ಹಾಯ ಗ್ರಾಮದಲ್ಲಿ ಶಾಸನೋಕ್ತ ಗೋದಾನದ ಕಲ್ಲುಗಳ ಪತ್ತೆ

KannadaprabhaNewsNetwork |  
Published : Jan 12, 2026, 01:30 AM IST
ಫೋಟೊ:೧೧ಕೆಪಿಸೊರಬ-೦೧ : ಸೊರಬ ತಾಲ್ಲೂಕಿನ ಹಾಯ ಗ್ರಾಮದ ಕಲ್ಲೇಶ್ವರ ದೇವಾಲಯದ ಬಳಿ ಮೂರು ಪತ್ತೆಯಾಗಿರುವ ಶಾಸನೋಕ್ತ ಗೋದಾನದ ೩ ಕಲ್ಲುಗಳು | Kannada Prabha

ಸಾರಾಂಶ

ತಾಲೂಕಿನ ಹಾಯ ಗ್ರಾಮದ ಕಲ್ಲೇಶ್ವರ ದೇವಾಲಯದ ಬಳಿ ಮೂರು ಶಾಸನೋಕ್ತ ಗೋದಾನದ ಕಲ್ಲುಗಳನ್ನು ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರಾದ ಡಾ.ಶೇಜೇಶ್ವರ, ಇತಿಹಾಸ ಸಂಶೋಧಕರಾದ ರಮೇಶ ಬಿ.ಹಿರೇಜಂಬೂರು ಮತ್ತು ಮಂಜಪ್ಪ ಚುರ್ಚಿಗುಂಡಿ ತಂಡ ಕ್ಷೇತ್ರಕಾರ್ಯ ಕೈಗೊಂಡಾಗ ಪತ್ತೆ ಮಾಡಿದ್ದಾರೆ.

