ಕನ್ನಡಪ್ರಭ ವಾರ್ತೆ ಚಾಮರಾಜನಗರ
ಆರೋಗ್ಯ ಸೇವಾ ಕ್ಷೇತ್ರದ ಹೊಸ ವಿಶಿಷ್ಟ ಕಾರ್ಯಕ್ಕೆ ಮುಂದಾಗಿರುವ ನೂತನ ಡಯಾಬಿಟಿಕ್ ಕ್ಲಿನಿಕ್‌ಗೆ ಚಾಮರಾಜನಗರ ತಾಲೂಕಿನ ವೆಂಕಟಯ್ಯನಛತ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಬುಧವಾರ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಈ ಕಾರ್ಯಕ್ರಮವನ್ನು ಇಡೀ ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆ ಮೊದಲು ಆರಂಭಿಸಿದೆ. ಇದು ವಿಶೇಷವಾಗಿ ಜಿಲ್ಲೆಯ ಗ್ರಾಮೀಣ ಬಡಜನರಿಗೆ ತುಂಬಾ ಉಪಯುಕ್ತವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಅವರ ತಂಡ ಜಿಲ್ಲೆಯಲ್ಲಿ ಇಂತಹ ಆರೋಗ್ಯ ಸೇವೆಗಳನ್ನು ಒದಗಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಡಯಾಬಿಟಿಕ್ ಕ್ಲಿನಿಕ್ ಸೌಲಭ್ಯ ಅನುಷ್ಠಾನಕ್ಕೆ ಮುಂದಾಗಿರುವ ಎಲ್ಲರನ್ನು ಅಭಿನಂದಿಸುವುದಾಗಿ ನುಡಿದರು.
ಸಾಮಾನ್ಯವಾಗಿ ಎಲ್ಲ ಆರೋಗ್ಯ ಕೇಂದ್ರಗಳು ಬೆಳಗ್ಗೆ ೯ ಗಂಟೆಗೆ ಪ್ರಾರಂಭವಾಗುತ್ತವೆ. ಮಧುಮೇಹ ಇರುವವರು ತಪಾಸಣೆಗೆ ೯ ಗಂಟೆಯವರೆಗೂ ಕಾಯಬೇಕಾಗಿತ್ತು. ಆದರೆ ಮಧುಮೇಹಿಗಳು ಆರೋಗ್ಯ ಪರೀಕ್ಷೆಗಾಗಿ ಕಾಯಲು ಕಷ್ಟವಾಗುತ್ತಿತ್ತು. ಹೀಗಾಗಿ ವಾರದಲ್ಲಿ ಒಂದು ದಿನ ಅಂದರೆ ಪ್ರತಿ ಬುಧವಾರ ಬೆಳಗ್ಗೆ ೭ ರಿಂದ ೧೧ ರವರೆಗೆ ಮಧುಮೇಹದವರಿಗಾಗಿಯೇ ಪ್ರಯೋಗಾಲಯವನ್ನು ತೆರೆದು ರಕ್ತಪರೀಕ್ಷೆ ಮಾಡುವ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ರಾಜ್ಯದಲ್ಲಿಯೇ ಪ್ರಥಮವಾಗಿ ನಮ್ಮ ಜಿಲ್ಲೆಯಲ್ಲಿ ಇಂತಹ ಡಯಾಬಿಟಿಕ್ ಕ್ಲಿನಿಕ್ ಸೇವೆ ಒದಗಿಸಲು ಮುಂದಾಗಿದೆ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಮಾತನಾಡಿ, ಮಾರ್ಗಸೂಚಿ ಪ್ರಕಾರ ಜಿಲ್ಲಾದ್ಯಂತ ವೈದ್ಯರು ಆರೋಗ್ಯ ಸಿಬ್ಬಂದಿ ಡಯಾಬಿಟಿಕ್ ಕ್ಲಿನಿಕ್ ಅನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಾವಣ್ಯ ಮಹೇಶ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ಎ.ಎಂ. ಸೋಮಣ್ಣ, ಅಶೋಕ್, ಸ್ವಾಮಿ, ಶೈಲಜ, ಚಾಮುಲ್ ನಿರ್ಧೇಶಕರಾದ ಎಚ್.ಎಸ್ ಬಸವರಾಜು, ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ರಾಜೇಶ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಂದರೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ವೆಂಕಟಯ್ಯನಛತ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಗೋವಿಂದರಾಜು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹೇಶ್, ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಗಡಿಜಿಲ್ಲೆಯಲ್ಲಿ ಆರಂಭವಾದ ಡಯಾಬಿಟಿಕ್ ಕ್ಲಿನಿಕ್‌ಗಳು
ಎಲ್ಲ ಸಾರ್ವಜನಿಕ ಆಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಬುಧವಾರ ಮಧುಮೇಹಿಗಳಿಗೆ ಆರೋಗ್ಯ ಸೌಲಭ್ಯ ಒದಗಿಸುವ ರಾಜ್ಯದಲ್ಲೇ ಮೊದಲು ಎನಿಸಿರುವ ಡಯಾಬಿಟಿಕ್ ಕ್ಲಿನಿಕ್‌ಗಳು ಚಾಮರಾಜನಗರ ಜಿಲ್ಲೆಯಲ್ಲಿ ಆರಂಭವಾಗಿದೆ.ಪ್ರತೀ ಬುಧವಾರ ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ ೭ ರಿಂದ ೧೧ ಗಂಟೆಯವರೆಗೆ ಮಧುಮೇಹಿಗಳ ಆರೋಗ್ಯ ಕಾಳಜಿಗಾಗಿ ಡಯಾಬಿಟಿಕ್ ಕ್ಲಿನಿಕ್ ನಿರ್ವಹಣೆಯಾಗಲಿದೆ. ಈ ವಿನೂತನ ಆರೋಗ್ಯ ಸೇವೆಯನ್ನು ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆಯು ಮೊದಲಿಗೆ ಆರಂಭಿಸುವ ಮೂಲಕ ಗಮನಸೆಳೆದಿದೆ.
ಮಧುಮೇಹಿ ರೋಗಿಗಳಿಗೆ ತಪಾಸಣೆ, ಔಷದೋಪಾಚಾರ, ಡಯಾಬಿಟಿಕ್ ಚಾರ್ಟ್, ಪಥ್ಯ ಆಹಾರದ ವಿವರ ಸೇರಿದಂತೆ ಇತರೆ ಎಲ್ಲ ಸೇವೆ ಸಲಹೆಗಳನ್ನು ಡಯಾಬಿಟಿಕ್ ಕ್ಲಿನಿಕ್ ನಲ್ಲಿ ಒದಗಿಸಲಾಗುತ್ತಿದೆ. ಮಧುಮೇಹ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ನಿಯಮಾನುಸಾರ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸು ಮಾಡಿ ಮುಂದಿನ ಆರೋಗ್ಯ ಸೇವೆಗೆ ಅನುಸರಣೆ ಮಾಡುವಂತೆಯೂ ಸುತ್ತೋಲೆ ಹೊರಡಿಸಲಾಗಿದೆ. ಡಯಾಬಿಟಿಕ್ ಕ್ಲಿನಿಕ್ ನಿರ್ವಹಣೆ ಹಾಗೂ ಸುಸೂತ್ರವಾಗಿ ನಡೆಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮೇಲ್ವಿಚಾರಣೆ ಕಾರ್ಯವಹಿಸಲು ಸೂಚನೆ ನೀಡಲಾಗಿದೆ.