6307 ಶವಗಳ ಸಂಸ್ಕಾರ ಮಾಡಿದ ಶಾಸನ ಶಿಲ್ಪ ಪತ್ತೆ!

KannadaprabhaNewsNetwork | Published : May 18, 2025 1:35 AM
Follow Us

ಸಾರಾಂಶ

ಹಾವೇರಿ ಜಿಲ್ಲೆಯ ಗುತ್ತಲದ ಚಂದ್ರಶೇಖರ ದೇವಾಲಯದ ಬಳಿ ಅಪರೂಪದ ಶಿಲ್ಪ ಹಾಗೂ ಶಾಸನ ದೊರೆತಿದ್ದು, 6307 ಶವಗಳ ಸಂಸ್ಕಾರ ಮಾಡಿದ ವ್ಯಕ್ತಿಯ ಬಗ್ಗೆ ಶಾಸನದಲ್ಲಿ ಮಾಹಿತಿ ನೀಡಲಾಗಿದೆ.

ಹಾವೇರಿ: ಗುತ್ತಲದ ಚಂದ್ರಶೇಖರ ದೇವಾಲಯ ಬಳಿ ಅಪರೂಪದ ಶಿಲ್ಪ ಹಾಗೂ ಶಾಸನ ದೊರೆತಿದೆ. ಕನ್ನಡ ಶಾಸನ ಹಾಗೂ ಶಿಲ್ಪಲೋಕಕ್ಕೆ ಇದೊಂದು ಹೊಸ ಸೇರ್ಪಡೆಯಾಗಿದೆ. ಪುದುವಟ್ಟು, ಮರುಳಯ್ಯ ಎಂಬ ವ್ಯಕ್ತಿಯ ಎಡಬಲಗಳಲ್ಲಿ ಶಾಸನವಿದ್ದು, ಬಲಗಡೆ 20 ಸಾಲು ಹಾಗೂ ಎಡಗಡೆ 13 ಸಾಲುಗಳ ಕನ್ನಡ ಶಾಸನವಿದೆ ಎಂದು ವಿಜಯನಗರ ಜಿಲ್ಲೆ ಹಂಪಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ. ಆರ್. ಶೇಜೇಶ್ವರ ತಿಳಿಸಿದ್ದಾರೆ.

ಇತ್ತೀಚೆಗೆ ಕ್ಷೇತ್ರ ಕಾರ್ಯಕ್ಕೆಂದು ತಾಲೂಕಿನ ಗುತ್ತಲಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿದ್ದು, ಇದುವರೆಗೂ ಈ ಶಾಸನ ಎಲ್ಲಿಯೂ ಪ್ರಕಟವಾಗಿಲ್ಲ. ಹಾಗಾಗಿ ಇದು ಹೊಸ ಶೋಧವಾಗಿದೆ. ಈಗ ಹೊಸದಾಗಿ ಸಿಕ್ಕ ಶಾಸನದಿಂದ ಅಧ್ಯಯನಕ್ಕೆ ಒಂದು ಹೊಸ ಆಯಾಮ ದೊರೆತಂತೆ ಆಗಿದೆ ಎಂದು ತಿಳಿಸಿದ್ದಾರೆ.

ಶಾಸನದ ಸಾರ: ಗುತ್ತಲದ ಮೂಲಸ್ಥಾವರಕ್ಕೆ ಆಧೀನನಾದ ನನ್ನಿದೇವ ಒಡೆಯನ ಮಗ ಮರುಳಯ್ಯ ಎಂಬುವನು ತಮ್ಮನ್ನಾಳುವ ಸೀಮೆಯ ಒಡೆಯನಾದ ಪಟ್ಟದ ತಿಮ್ಮಸ್ವಾಮಿಯರಿಗೆ ಪುಣ್ಯ ಸಿಗಲಿ ಎಂದು 6307 ಹೆಣಗಳನ್ನು ಝಲ್ಲಿ (ಬುಟ್ಟಿ)ಯಲ್ಲಿ ಹೊತ್ತುಕೊಂಡು ಹೋಗಿ ಸಮಾಧಿ ಮಾಡಿದ್ದಾಗಿ ಬಲಬದಿಯ ಶಾಸನದಲ್ಲಿ ದಾಖಲಿಸಲಾಗಿದೆ. ಇನ್ನು ಎಡಬದಿಯ ಶಾಸನವು ಶಾಲಿವಾಹನ ಶಕವರ್ಷ 1462 ''ಬರ'' ಬಂದ ವಿಕಾರಿ ಸಂವತ್ಸರ ಭಾದ್ರಪದ ಶುಕ್ಲ 5ರಂದು ಬಸವೇಶ್ವರನ ಪಾದಹಿಡಿದು ಈ ಶಿಲ್ಪವನ್ನು ಪ್ರತಿಷ್ಠೆ ಮಾಡಿದರು ಎಂಬ ವಿಷಯ ಹೇಳುತ್ತದೆ. ಇಲ್ಲಿ ದಾಖಲಾದ ಕಾಲವು ಕ್ರಿಶ 1539 ಆಗಸ್ಟ್ 18 ಸೋಮವಾರಕ್ಕೆ ಸರಿ ಹೊಂದುತ್ತದೆ. ಈ ಅವಧಿಯಲ್ಲಿ ವಿಜಯನಗರವನ್ನು ಅಚ್ಯುತರಾಯ ರಾಜನು ರಾಜ್ಯಭಾರ ಮಾಡುತ್ತಿದ್ದನು.

