ಗಜೇಂದ್ರಗಡ: ಪಟ್ಟಣದ ಪತ್ತಾರಗಲ್ಲಿಯ ವಿಶ್ವನಾಥ ಸೀತಾ ರಾಮಚಂದ್ರ ಮಂದಿರ ಹಾಗೂ ಗಂಜಿಪೇಟೆ ಶ್ರೀರಾಮ ದೇವರ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಉತ್ಸವವನ್ನು ಶುಕ್ರವಾರ ಸಕಲ ಸದ್ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಇಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಭಜನಾ ಸಪ್ತಾಹ ಅಖಂಡ ನಾಮಸ್ಮರಣೆ ಹಾಗೂ ರಾಮಾಯಣ ಪ್ರವಚನ ಅಂತ್ಯಗೊಳಿಸಲಾಯಿತು. ಬೆಳಗ್ಗೆ ಶ್ರೀರಾಮ, ರುದ್ರ ದೇವರಿಗೆ ರುದ್ರಾಭಿಷೇಕ ಪೂಜೆಯೊಂದಿಗೆ ವಿಶೇಷ ಅಲಂಕಾರಿಕ ಪೂಜೆ ಹಾಗೂ ಶ್ರೀರಾಮನ ತೋಟ್ಟಿಲೋತ್ಸವ ನಡೆಯುತು. ಮಹಿಳೆಯರು ಜೋಗುಳ ಹಾಡುವ ಮೂಲಕ ತೋಟ್ಟಿಲೋತ್ಸವವನ್ನು ಸಂಭ್ರಮದಿಂದ ನಡೆಸಿದರು. ನಂತರ ರಾಮಚಂದ್ರ ಗಾಡಗೋಳಿ ಅವರಿಂದ ಪ್ರವಚನ ನಡೆಯಿತು.
ಸ್ಥಳೀಯ ಗಂಜಿಪೇಟೆಯ ಸೀತಾರಾಮದೇವರ ದೇವಸ್ಥಾನದಲ್ಲಿ ಶ್ರೀರಾಮ ನವಮಿಯನ್ನು ಸದ್ಭಕ್ತರು ವೈಭವ ಪೂರ್ವಕವಾಗಿ ಆಚರಿಸಿದರು. ಬೆಳಗ್ಗೆ ಭಜನಾ ಸಪ್ತಾಹದೊಂದಿಗೆ ಅಖಂಡ ನಾಮಸ್ಮರಣೆ ಹಾಗೂ ರಾಮಾಯಣ ಪ್ರವಚನ ನಡೆಯಿತು. ಗುರು ಜಗನ್ನಾಥದಾಸರ ಭಜನಾ ಮಂಡಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಉತ್ಸವ ಮೂರ್ತಿಯೊಂದಿಗೆ ಪಾಲಕಿ ಉತ್ಸವದ ಮರವಣಿಗೆ ನಡೆಯಿತು.
ನಂತರ ಮಹಿಳೆಯರು ಶ್ರೀರಾಮನ ತೋಟ್ಟಿಲೋತ್ಸ ನೆರವೇರಿಸಿದರು. ಬಳಿಕ ದೇವಸ್ಥಾನದಲ್ಲಿ ಕೋಸಂಬರಿ, ಪಾನಕ ವಿನಿಯೋಗ ಮಾಡಲಾಯಿತು. ಸಕಲ ಸದ್ಭಕ್ತರು ಆಗಮಿಸಿ, ಶ್ರೀರಾಮನ ಕೃಪೆಗೆ ಪಾತ್ರರಾದರು. ಸ್ಥಳೀಯ ಅಗಸಿ ಬಳಿಯ ಹನುಮಂತ ದೇವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರದಲ್ಲಿ ಶ್ರೀರಾಮನಾಮ ಸ್ಮರಣೆಯನ್ನು ಭಕ್ತರು ನಡೆಸಿದರು. ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಪಟ್ಟಾಭಿಷೇಕ, ಸೀತಾ ಕಲ್ಯಾಣ ಉತ್ಸವ ನಡೆಸಲಾಯಿತು.ಶ್ರೀರಾಮನ ಅದ್ಧೂರಿ ತೊಟ್ಟಿಲೋತ್ಸವ
ಲಕ್ಷ್ಮೇಶ್ವರ: ಪಟ್ಟಣದ ಶಂಕರಭಾರತಿಮಠದಲ್ಲಿ ಬ್ರಹ್ಮವೃಂದದ ಪರವಾಗಿ ಶುಕ್ರವಾರ ಶ್ರೀರಾಮನ ತೊಟ್ಟಿಲೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಬಳಿಕ ಸೇರಿದ್ದವರಿಗೆ ಪಾನಕ, ಕೋಸುಂಬರಿ, ಪ್ರಸಾದ ವಿತರಿಸಲಾಯಿತು. ಬ್ರಾಹ್ಮಣ ಸಮಾಜದ ನಾರಾಯಣ ಭಟ್ ಪುರಾಣಿಕ, ಗುರುರಾಜ ಪಾಟೀಲಕುಲಕರ್ಣಿ, ಆರ್.ಎಚ್. ಕುಲಕರ್ಣಿ, ಎ.ಪಿ. ಕುಲಕರ್ಣಿ, ಅನಂತ ಭಟ್ ಪೂಜಾರ, ಚಿಕ್ಕರಸ ಪೂಜಾರ, ಗೋಪಾಲ ಕುಲಕರ್ಣಿ, ಡಿ.ಪಿ. ಹೇಮಾದ್ರಿ, ಅರವಿಂದ ದೇಶಪಾಂಡೆ, ದೃವರಾಜ ಬೆಟಗೇರಿ, ವ್ಯಾಪಾರಿ, ನಾಗರಾಜ ಪೂಜಾರ, ಅನಿಲ ಕುಲಕರ್ಣಿ, ನೂರಾರು ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ಇದ್ದರು.