ಯಲ್ಲಾಪುರ: ಸಾಹಿತ್ಯಕ್ಕೂ ಮತ್ತು ಸಂಸಾರಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಕಥೆಗಾರ ಡಾ. ಶ್ರೀಧರ ಬಳಗಾರ ಹೇಳಿದರು.
ಮನೆಯೆಂದರೆ ಸಾಂಸ್ಕೃತಿಕ ದಸ್ತಾವೇಜು. ಆದರಲ್ಲಿ ಊರು ಭೌಗೋಳಿಕ ನಕ್ಷೆ. ಅಲ್ಲಿ ಮದುವೆ, ಮುಂಜಿ ಕಾರ್ಯಕ್ರಮ ಭೌತಿಕ ಮತ್ತು ಲೌಕಿಕ ಕೆಲಸ ನಡೆಯುತ್ತಿಬೇಕು. ಅನ್ನ ಮತ್ತು ಆನಂದ ರೂಪಾಂತರಗೊಳ್ಳಲು ಮೂರು ತಲೆಮಾರುಗಳಿಂದ ಸಾಂಸ್ಕೃತಿಕ ಚಿಂತನೆಯನ್ನು ಗಮನಿಸಬೇಕಾಗುತ್ತದೆ. ಸಾಹಿತ್ಯ ಮತ್ತು ಕೃಷಿ ಬೇರೆ ಅಲ್ಲ. ಬೀಗಾರೆಂದರೆ ಬೀಗರಿಂದ ಕೂಡಿದ ಊರು. ಒಬ್ಬರು ಮತ್ತೊಬ್ಬರಿಗೆ ಅವಲಂಬನೆ ಇಟ್ಟುಕೊಂಡಿರುವ ಸಾವಯವ ಸಂಪ್ರದಾಯದ ತಲೆಮಾರು ಒಂದು ಕಡೆಯಾದರೆ, ಈ ಕಾಲಘಟ್ಟದಲ್ಲಿಯೂ ಸಮುದಾಯದ ಸಹಕಾರ ತೋರುತ್ತಿದ್ದಾರೆ. ಮುಂದಿನ ತಲೆಮಾರಿನವರು ಮದುವೆ ಸಂಪ್ರದಾಯ ತೊರೆದು ಆಧುನಿಕ ಸಂಕಟದ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ಈ ಮೂರು ತಲೆಮಾರುಗಳ ತೀರ್ಮಾನವನ್ನು ವಾಸ್ತವ ಎಂದು ಒಪ್ಪಿಕೊಳ್ಳಬೇಕು ಎಂದರು.
ರೂಪಾಂತರವಾಗದೇ ಜೀವ ವಿಕಾಸ ಆಗದು. ಬದಲಾದ ಸಾಂಸ್ಕೃತಿಕ ಸಂದರ್ಭಕ್ಕೆ ನಮ್ಮನ್ನು ನಾವು ಹೊಂದಿಕೊಳ್ಳಲಾಗದಿದ್ದರೆ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಬದಲಾದ ಸಂದರ್ಭಕ್ಕೆ ಗ್ರಾಮ ಜಗತ್ತಿನ ಸಾಂಸ್ಕೃತಿಕ ಸಂವಿಧಾನವು ರೂಪಾಂತರಕ್ಕೆ ಒಳಗಾಗಿದೆ. ತೇರು ಕಟ್ಟುವ ಜಾಗದಲ್ಲಿ ಟವರ್ ಬಂದಿದೆ. ಸಂಬಂಧಗಳ ನಡುವೆ ಸಂಪರ್ಕ ನುಸುಳಿದೆ. ಸಾಂಸ್ಕೃತಿಕ ಭೂಮಿ ಹಳ್ಳಿಗಳಲ್ಲಿ ಫಲವತ್ತಾಗಿದೆ. ಅದು ನಮ್ಮ ಸಾಹಿತ್ಯದಲ್ಲಿ ರೂಪಾಂತರವನ್ನು ಸೂಕ್ಷ್ಮವಾಗಿ ಗಮನಿಸುವಂತಾಗಬೇಕು. ಅಂತಹ ಸತ್ವ, ಸ್ವಾದದ ಕಾಯ್ದುಕೊಳ್ಳುವ ರೂಪುರೇಖೆ ನಮ್ಮದಾಗಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅರ್ಥಧಾರಿ ಎಂ.ಎನ್ ಹೆಗಡೆ ಹಳವಳ್ಳಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ಸಾಹಿತ್ಯ ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಪುಸ್ತಕಗಳು ಬೇಕಾದಷ್ಟು ಇದೀಗ ಓದುಗ ವಲಯದಲ್ಲಿ ಲಭ್ಯವಾಗುತ್ತಿದೆ. ಬರೆಯುವವರು ಭಾಷೆಯ ಬಗೆಗೆ ಕಾಳಜಿ, ಎಚ್ಚರವಹಿಸಬೇಕು ಎಂದರು.
ಹರಿಪ್ರಕಾಶ ಕೋಣೆಮನೆ ಅವರ ವಿಸ್ತಾರ ಕೃತಿ ಕುರಿತು ಪತ್ರಕರ್ತ ವಿ.ಜಿ ಗಾಂವ್ಕರ, ದತ್ತಾತ್ರೇಯ ಭಟ್ಟ ಕಣ್ಣಿಪಾಲ, ಗಣಪತಿ ಮೆಣಸುಮನೆ, ನಾರಾಯಣ ಹೆಗಡೆ, ಡಾ.ಡಿ.ಕೆ ಗಾಂವ್ಕರ ವಿಶ್ಲೇಷಿಸಿದರು.
ಸಾಮಾಜಿಕ ಕಾರ್ಯಕರ್ತರಾದ ಎಸ್.ಎನ್ ಗಾಂವ್ಕರ್ ಬೆಳ್ಳಿಪಾಲ, ಗಣಪತಿ ಮಾನಿಗದ್ದೆ ಉಪಸ್ಥಿತರಿದ್ದರು. ಭೂಮಿಕಾ ಭಟ್ಟ ಪ್ರಾರ್ಥಿಸಿದರು. ವಿನಯಶ್ರೀ ಗಾಂವ್ಕರ್ ನಿರ್ವಹಿಸಿದರು. ಶಿವರಾಮ ಗಾಂವ್ಕರ ಸ್ವಾಗತಿಸಿದರು. ಡಾ.ಡಿ.ಕೆ ಗಾಂವ್ಕರ ವಂದಿಸಿದರು.