ಸೊರಬ: ತಾಲೂಕಿನ ಹಾಯ ಗ್ರಾಮದ ಕಲ್ಲೇಶ್ವರ ದೇವಾಲಯದ ಬಳಿ ಮೂರು ಶಾಸನೋಕ್ತ ಗೋದಾನದ ಕಲ್ಲುಗಳನ್ನು ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರಾದ ಡಾ.ಶೇಜೇಶ್ವರ, ಇತಿಹಾಸ ಸಂಶೋಧಕರಾದ ರಮೇಶ ಬಿ.ಹಿರೇಜಂಬೂರು ಮತ್ತು ಮಂಜಪ್ಪ ಚುರ್ಚಿಗುಂಡಿ ತಂಡ ಕ್ಷೇತ್ರಕಾರ್ಯ ಕೈಗೊಂಡಾಗ ಪತ್ತೆ ಮಾಡಿದ್ದಾರೆ. ಗೋದಾನದ ಒಂದನೇ ಕಲ್ಲಿನಲ್ಲಿ (ಗೋಸಾಸ-೧) ನಾಲ್ಕು ಸಾಲುಗಳ ಶಾಸನ ಪಾಠವಿದ್ದು, ಸೂರ್ಯಗ್ರಹಣ ದಿನದಂದು ಚವಠಿಯ ಬಿನಾರದ ಬಡಿಯಣ್ಣನು ದಕ್ಷಿಣೆ ಸಹಿತವಾಗಿ ಕುಪ್ಪಗಡೆಯ ಮಹಾಜನಗಳಿಗೆ ಹಾಯಗ್ರಾಮದಲ್ಲಿ ಗೋದಾನ ನೀಡಿದ ಮಾಹಿತಿ ಇದೆ, ಆತನೊಂದಿಗೆ ಆತನ ಹೆಂಡತಿ ನಾಲಬ್ಬೆಯೂ ದಾನದಲ್ಲಿ ಪಾಲ್ಗೊಂಡಿದ್ದಾಳೆ. ಇಲ್ಲಿ ಉಲ್ಲೇಖವಾಗಿರುವ ಚಒಠಿ ಪ್ರದೇಶವು ಈಗಿನ ಸೊರಬ ತಾಲೂಕಿನ ಚವಟಿ ಗ್ರಾಮವಾಗಿರುವ ಸಾಧ್ಯತೆ ಇದೆ. ಜಕಯ್ಯ ಎಂಬುವವನು ಇದನ್ನು ಬರೆದಿದ್ದಾನೆ ಎಂದಿದೆ. ಶಾಸನದಲ್ಲಿ ಉಲ್ಲೇಖವಿರುವ ಕುಪ್ಪಗಡ್ಡೆ ಗ್ರಾಮವು ಒಂದು ಪ್ರಾಚೀನ ಧಾರ್ಮಿಕ ನೆಲೆಯಾಗಿದ್ದು, ಶಾಸನಗಳು ಅನಾದಿ ಅಗ್ರಹಾರ ಎಂದಿವೆ. ಎರಡನೇ ಗೋಸಾಸ ಕಲ್ಲಿನಲ್ಲಿ ಎಂಟು ಸಾಲಿನ ಶಾಸನ ಪಾಠವಿದ್ದು ಕೊನೆಯ ಎರಡು ಸಾಲು ಅಳಿಸಿಹೋಗಿವೆ. ಹಾಯ ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದ ಚಂದ್ರಾದಿತ್ಯ ಮತ್ತು ಆತನ ತಾಯಿ ಬಲುಯಬ್ಬೆಯರು ಕುಪ್ಪಗಡ್ಡೆಯ ಮಹಾಜನಗಳಿಗೆ ದಕ್ಷಿಣೆ ಸಹಿತ ಗೋದಾನ ನೀಡಿದ್ದಾರೆ. ಈ ಮೂರು ಗೋಧಾನದ ಕಲ್ಲುಗಳಲ್ಲಿ ಎರಡರಲ್ಲಿ ಶಾಸನ ಪಾಠ ಕೆತ್ತಲಾಗಿದೆ. ಬೃಹತ್ ಸಂಖ್ಯೆಯಲ್ಲಿ ಗೋವುಗಳನ್ನು ದಾನ ನೀಡಿದಾಗ ಅದರ ಸಂಕೇತವಾಗಿ ಈ ರೀತಿಯ ಕಲ್ಲುಗಳನ್ನು ನೆಡಲಾಗುತ್ತಿತ್ತು. ಈ ಗೋಸಾಸ ಕಲ್ಲುಗಳಲ್ಲಿ ಕಾಲದ ಉಲ್ಲೇಖವಿಲ್ಲ. ಲಿಪಿ ವಿನ್ಯಾಸದ ಆಧಾರದಲ್ಲಿ ಇವುಗಳು ಹತ್ತನೇ ಶತಮಾನದ ಅವಧಿಯವು ಎಂಬುದು ಸ್ಪಷ್ಟ. ಇಲ್ಲಿನ ಒಂದು ಗೋಸಾಸದಲ್ಲಿ ರಾಷ್ಟ್ರಕೂಟರ ಚಿನ್ಹೆ ನೇಗಿಲಿಗೆ ಹೂಡಿದ ಎತ್ತುಗಳು, ಮೂರು ಆಯಾಮದ ಮೀನಿನ ಚಿತ್ರ ಮತ್ತು ಕಳಸಗಳ ಸಂಕೇತಗಳಿವೆ. ಇದು ರಾಷ್ಟ್ರಕೂಟರು ಕೃಷಿಗೆ ನೀಡಿದ ಮಹತ್ವವನ್ನು ಸೂಚಿಸುತ್ತದೆ.