ವಿವರಣೆ: ಕ್ರಿ.ಶ. 1539ರಲ್ಲಿ ಗುತ್ತಲದ ಪ್ರದೇಶದ ವ್ಯಾಪ್ತಿಯಲ್ಲಿ ರಣಭೀಕರವಾದ ಬರಗಾಲ ಬಂದಿತ್ತು. ಈ ಬರಗಾಲಕ್ಕೆ ಸಿಕ್ಕು ಸಾವಿರಾರು ಜನರ ಸಾವು ಕಂಡಿದ್ದರು. ಹೀಗೆ ಸತ್ತ ಜನರ ಅನಾಥ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಾಗ ಆ ಹೆಣಗಳನ್ನು ಮರುಳಯ್ಯ ಎಂಬ ವ್ಯಕ್ತಿ ಸಂಸ್ಕಾರ ಮಾಡುತ್ತಾನೆ. ಅವನು ಸಂಸ್ಕಾರ ಮಾಡಿದ ಮನುಷ್ಯರ ಶವಗಳ ಸಂಖ್ಯೆ ಬರೋಬ್ಬರಿ 6307 ಎಂಬುದೇ ಮುಖ್ಯ ವಿಷಯ. ಇಡೀ ವಿಶ್ವದಲ್ಲಿ ವ್ಯಕ್ತಿಯೊಬ್ಬ 6307 ಶವಗಳನ್ನು ತನ್ನ ತಲೆಯ ಮೇಲೆ ಹೊತ್ತು ಸಮಾಧಿ ಮಾಡಿದ್ದು ದಾಖಲೆ ಮತ್ತು ಘನಘೋರವಾದ ಬರಗಾಲದ ಉಲ್ಲೇಖವನ್ನು ಹೊಂದಿದ ಇದೇ ಮೊದಲ ಶಾಸನವಾಗಿದೆ.

ಬರಗಾಲ, ಸಾಂಕ್ರಾಮಿಕ ರೋಗಗಳಿಗೆ ತತ್ತರಿಸಿ ಅತಿ ಹೆಚ್ಚು ಸಾವುಗಳಾಗುತ್ತವೆ. ಡವಗಿ (ಡೋಗಿ), ಕಾಲರಾ, ಪ್ಲೇಗ್‌ನಂತಹ ಯಾವುದೋ ಒಂದು ಸಂಕ್ರಾಮಿಕ ರೋಗ ಬಂದು, ಬರ ಸೃಷ್ಟಿಯಾಗಿ, ಸಾವಿರಾರು ಜನ ಗುತ್ತಲದ ಪರಿಸರದಲ್ಲಿ ಅಸು ನೀಗಿದ್ದಾರೆ. ಹೀಗೆ ಬರಗಾಲ ಬಂದು ಮೃತರಾದ 6307 ಜನರ ದೇಹಗಳನ್ನು ಪ್ರಸ್ತುತ ಶಾಸನದಲ್ಲಿ ದಾಖಲಿಸಲಾಗಿದೆ. ಬರವನ್ನು ಉಲ್ಲೇಖಿಸುವ ಹಾಗೂ ಶವಸಂಸ್ಕಾರ ಮಾಡಿದ ಶಾಸನ ಮತ್ತು ಶಿಲ್ಪ ವಿಶಿಷ್ಟವಾದುದಾಗಿದೆ.

ಈ ಕ್ಷೇತ್ರಕಾರ್ಯದಲ್ಲಿ ಡಾ. ರವಿಕುಮಾರ ನವಲಗುಂದ ಹಾಗೂ ಡಾ. ಚಾಮರಾಜ ಕಮ್ಮಾರ ಇದ್ದರು.ಅಸಾಮಾನ್ಯ ಸಾಧನೆ: ಈ ಶಿಲ್ಪದ ಕುರಿತಾಗಿ ಧಾರವಾಡ ಜಿಲ್ಲೆಯ ಗ್ಯಾಜೆಟಿಯರ್ ಹಾಗೂ ಮೂರ‍್ನಾಲ್ಕು ಪಿಎಚ್‌ಡಿ ಮಹಾಪ್ರಬಂಧಗಳಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ನಿಖರವಾದ ಅಧ್ಯಯನಗಳಾಗಿಲ್ಲ. ಹಾಗೆಯೇ ಈ ಪುಣ್ಯಕಾರ್ಯದ ಕೀರ್ತಿ ಸೂರ್ಯಚಂದ್ರರು ಇರುವವರೆಗೂ ಅಜರಾಮರವಾಗಲಿ ಎಂದು ಚಂದ್ರಾರ್ಕರ ಶಿಲ್ಪಗಳಲ್ಲೂ ಕೆತ್ತಲಾಗಿದೆ. 6307 ಶವಗಳನ್ನು ಸಂಸ್ಕಾರ ಮಾಡುವುದು ಸಾಮಾನ್ಯವಾದ ಮಾತಲ್ಲ. ಆದ್ದರಿಂದಲೇ ಮರುಳಯ್ಯನ ಈ ಕಾರ್ಯ ಶ್ಲಾಘನೀಯ ಮತ್ತು ಪ್ರಶಂಸನೀಯ ಎಂದು ಡಾ. ಆರ್. ಶೇಜೇಶ್ವರ ತಿಳಿಸಿದ್ದಾರೆ.