಯತೆ ಎಂಬುದು ರಾತ್ರೋರಾತ್ರಿ ಒಡಮೂಡುವ ವಿಚಾರವಲ್ಲ. ಸಮೀಕ್ಷೆಯಿಂದ ಮೊದಲುಗೊಂಡು ಪೇಟೆಂಟ್ ವರೆಗೆ ಪ್ರತಿ ಹಂತದಲ್ಲಿ ವಿಭಿನ್ನತೆಯ ಆಲೋಚನೆಗಳು ಬೇಕಿದೆ. ಈ ಹಿನ್ನೆಲೆಯಲ್ಲಿ ಕೆ.ಎಸ್.ಸಿ.ಎಸ್.ಟಿ ಪೂರಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ನಗರ ಪ್ರದೇಶದ ಸವಾಲುಗಳನ್ನು ಯುವ ಸಮೂಹದ ನಾವೀನ್ಯ ಚಿಂತನೆಗಳ ಮೂಲಕ ಬಗೆಹರಿಸುವ ಪ್ರಯತ್ನ ಮಾಡುತ್ತಿದೆ. ಶಿಕ್ಷಣ, ಬಯೋಡೈವರ್ಸಿಟಿ, ಜಲಸಂಪನ್ಮೂಲ ಬಳಕೆ, ಗೃಹಪಯೋಗ ಸೇರಿದಂತೆ ವಿವಿಧ ಕ್ಷೇತ್ರಗಳ ಸವಾಲುಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ಟಾರ್ಟ್ ಅಪ್‌ಗಳನ್ನು ಹೆಚ್ಚು ಸ್ಥಾಪಿಸಲು ಯುವ ಸಮೂಹಕ್ಕೆ ಉತ್ತೇಜನೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ನಿರ್ದಿಷ್ಟವಾದ ಅಧ್ಯಯನವನ್ನು ನಮ್ಮ ಸಂಸ್ಕಾರದ ತಳಹದಿಯಲ್ಲಿ ಮುನ್ನಡೆಸಬೇಕಿದೆ‌. ಹಣದ ಸಂಪಾದನೆಯ ಆದ್ಯತೆಗಿಂತ ಅನುಭವ ಮತ್ತು ಉತ್ತಮ ಸಂಬಂಧಗಳನ್ನು ಸಂಪಾದಿಸುವತ್ತ ಯುವ ಸಮೂಹ ಹೆಚ್ಚು ಆದ್ಯತೆ ನೀಡಲಿ ಎಂದರು.

ಅವಶ್ಯಕತೆ ಆವಿಷ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ಸಮಾಜದ ಅವಶ್ಯಕತೆಗಳನ್ನು ನಾವೀನ್ಯತೆಯ ಮೂಲಕ ಬಗೆಹರಿಸಿ. ಶಾಲೆಯಲ್ಲಿ ಅಗ್ರಸ್ಥಾನ ಪಡೆದವರಿಗಿಂತ ಜೀವನದಲ್ಲಿ ಅಗ್ರಸ್ಥಾನ ಪಡೆದವ ಯಶಸ್ವಿ ವ್ಯಕ್ತಿಯಾಗುತ್ತಾನೆ. ನಿಮ್ಮನ್ನು ಅವಮಾನಿಸಿದವರಿಗೆ ಬೆರಳು ತೋರಿಸುವುದಕ್ಕಿಂತ, ಬೆಳೆದು ತೋರಿಸಿ ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಕಾಲೇಜಿನ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್, ಸಂಯೋಜಕರಾದ ಡಾ.ಬಿ.ಎನ್‌.ರವಿಕುಮಾರ್, ಡಾ.ಚೇತನ್.ಎಸ್.ಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಚ್.ಬಿ.ಸುರೇಶ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆ.ಎಸ್.ಪುಟ್ಟಣ್ಣಯ್ಯ ಆದರ್ಶ ಎಲ್ಲಾ ಕಾಲಕ್ಕೂ ಮಾದರಿ, ಅನುಸರಣೀಯ: ನಾಗತಿಹಳ್ಳಿ ಚಂದ್ರಶೇಖರ್
ಮೇಲುಕೋಟೆ: ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