ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ

KannadaprabhaNewsNetwork |  
Published : Mar 28, 2026, 02:15 AM IST
27ುಲು1 | Kannada Prabha

ಸಾರಾಂಶ

ಶಾಸನವು 13 ಸಾಲುಗಳಲ್ಲಿ ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳಿವೆ

ಗಂಗಾವತಿ: ನಗರದ ವಿರುಪಾಪುರ ವ್ಯಾಪ್ತಿಯಲ್ಲಿ ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಕಾಲದ ಶಿಲಾಶಾಸನವನ್ನು ಗಂಗಾವತಿ ಚಾರಣ ಬಳಗ ಪತ್ತೆ ಮಾಡಿದೆ ಎಂದು ಚಾರಣ ಬಳಗದ ಸಂಚಾಲಕ ದಂತವೈದ್ಯ ಡಾ. ಶಿವಕುಮಾರ್ ಮಾಲಿಪಾಟೀಲ್ ತಿಳಿಸಿದ್ದಾರೆ.

ನಗರದ ವಿರುಪಾಪುರ ವ್ಯಾಪ್ತಿಯ ಹಿರೇಜಂತಕಲ್ ವೀರಣ್ಣ ದೇವರ ಗುಡ್ಡದ ಹಿಂಬದಿಯ ಬಂಡೆಯೊಂದರಲ್ಲಿ ಈ ಶಾಸನ ಕಂಡು ಬಂದಿದೆ. ಶಾಸನವನ್ನು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಪರಿಶೀಲಿಸಿದ್ದು, ಶಾಸನವು 13 ಸಾಲುಗಳಲ್ಲಿ ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳಿವೆ. ನಮಸ್ತುಂಗ ಶಿರಶ್ಚುಂಬಿ ಎಂಬ ಶಿವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಶಾಸನವು ಶಾಲಿವಾಹನ 1448ನೇ ಸಂವತ್ಸರದ ಮಾಘ ಶುದ್ಧ 7ರ ಕಾಲ ಉಲ್ಲೇಖಿಸುತ್ತದೆ. ಅದು ಪ್ರಸ್ತುತ ಸಾಮಾನ್ಯ ಶಕೆ 1527 ಕ್ಕೆ ಸರಿಯಾಗುತ್ತದೆ. ಅಂದರೆ 16ನೇ ಶತಮಾನದ ಶಾಸನವಿದು.

ಶಾಸನದಲ್ಲಿ ಶ್ರೀ ಮನ್ಮಾಹಾರಾಜಾಧಿರಾಜ ಪರಮೇಶ್ವರ ವೀರಪ್ರತಾಪ ಕೃಷ್ಣರಾಯರ ಆಳ್ವಿಕೆ ಕಾಲದಲ್ಲಿ ಆನೆಗುಂದಿ ಮಾಗಣೆಯನ್ನು ಯಾವುದೋ ವ್ಯಕ್ತಿಯ (ಅಕ್ಷರ ಸವೆದಿವೆ) ಮಗ ಪಾಲಿಸುತ್ತಿರುವಾಗ ಭದ್ರಯ್ಯನ ಮಗ ಗಂಧದ ಸೂರಯ್ಯನು ವಿರುಪಾಪುರ ಸೀಮೆಯ ಮಲ್ಲಿಕಾರ್ಜುನ ದೇವರಿಗೆ ಹಾಗೂ ಕೆಲವು ಬ್ರಾಹ್ಮಣರಿಗೆ ಭೂಮಿ ದಾನ ನೀಡಿದ ಬಗ್ಗೆ ತಿಳಿಸುತ್ತದೆ. ಶಾಸನದ ಕೆಳಸಾಲುಗಳು ಸವೆದಿರುವುದರಿಂದ ಹೆಚ್ಚಿನ ವಿಷಯ ಸ್ಪಷ್ಟವಾಗುತ್ತಿಲ್ಲ.

ಗಂಗಾವತಿ ನಗರದಲ್ಲಿ ಈಗಾಗಲೇ ವಿಜಯನಗರದ ಪ್ರೌಢದೇವರಾಯ ಮತ್ತು ಸದಾಶಿವದೇವರಾಯನ ಶಾಸನಗಳು ಮಾತ್ರ ದೊರೆತಿದ್ದವು. ಈಗ ಕೃಷ್ಣದೇವರಾಯನ ಕಾಲದ ಶಾಸನ ದೊರೆತಿರುವುದು ಮಹತ್ವದ ಸಂಗತಿಯಾಗಿದೆ. ಹಾಗಾಗಿ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲಾಗುವುದೆಂದು ಮತ್ತು ಶಾಸನ ಶೋಧನೆಯಲ್ಲಿ ಚಾರಣ ಬಳಗದ ಕೇಶವ ನಾಯ್ಕ್,ಪ್ರಹ್ಲಾದ್ ಕುಲಕರ್ಣಿ, ಮಂಜುನಾಥ್ ಗುಡ್ಲಾನೂರ, ಚಿದಾನಂದ ಕೀರ್ತಿ ಮತ್ತು ವಿನಯ್ ಕುಮಾರ್ ಅಂಗಡಿ ನೆರವಾಗಿದ್ದಾರೆಂದು ಡಾ.ಕೋಲ್ಕಾರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಶ್ಚಿಮ ಘಟ್ಟ ರಕ್ಷಣೆ ಜನಾಂದೋಲನದಲ್ಲಿ ಭಾಗವಹಿಸಲು ಕರೆ
ಯಕ್ಷಗಾನದ ಪರಿಶುದ್ಧತೆ ಕಾಪಾಡಿದ ಹಿರಿಯ ಕಲಾವಿದರು: ಆರ್‌.ಟಿ. ಭಟ್ಟ ಕಬ್ಗಾಲ