ಗೋವುಗಳು ಕೃಷಿ ಮತ್ತು ಜೀವಂತ ಸಂಪತ್ತಿನ ಸಂಕೇತಗಳಾಗಿವೆ. ಮೀನು ನೀರಾವರಿಯ ಮತ್ತು ಕಳಸ ಸಮೃದ್ಧಿಯ ಧ್ಯೋತಕವಾಗಿ ಚಿತ್ರಿಸಲ್ಪಟ್ಟಿವೆ ಎನ್ನಬಹುದು. ರಾಷ್ಟ್ರಕೂಟರ ಅವಧಿಯಲ್ಲಿ ಗೋದಾನದ ಕಲ್ಲುಗಳು ಹೆಚ್ಚು ಕಂಡು ಬರುವುದರಿಂದ ಈ ಅವಧಿಯಲ್ಲಿ ಗ್ರಾಮಗಳನ್ನು ಗೋದಾನದ ಮೂಲಕ ಶ್ರೀಮಂತಗೊಳಿಸಿ ಕೃಷಿ ಮತ್ತು ನೀರಾವರಿಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದ್ದು, ಸ್ಪಷ್ಟವಾಗುತ್ತದೆ. ಸೊರಬ ತಾಲೂಕಿನಲ್ಲಿ ಇಂತಹ ಅನೇಕ ಗೋಸಾಸ ಕಲ್ಲುಗಳು ಕಂಡುಬರುತ್ತವೆ.ಗೋದಾನಕ್ಕೆ ಸಂಬಂಧಿಸಿದ ಕಲ್ಲುಗಳನ್ನು ಗೋಸಾಸಗಲ್ಲುಗಳು ಎಂದು ಕರೆಯಲಾಗಿದೆ. ಕೆಲವು ಕಡೆ ಮೇಂಟಿ ಎಂದು ಉಲ್ಲೇಖಗೊಂಡಿವೆ. ಇವು ಕನ್ನಡ ಶಾಸನಗಳಲ್ಲಿಯೇ ವಿಶಿಷ್ಟವೆನಿಸಿದ್ದು, "ಗೋಸಹಸ್ರ " ಸಂಸ್ಕೃತ ಪದದ ತದ್ಭವ "ಗೋಸಾಸ " ವಾಗಿದೆ. ಸಾವಿರ ಗೋವುಗಳ ದಾನವೆ ಗೋಸಾಸ. ಷೋಡಶ ದಾನಗಳಲ್ಲಿ ಗೋದಾನವೂ ಪ್ರಮುಖವಾಗಿದೆ. -------------------

ಕೋಟ್‌-1ತಾಲೂಕು ರಾಷ್ಟ್ರಕೂಟ ಕಾಲದ ಅನೇಕ ಕುರುಹುಗಳನ್ನೊಳಗೊಂಡಿದೆ. ಈ ಹೊತ್ತಿಗೆ ಹೆಚ್ಚೆಯಿಂದ ಮಾಟೂರು ಮನೆತನದವರು ಸಾಮಂತರಾಗಿ, ಮಹಾಮಂಡಳೇಶ್ವರರಾಗಿ ಸುಮಾರು ೧೫೦ ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಾರೆ. ಹಾಯ ಗ್ರಾಮದಲ್ಲಿ ದೊರೆತಿರುವ ೧೦ನೇ ಶತಮಾನದ ಶಾಸನಗಳು ಕೂಡ ಗಮನಿಸುವಂತಿದೆ. ಹಾಯ, ಬೆಟ್ಟದ ಕೂರ್ಲಿ ಪ್ರದೇಶದಲ್ಲಿ ದೊರೆತ ಚತುರ್ವಿಂಶತಿ ತೀರ್ಥಂಕರರ ವಿಗ್ರಹ ಹಾಗೂ ೬-೭ನೇ ಶತಮಾನದ್ದು ಎನ್ನಬಹುದಾದ ಗಜಲಕ್ಷ್ಮಿ ಫಲಕ ಅಲ್ಲಿನ ಪ್ರಾಚೀನತೆಯನ್ನು ಸೂಚಿಸಿದೆ. ಪ್ರಸ್ತುತ ಈ ವಿಗ್ರಹಗಳನ್ನು ಕುಪ್ಪಗಡ್ಡೆ ರಾಮೇಶ್ವರ ದೇಗುಲದಲ್ಲಿ ಸಂರಕ್ಷಿಸಲಾಗಿದೆ.

- ಶ್ರೀಪಾದ ಬಿಚ್ಚುಗತ್ತಿ, ಇತಿಹಾಸ ಸಂಶೋಧಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